ನಂದಿನಿ ಮನುಪ್ರಸಾದ್ ನಾಯಕ್
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ. ಈ. ಸಿ. ನಿಂಗರಾಜ್ ಗೌಡ

ಮೈಸೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೈಸೂರಿನ ಹೆಬ್ಬಾಳದ ಹತ್ತೀರ ಇರುವ ಕೆಬಿಲ್ ಸಿಲಿಕಾನ್ ಸಿಟಿ ಬಡಾವಣೆಯ *ಪದ್ಮಶ್ರೀ ಸಾಲುಮರದ ತಿಮ್ಮಕ್ಕ* ಉದ್ಯಾನವನದಲ್ಲಿ ಮೈಸೂರು ಲಯನ್ ಗಾರ್ಡನ್ ಸಿಟಿ ಸಂಸ್ಥೆಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ ಗಾರ್ಡನ್ ಸಿಟಿ ಸಂಸ್ಥೆಯ ಕಾರ್ಯದರ್ಶಿ ಡಾ. ಈ. ಸಿ. ನಿಂಗರಾಜ್ ಗೌಡ ಅವರು ಗಿಡ ನೆಟ್ಟು ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಬೇಕು ಎಂದು ಹೇಳಿದರು.
ಮರಗಳು ಮಾನವಕುಲಕ್ಕೆ ಶುದ್ಧ ಗಾಳಿ, ನೆರಳು ಹಾಗೂ ಪರಿಸರ ಸಮತೋಲನವನ್ನು ನೀಡುತ್ತವೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ನಿರ್ಮಾಣದಿಂದ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿದ್ದು, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಪಾಲನೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. “ಒಬ್ಬ ವ್ಯಕ್ತಿ–ಒಂದು ಗಿಡ” ಎಂಬ ಸಂಕಲ್ಪದೊಂದಿಗೆ ಹಸಿರು ಮೈಸೂರಿನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಡಾ. ಈ.ಸಿ. ನಿಂಗರಾಜ್ ಗೌಡ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲಯನ್ ವಿ.ಪಿ.ಲಕ್ಷ್ಮಿನಾರಾಯಣ್ , ಆಡಳಿತಧಿಕಾರಿಗಳಾದ ಲಯನ್ ಸಿ.ಡಿ. ಕೃಷ್ಣ,
ಉಪಾಧ್ಯಕ್ಷರಾದ ಲಯನ್ ಎನ್. ಶಂಕರ್ , ನಿತೀನ್ ಕುಮರ್ , ರಾಜು, ದಿನೇಶ್ ಮತ್ತು ಪದಾಧಿಕಾರಿಗಳು, ಸದಸ್ಯರು ಹಾಗೂ ಪರಿಸರಾಸಕ್ತರು ಉಪಸ್ಥಿತರಿದ್ದರು.