ನಂದಿನಿ ಮನುಪ್ರಸಾದ್ ನಾಯಕ್
ಅಂಬಾರಿಯಲ್ಲಿ ನಗರ ಪ್ರದಕ್ಷಿಣೆ ಹಾಕಿದ ಶ್ರವಣ ದೋಷವುಳ್ಳ ಮಕ್ಕಳು

ಮೈಸೂರು, ಸೆ.17: ಶ್ರವಣ ದೋಷವುಳ್ಳ ಮಕ್ಕಳು ಗುರುವಾರ ಕೆಎಸ್ಟಿಡಿಸಿಯ ʼಅಂಬಾರಿʼ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ನಗರ ಪ್ರದಕ್ಷಿಣೆ ಹಾಕಿ ಸಂಭ್ರಮಿಸಿದರು.
ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಕಾಂಗ್ರೆಸ್ ಮುಖಂಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರ ಹುಟ್ಟಹಬ್ಬದ ಅಂಗವಾಗಿ ಶ್ರೀರಾಂಪುರ 2ನೇ ಹಂತದಲ್ಲಿರುವ ಮೆರ್ಸಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯ 150 ವಿದ್ಯಾರ್ಥಿಗಳಿಗೆ ಅಂಬಾರಿ ಸಂಚಾರ ಏರ್ಪಡಿಸಲಾಗಿತ್ತು.
ರಾಮಸ್ವಾಮಿ ವೃತ್ತದ ಬಳಿ ಅಂಬಾರಿ ಬಸ್ ಏರಿದ ವಿದ್ಯಾರ್ಥಿಗಳು, ಸಂಸ್ಕೃತ ಪಾಠಶಾಲೆ, ಮೈಸೂರು ಅರಮನೆ, ಹಾರ್ಡಿಂಗ್ ವೃತ್ತ, ಕೆ.ಆರ್.ವೃತ್ತ, ಸರ್ಕಾರಿ ಆಯುರ್ವೇದ ಕಾಲೇಜು, ಹಳೇ ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಭವನ, ಪ್ರಾಚ್ಯವಸ್ತು ಸಂಶೋದನಾಲಯ ಮುಂತಾದ ಪಾರಂಪರಿಕ ತಾಣಗಳನ್ನು ವೀಕ್ಷಿಸಿದರು.
ಮೆರ್ಸಿ ಶಾಲೆಯ ಶಿಕ್ಷಕರು ಸಂಜ್ಞೆ ಭಾಷೆಯಲ್ಲಿ ಕಟ್ಟಡಗಳ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು ಎರಡೂ ಕೈಗಳನ್ನು ಮೇಲೆತ್ತಿ ತಮ್ಮದೇ ಶೈಲಿಯಲ್ಲಿ ಹರ್ಷ ವ್ಯಕ್ತಪಡಿಸಿದ್ದು ಕಂಡು ಬಂತು.
ಮಂದಹಾಸ ಮೂಡಿಸಿದ ತೃಪ್ತಿ: ಎಚ್.ವಿ.ರಾಜೀವ್ ಅವರು ರಾಮಸ್ವಾಮಿ ವೃತ್ತದ ಬಳಿ ಅಂಬಾರಿ ಡಬ್ಬಲ್ ಡೆಕ್ಕರ್ ಬಸ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹೊರ ಜಿಲ್ಲೆಯಿಂದ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬರುವ ವಿದ್ಯಾರ್ಥಿಗಳು ಹತ್ತಾರು ವಾಸ ಮಾಡುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಮೈಸೂರಿನ ಇತಿಹಾಸ ಪರಿಚಯಿಸುವ ಸಲುವಾಗಿ ನಗರ ಪ್ರದಕ್ಷಿಣೆ ಹಾಕಿದ್ದೇವೆ. ಅಂಬಾರಿ ಬಸ್ನಲ್ಲಿ ಸುತ್ತಾಡಿ ಮಕ್ಕಳ ತುಂಬಾ ಖುಷಿಪಟ್ಟರು. ಅವರ ಮುಖದಲ್ಲಿ ಮಂದಹಾಸ ನೋಡಿ ಸಂತೋಷವಾಯಿತು ಎಂದರು.
ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಅಶೋಕ್, ಹುಡ್ಕೋ ಕುಮಾರ್ ಮುಂತಾದವರಿದ್ದರು.