ಎನ್ಇಪಿ-2020 ಹಠಾತ್ ಹೇರಿಕೆಯ ವಿರುದ್ಧ ಪ್ರತಿಭಟನೆ

ಮೈಸೂರು:9 ಡಿಸೆಂಬರ್ 2021

ನಂದಿನಿ

*ಬೇಡಿಕೆಗಳು*

*NEP 2020 ಉಂಟಾಗಿರುವ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿ*

*ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಲಾವಿಭಾಗದಲ್ಲಿ ಎಲೆಕ್ಟಿವ್ ಸಬ್ಜೆಕ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಬಿಡಿ.*

*ಓದುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಇರುವ ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಕಸಿದು ಕೊಳ್ಳಬೇಡಿ.*

*ಪಠ್ಯಪುಸ್ತಕಗಳನ್ನು ಈ ಕೂಡಲೇ ಮುದ್ರಿಸಿ.*

*ಕಾಲೇಜುಗಳಿಗೆ ಅಗತ್ಯವಿರುವ ಬೋಧಕರನ್ನು ಈ ಕೂಡಲೇ ನೇಮಿಸಿ.*

ಈ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅನುಷ್ಠಾನಗೊಳಿಸಿದೆ. ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗು ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ, ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕವಾಗಿ ಮತ್ತು ಅತ್ಯಂತ ತರಾತುರಿಯಲ್ಲಿ ಎನ್ಇಪಿ-2020 ಅನ್ನು ಜಾರಿಗೊಳಿಸಿದೆ.

ಜನತೆಯ, ಶಿಕ್ಷಕ ವರ್ಗದ ಮತ್ತು ವಿದ್ಯಾರ್ಥಿಗಳ ವ್ಯಾಪಕ ವಿರೋಧಕ್ಕೆ ಕಾರಣಗಳೇನು? ಆತುರದ ಹೇರಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದೆ. ನಾಲ್ಕು ವರ್ಷದ ಪದವಿ ಕೋರ್ಸಿನಲ್ಲಿ ಉಂಟಾಗಿರುವ ಗೊಂದಲಗಳು ಇದಕ್ಕೆ ಸಾಕ್ಷಿಯಾಗಿದೆ.
ಈಗಾಗಲೆ ಪ್ರಥಮ ಡಿಗ್ರಿ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ಪದವಿ ಕೋರ್ಸ್ ತರಗತಿಗಳು ಆರಂಭವಾಗಿ, ಇನ್ನೇನು ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯುತ್ತವೆ. ಆದರೆ, ಇಷ್ಟು ದೂರ ಕ್ರಮಿಸಿದರು, ಪಠ್ಯಕ್ರಮ ತಯಾರಾಗಿಲ್ಲ. ಅಂದರೆ, ವಿದ್ಯಾರ್ಥಿಗಳಿಗೆ ಪಠ್ಯಪಸ್ತಕಗಳು ಇಲ್ಲ!!
ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ತರಗತಿಗಳ ಕೊರತೆಯಿಂದಾಗಿ, ತರಗತಿ ಸಮಯ ಆರಂಭವಾದರೂ ಏನು ಮಾಡಬೇಕು ತಿಳಿಯದೇ ಕಳೆದ 2 ತಿಂಗಳಿನಿಂದ ಯಾವುದೇ ಸಮಗ್ರ ರೀತಿಯ ಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ.
ಇದರೊಂದಿಗೆ, ಎನ್ಇಪಿಯ ನಾಲ್ಕು ವರ್ಷದ ಪದವಿ ಕೋರ್ಸ್ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿಭಾಗದ ಮೂಲ ವಿಷಯದ ಜೊತೆಗೆ ಸಿಬಿಸಿಎಸ್ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್) ಅಡಿಯಲ್ಲಿ ಮತ್ತೊಂದು ವಿಭಾಗದ ವಿಷಯ ಓದಬೇಕು ಎಂಬುದನ್ನು ಹೇಳುತ್ತದೆ. ಅಂದರೆ, ವಿಜ್ಞಾನ ಮೂಲ ವಿಷಯ ಇರುವ ವಿದ್ಯಾರ್ಥಿ ತನ್ನ ವಿಷಯಕ್ಕೆ ಸಂಬಂಧವೇ ಇರದ ವಾಣಿಜ್ಯ / ಕಲಾ ವಿಭಾಗದ ಒಂದು ವಿಷಯ ಓದಲೇಬೇಕು. ಇತ್ತೀಚೆಗೆ ಕಲಾ ವಿಭಾಗದ ವಿದ್ಯಾರ್ಥಿಗಳು ಕಡ್ಡಾಯವಾಗಿ ವಿಜ್ಞಾನ ವಿಭಾಗದ ಒಂದು ವಿಷಯ ಓದಲೇಬೇಕು ಎಂಬ ಹೇರಿಕೆಯ ಸುತ್ತೋಲೆಯನ್ನು ಖಂಡಿಸಿ ನಡೆದ ಚಳುವಳಿ ನೋಡಿದ್ದೇವೆ. ಅಂದರೆ, ಓದುವ, ಅಭ್ಯಸಿಸುವ ಪ್ರಕ್ರಿಯೆ ವೈಯುಕ್ತಿಕ ಆಯ್ಕೆಯ ಬದಲಾಗಿ, ಹೇರಿಕೆಯಾಗಿ ಎನ್ಇಪಿಯ ನಾಲ್ಕು ವರ್ಷದ ಪದವಿ ಕೋರ್ಸಿನಲ್ಲಿ ಮಾರ್ಪಟ್ಟಿದೆ.
ಯಾವುದೇ ನೂತನ ಶಿಕ್ಷಣ ನೀತಿ ಜಾರಿ ಆದಾಗ, ಅದರ ಆಧಾರದ ಮೇಲೆ ಶಿಕ್ಷಣ ತಜ್ಞರು, ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ, ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಟ ಒಂದೆರಡು ವರ್ಷಗಳು ಬೇಕಾಗುತ್ತದೆ. ಆದರೆ, ಎನ್ಇಪಿ-2020 ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ತಾನೇ ಮೊದಲು ಅನುಷ್ಠಾನಕ್ಕೆ ತಂದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯ ಸರ್ಕಾರವು, ಕೇವಲ 15-20 ದಿನಗಳ ತಯಾರಿಯಲ್ಲಿ ನೀತಿಯನ್ನು ಜಾರಿ ಮಾಡಿತು. ಪೂರ್ವ ತಯಾರಿ ಇಲ್ಲದೆ, ಸರ್ಕಾರದ ಇಂತಹ ಅಡ್ಡಾದಿಡ್ಡಿ ಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತದೆ.

ಇದಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣ ಶೇ.50 ರಷ್ಟು ಏರಿಕೆ ಆಗಿದೆ. ಅಂದರೆ, ಕಳೆದ ವರ್ಷಕ್ಕಿಂತ ಸುಮಾರು ಎರಡುವರೆ ಲಕ್ಷದಷ್ಟು ಅಧಿಕ ವಿದ್ಯಾರ್ಥಿಗಳು ಡಿಗ್ರಿ ಪ್ರವೇಶಾತಿಗೆ ಅರ್ಹರಾಗಿದ್ದಾರೆ. ಈ ಸಂದರ್ಭದಲ್ಲಿ, ಸರ್ಕಾರವು 50% ಅಧಿಕ ಉಪನ್ಯಾಸಕರನ್ನು ನೇಮಕ ಮಾಡಬೇಕು, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು, ತರಗತಿಗಳ ಸಂಖ್ಯೆಯನ್ನು ಏರಿಸಬೇಕು, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಖಾಲಿಯಿರುವ 70% ನಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರಿಸುಮಾರು 14 ಸಾವಿರ ಅಥಿತಿ ಉಪನ್ಯಾಸಕರನ್ನು ಖಾಯಂ ಮಾಡಬೇಕು. ಆದರೆ, ಸರ್ಕಾರ ಇದರ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ. ಬದಲಿಗೆ, ಇರುವ ಶಿಕ್ಷಕರ ಹುದ್ದೆಗು ಸಹ ಕೊಡಲಿ ಏಟು ನೀಡುವ ಯೋಚನೆ ನಡೆಸಿದೆ.

ಹೀಗಾಗಿ ರಾಜ್ಯದಲ್ಲಿ ತರಾತುರಿಯಲ್ಲಿ ಎನ್ಇಪಿ-2020ಯ ಹೇರಿಕೆಯನ್ನು ವಿರೋಧಿಸಿ ,ನಾಲ್ಕು ವರ್ಷದ ಪದವಿ ಧಿಡೀರ್ ಹೇರಿಕೆ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಆಂದೋಲನ ಪ್ರಬಲ ಹೋರಾಟಗಳನ್ನು ಬೆಳೆಸುವ ಹಿನ್ನೆಲೆ ಎಐಡಿಎಸ್ಓ ಬೃಹತ್ ಹೋರಾಟವನ್ನು ಸಂಘಟಿಸಲಾಯಿತು. ಈ ಹೋರಾಟದಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಕಾರ್ಯದರ್ಶಿಗಳಾದ ಚಂದ್ರಕಲಾ ಉಪಾಧ್ಯಕ್ಷರಾದ ಆಸಿಯಾ ಬೇಗಂ, ಕಾರ್ಯ ಕಾರಿ ಸಮಿತಿಯ ಸದಸ್ಯರಾದ ನಿತಿನ್, ಸ್ವಾತಿ, ಚೆಲುವನ್, ಮೈಸೂರು ವಿವಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಸದಸ್ಯರಾದ ಅಭಿಶೇಕ್ ಆಕಾಶ್ ಸಾಗರ್, ಸುರೇಂದ್ರ, ಸಚಿನ್ ಪವನ್, ಯಶವಂತ್, ಯೋಗೇಶ್, ಆಕಾಶ್,ಅನಿಲ್ ಅವಿನಾಶ್ ಬಸವ ಚಂದ್ರು ಚಂದು, ದರ್ಶನ್, ಮಹದೇವ್ ಮಹೇಶ್ ಮನೋಜ್, ನಾಗೇಂದ್ರ, ಪುನೀತ್, ಸಂಜಯ್ ಭೈರವ್,ಶರತ್ ಸುರೇಶ್ ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *