ನಂದಿನಿ ಮನುಪ್ರಸಾದ್ ನಾಯಕ್
“ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ” : ಡಾ.ಈ.ಸಿ.ನಿಂಗರಾಜ್ ಗೌಡ.

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ “ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಈಗಿನ ವಿದ್ಯಾರ್ಥಿಗಳ ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದರು.
ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್ ವತಿಯಿಂದ SSLC ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನೂ ಶಾರದದೇವಿನಗರದಲ್ಲಿ ಇರುವ ರೋಟರಿ ACME ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಈ.ಸಿ.ನಿಂಗರಾಜ್ ಗೌಡ ರವರು ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆಗೆ ನಿಮಗೆ ಇಷ್ಟವಾಗುವ ಕನಿಷ್ಥ ಇಬ್ಬರು ಮಹಾಪುರುಷರ ಜೀವನ ಚರಿತ್ರೆಯನ್ನು ಓದಬೇಕು. ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಷ್, ಮಹಾತ್ಮ ಗಾಂಧಿಜಿ, ಡಾ.ಬಿ.ಆರ್. ಅಂಬೇಡ್ಕರ್, ಸರ್.ಎಂ.ವಿಶ್ವೇಶರಯ್ಯ, ಡಾ.ಎಸ್. ರಾಧಕೃಷ್ಣನ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಕುವೆಂಪು, ಬೇಂದ್ರೆ, ಬಸವಣ್ಣ ಇನ್ನೂ ಮುಂತಾದವರ ಜೀವನವನ್ನೂ ತಿಳಿದುಕೊಳ್ಳುವ ಮೂಲಕ ಅವರ ತತ್ತ್ವ ಆದರ್ಶಗಳನ್ನೂ ನಾವೇಲ್ಲರೂ ಪಾಲಿಸಬೇಕೆಂದರು.
ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕೆಂದರು.
ಈ ಪುರಸ್ಕಾರವು ಕೇವಲ ಬಹುಮಾನವಲ್ಲ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಹಾಗೂ ಮತ್ತಷ್ಟು ಸಾಧನೆಗೆ ಸ್ಪೂರ್ತಿ ನೀಡುವ ಒಂದು ಸಾಮಾಜಿಕ ಜವಾಬ್ದಾರಿಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸಮಾನ ಅವಕಾಶ ಒದಗಿಸುವ ಮೂಲಕ ಜ್ಞಾನಸಮೃದ್ಧ ಸಮಾಜ ನಿರ್ಮಾಣವೇ ಇದರ ಪ್ರಮುಖ ಗುರಿಯಾಗಿದೆ ಎಂದರು.
“ಪ್ರತಿಭೆಗೆ ಪ್ರೋತ್ಸಾಹ – ಶಿಕ್ಷಣಕ್ಕೆ ಗೌರವ” ಎಂಬ ಧ್ಯೇಯದೊಂದಿಗೆ ನಡೆಯುವ ಈ ಕಾರ್ಯಕ್ರಮವು ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನು ಹೆಚ್ಚಿಸುವ ಮಹತ್ತರ ಪ್ರಯತ್ನವಾಗಿದೆ.
“ಪ್ರತಿಭೆ ಗುರುತಾದಾಗ ಸಾಧನೆಗೆ ಹೊಸ ದಾರಿ ತೆರೆದುಕೊಳ್ಳುತ್ತದೆ.” ಎಂದರು.
ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮತ್ತು ಪ್ರತಿಭೆ ಎರಡೂ ಅವಿಭಾಜ್ಯ ಅಂಶಗಳು. ಆದ್ದರಿಂದ ಪ್ರತಿಭಾವಂತರ ಸಾಧನೆಯನ್ನು ಗುರುತಿಸಿ ಅಭಿನಂದಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದ ಮೂಲಕ ಸಾಧಕರ ಪರಿಶ್ರಮ, ನಿಷ್ಠೆ ಮತ್ತು ಸಾಮರ್ಥ್ಯಕ್ಕೆ ಗೌರವ ಸಲ್ಲಿಸಲಾಗುತ್ತದೆ.
“ಇಂದಿನ ಪ್ರತಿಭಾವಂತರೇ ನಾಳಿನ ದೇಶದ ಭವಿಷ್ಯ” ಎಂಬ ಸಂದೇಶದೊಂದಿಗೆ ಈ ಪುರಸ್ಕಾರ ಕಾರ್ಯಕ್ರಮ ಸಮಾಜದಲ್ಲಿ ಜ್ಞಾನ, ಸಂಸ್ಕಾರ ಮತ್ತು ಸಾಧನೆಯ ಮೌಲ್ಯಗಳನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡರವರು ತಿಳಿಸಿದರು.
ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್ ವತಿಯಿಂದ ಹತ್ತನೆಯ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ರೋಟರಿ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.
ರೋಟರಿ ಮೈಸೂರು ಸೌತ್ಈಸ್ಟ್ ಅಧ್ಯಕ್ಷರಾದ ರೋ.ಮುರಳೀಧರ ವೈ ವಿ, ಕಾರ್ಯದರ್ಶಿ ರೋ. ಸುರೇಶ್ , ರೋ ಡಾ. ಈ.ಸಿ. ನಿಂಗರಾಜ್ ಗೌಡ, ರೋ.ಎಂ.ಮೋಹನ್, ರೋ.ವಾಸುದೇವನ್, ರೋ.ಗೋವರ್ಧನ್ ಯಾದವ್, ರೋ.ಎಂ.ಆರ್.ಸಾಲಿಯಾನ್, ರೋ.ಜಿ.ವಿ.ಪಿಂಟೋ, ರೋ.ಮುರಳಿ, ರೋ.ಗಣವಂತ, ರೋ.ರವೀಂದ್ರ ಮತ್ತು ಕ್ಲಬ್ ನ ಸದಸ್ಯರು ಹಾಗೂ ACME ಶಾಲೆಯ ಚೇರ್ಮನ್ ಡಾ.ಶರತ್ ಕುಮಾರ್, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮತ್ತು ಮಕ್ಕಳ ಪೋಷಕರು ಈ ಅಭಿನಂದನಾ ಸಭೆಯಲ್ಲಿ ಉಪಸ್ಥಿತರಿದ್ದರು.