ಮೈಸೂರು:14 ಜೂನ್ 2022
ನಂದಿನಿ ಮೈಸೂರು
ನೇರ ಪಾವತಿ ಮತ್ತು ಹೆಚ್ಚುವರಿ ನೇಮಕವಾಗಿರುವ ಪೌರ ಕಾರ್ಮಿಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಈವರೆಗೆ ೪೦ ರಿಂದ ೫೦ ಮಂದಿ ಮೃತಪಟ್ಟಿದ್ದಾರೆ. ಆದರೆ ಇವರ ಕುಟುಂಬದವರಿಗೆ ಮೈಸೂರು ಮಹಾನಗರ ಪಾಲಿಕೆ ಯಾವುದೇ ಪರಿಹಾರವನ್ನಾಗಲೀ, ಅನುಕಂಪದ ಉದ್ಯೋಗವನ್ನಾಗಲೀ ನೀಡಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಒಕ್ಕೂಟ ಬೇಸರ ವ್ಯಕ್ತಪಡಿಸಿದೆ.
ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಎನ್. ರಾಜ, ಆದ್ದರಿಂದ ಮೃತರ ಕುಟುಂಬದವರಿಗೆ ತಲಾ ಹತ್ತು ಲಕ್ಷ ಪರಿಹಾರ ಹಾಗೂ ಅವರ ಕುಟುಂಬದ ವಾರಸುದಾರರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಜೊತೆಗೆ ನೇರ ಪಾವತಿ ಮತ್ತು ಹೆಚ್ಚುವರಿಯಾಗಿ ನೇಮಕವಾದ ಪೌರ ಕಾರ್ಮಿಕರಿಗೆ ಜ್ಞಾನಪನಾ ಪತ್ರವನ್ನೂ ನೀಡಬೇಕು. ಬೆಳಗ್ಗಿನ ಉಪಹಾರ ಭತ್ಯೆಯನ್ನು ಸರ್ಕಾರದ ಆದೇಶದಂತೆ ೨೦ ರೂ.ಗಳಿಂದ ೩೫ ರೂ.,ಗಳಿಗೆ ಹೆಚ್ಚಿಸಬೇಕು.
ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ನೇರ ಪವಾತಿ ಹಾಗೂ ಹೆಚ್ಚುವರಿ ಪೌರ ಕಾರ್ಮಿಕರ ಪ್ರತಿ ತಿಂಗಳ ವೇತನ ಪಟ್ಟಿ ನೀಡಬೇಕು. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ರೀತಿಯಲ್ಲಿ ಅಂಬೇಡ್ಕರ್ ಜಯಂತಿಯಂದು ಎಲ್ಲ ಪೌರ ಕಾರ್ಮಿಕರಿಗೆ ಹತ್ತು ಸಾವಿರ ರೂ., ನೀಡಬೇಕು ಎಂದು ಆಗ್ರಹಿಸಿದರು.
ಜೊತೆಗೆ, ಈ ಕುರಿತು ಒಂದು ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಲಾಗುವುದೆಂದರು.
ಇತರೆ ಪದಾಧಿಕಾರಿಗಳಾದ ಎಂ.ವಿ. ವೆಂಕಟೇಶ್, ಸಿ.ಎಂ. ರಾಮಯ್ಯ, ಮಂಚಯ್ಯ, ರಾಮಾಂಜನೇಯ ಇದ್ದರು.