ಮೈಸೂರು:14 ಜೂನ್ 2022
ನಂದಿನಿ ಮೈಸೂರು
ಈಗ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದು, ಮಕ್ಕಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. ಹಾಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರಿನ ಒಂದೇ ಶಾಲೆಯಲ್ಲಿ 31 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ತರಗತಿಯಲ್ಲಿ ಒಂದು ಮಗುವಿಗೆ ಪಾಸಿಟಿವ್ ಬಂದಾಗ ಇತರ ಮಕ್ಕಳಿಗೂ ಹರಡುತ್ತದೆ. ಆಗ ತರಗತಿಗೆ ಅಥವಾ ಶಾಲೆಗೆ ರಜೆ ನೀಡಲಾಗುತ್ತದೆ. ಪಾಸಿಟಿವ್ ಬಂದ ಮಾತ್ರಕ್ಕೆ ಆತಂಕಪಡಬೇಕಿಲ್ಲ ಎಂದರು.
ಜಿಲ್ಲೆಯಲ್ಲಿ ಎರಡ್ಮೂರು ವಾರಗಳಿಂದ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ. ೧ರಷ್ಟಿರುವುದರಿಂದ ಆತಂಕಪಡುವ ಅಗತ್ಯವಿಲ್ಲ. ಸಾವು-ನೋವು ಇಲ್ಲ. ಈಗಾಗಲೇ ಪ್ರತಿದಿನ ೫೦೦ಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆ ಹೆಚ್ಚಿಸುವ ಅಗತ್ಯವೂ ಬರುವುದಿಲ್ಲ ಎಂದು ವಿವರಿಸಿದರು.
೧೨ ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಬಂದಿದೆ. ಲಸಿಕೆ ಹಾಕಿಸಲು ಪೋಷಕರು ಹೆಚ್ಚಿನ ಗಮನಹರಿಸಬೇಕು. ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರದಿಂದ ಮಾರ್ಗಸೂಚಿಯೂ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಜನಜಂಗುಳಿ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ನಾಗರಿಕರು ಮಾಸ್ಕ್ ಧರಿಸಬೇಕು. ಹಾಗೇ ಕೊರೊನಾ ನಿಯಾಮವಳಿ ಪಾಲಿಸಬೇಕು. ಆರೋಗ್ಯ ಕಡೆ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಹಾಜರಿದ್ದರು.