ಮತದಾನ ಜಾಗೃತಿಗಾಗಿ ಸಿಂಧುವಳ್ಳಿನಿಂದ ಕುಮಾರಬೀಡುವರಗೆ 100 ಕಿ.ಮೀ. ಬೈಕ್ ಜಾಥಾ

ನಂದಿನಿ ಮೈಸೂರು

ಮತದಾನ ಜಾಗೃತಿಗಾಗಿ 100 ಕಿ.ಮೀ. ಬೈಕ್ ಜಾಥಾ

ಮೈಸೂರು – ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸ್ವೀಪ್ ಚಟುವಟಿಕೆಯಡಿ ಮೈಸೂರು ತಾಲ್ಲೂಕು ಪಂಚಾಯತ್ ವತಿಯಿಂದ ತಾಲ್ಲೂಕಿನ ಜಯಪುರ ಹೋಬಳಿ ವ್ಯಾಪ್ತಿಗೊಳಪಡುವ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್.ಡಿ.ಗಿರೀಶ್ ಅವರ ನೇತೃತ್ವದಲ್ಲಿ 100 ಕಿ.ಮೀ. ಬೈಕ್ ಜಾಥಾ ನಡೆಸುವ ಮೂಲಕ ಮತದಾನ ಕುರಿತು ಬುಧವಾರ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್.ಡಿ.ಗಿರೀಶ್ ಅವರು ಮಾತನಾಡಿ, ವಿಧಾನಸಭಾ ಸಾರ್ವಜನಿಕ ಚುನಾವಣೆಯ ದಿನವಾದ ಮೇ.10 ರಂದು ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಸಂವಿಧಾನವು ನಮಗೆ ನೀಡಿರುವ ಹಕ್ಕನ್ನು ವಿವೇಚನೆಯಿಂದ ಚಲಾಯಿಸಬೇಕು. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ನೈತಿಕವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ನೆರಳು, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಪ್ರತೀ ಮತಗಟ್ಟೆಯಲ್ಲಿ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೈಕ್ ಜಾಥವು ಸಿಂಧೂವಳ್ಳಿ ಗ್ರಾಮ ಪಂಚಾಯಿತಿಯಿಂದ ಪ್ರಾರಂಭಗೊಂಡು ಉದ್ಬೂರು, ದೂರ, ಮಾರ್ಬಳ್ಳಿ, ಹಾರೋಹಳ್ಳಿ (ಜ), ಜಯಪುರ, ಧನಗಳ್ಳಿ, ಗೋಪಾಲಪುರ, ಬೀರಿಹುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸಾಗಿ ಕುಮಾರಬೀಡು ಗ್ರಾಮದಲ್ಲಿ ಅಂತ್ಯಗೊಂಡಿತು.

ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ್, ಜ್ಯೋತಿ, ಕುಳ್ಳೇಗೌಡ, ಬಸವಣ್ಣ, ನರಹರಿ, ಡಿ.ಸಿ.ಶಿವಣ್ಣ, ರಾಮದಾಸ್, ಕುಮಾರ್, ಆನಂದ್ ಸೇರಿದಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಎಸ್.ಡಿ.ಎ, ಡಿಇಓ, ನೀರುಗಂಟಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *