ನಂದಿನಿ ಮೈಸೂರು
*ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ದಿಢೀರ್ ಭೇಟಿ*
ಮೈಸೂರು, ಜು.13: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಗುರುವಾರ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಶಾಲೆಯ ಮೂಲಭೂತ ಸೌಕರ್ಯವನ್ನು ಪರಿಶೀಲಿಸಿದರು.
ಈ ವೇಳೆ ಶಾಲೆಯ ಗ್ರಂಥಾಲಯ, ವಿಜ್ಙಾನ ಪ್ರಯೋಗಾಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ವಿದ್ಯಾರ್ಥಿನಿಲಯದ ಶೌಚಾಯಲವನ್ನು ಪರಿಶೀಲಿಸಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಬಳಿಕ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಸಚಿವರು, ಜನಸಂಖ್ಯೆ ಸ್ಟೋಟದಿಂದ ಆರೋಗ್ಯ, ಶಿಕ್ಷಣ, ನಿರುದ್ಯೋಗ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮವನ್ನು ವಿವರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ, ವಿದ್ಯಾರ್ಥಿಳಿಗೆ ಕಲಿಕೆಯ ಜೊತೆಗೆ ಬದುಕನ್ನು ಕಟ್ಟಿಕೊಳ್ಳುವ ಕೌಶಲ್ಯವನ್ನು ತಿಳಿಸಿಕೊಡಬೇಕು. ಕಳೆದ ಭಾರಿಗಿಂತ ಈ ಸಾಲಿನಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವಂತೆ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಸೂಚಿಸಿದರು.
ಅಡುಗೆ ಕೋಣೆಗೆ ಭೇಟಿ ನೀಡಿ, ಅಡುಗೆ ಸಿಬ್ಬಂದಿಯು ಸ್ಚಚ್ಛವಾಗಿರಬೇಕು. ಕೊಣೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿ, ಹುರುಳಿಕಾಳಿನ ಪಲ್ಯವನ್ನು ಸವಿದರು.
ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪೌಷ್ಠಿಕ ಕೈತೋಟ ನಿರ್ಮಿಸಿ, ವಿದ್ಯಾರ್ಥಿನಿಲಯಕ್ಕೆ ಅಗತ್ಯವಿರುವ ಸೊಪ್ಪು, ತರಕಾರಿಗಳನ್ನು ಬೆಳೆಯಬೇಕು. ಈ ಮೂಲಕ ಮಕ್ಕಳಿಗೆ ಪ್ರತಿದಿನವೂ ಪೌಷ್ಠಿಕಾಂಶಯುತ ಆಹಾರವನ್ನು ನೀಡಲು ಕ್ರಮವಹಿಸಬೇಕು ಎಂದರು.
ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುವು. ಕಲಿಕೆಯಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ಪ್ರತಿಯೊಬ್ಬರೂ ಶಿಕ್ಷಣದಿಂದ ಜ್ಞಾನವಂತರಾಗಿ ಸಮಾಜದಲ್ಲಿ ಉತ್ತಮವಾದ ಜೀವನ ನಡೆಸಬೇಕು ಎಂದು ಸಚಿವರು ತಿಳಿಸಿದರು.