ಆಲೂರರು ಕರ್ನಾಟಕದ ಸಾಕ್ಷಿ ಪ್ರಜ್ಞೆ: ಸಾಹಿತಿ ಬನ್ನೂರು ರಾಜು

ನಂದಿನಿ ‌ಮೈಸೂರು

ಆಲೂರರು ಕರ್ನಾಟಕದ ಸಾಕ್ಷಿ ಪ್ರಜ್ಞೆ: ಸಾಹಿತಿ ಬನ್ನೂರು ರಾಜು

ಮೈಸೂರು: ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣ ಚಳವಳಿಯ ಮೂಲಕ ಒಗ್ಗೂಡಿಸಿದ ಪ್ರಮುಖರಲ್ಲಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಮೊದಲಿಗರಾಗಿದ್ದು ಇವತ್ತಿಗೂ ಕನ್ನಡದ ಅಸ್ಮಿತೆಯಾಗಿ ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿದ್ದಾರೆಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಡಿ.ಬನುಮಯ್ಯ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಹಾಗೂ ಡಿ.ಬನುಮಯ್ಯ ಬಾಲಕಿಯರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಆಲೂರು ವೆಂಕಟರಾಯರ ಜನ್ಮದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬಾಲಕರಾಗಿದ್ದಾಗಲೇ ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಆಲೂರು ವೆಂಕಟರಾಯರು ಅಚ್ಚ ಕನ್ನಡ ನೆಲವಾದ ಉತ್ತರ ಕರ್ನಾಟಕದ ಭಾಗವನ್ನು ದಕ್ಷಿಣ ಮರಾಠ ದೇಶ ಎಂದು ಮರಾಠಿಗರು ಕರೆಯುತ್ತಿದ್ದ ಕಾಲಘಟ್ಟದಲ್ಲಿ ಧಾರವಾಡದಲ್ಲಿ ಮರಾಠಿ ಬಾಹುಳ್ಯದ ನಡುವೆಯೇ ಕನ್ನಡದ ಕಿಚ್ಚು ಹೊತ್ತಿಸಿ ಕನ್ನಡ ನಾಡು, ನುಡಿಯ ಬಗೆಗೆ ಕೆಚ್ಚಿನಿಂದ ಹೋರಾಟ ಆರಂಭಿಸಿದವರೆಂದರು.

ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿ ಸುವುದು ಹಾಗೂ ಅಂದಿನ ವಿಶಾಲ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವುದೆರಡೂ ಆಲೂರು
ವೆಂಕಟರಾಯರ ಕನಸಾಗಿತ್ತು. ಅದಲ್ಲಿ ಅವರು ಬದುಕಿದ್ದಾಗಲೇ ನಾಡು ಏಕೀಕರಣಗೊಂಡ ಆಸೆ ಈಡೇರಿದರೆ, ಕರ್ನಾಟಕ ಹೆಸರಿನ ರಾಜ್ಯದ ಕನಸು ಮಾತ್ರ ಅವರು ಬದುಕಿದ್ದಾಗಲೇ ಈಡೇರಲಿಲ್ಲ, ಕಾರಣ ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದರು ಎಂದರು. ಒಂದು ಕಣ್ಣಲ್ಲಿ ಕನ್ನಡ ಅಭಿಮಾನ ಮತ್ತೊಂದು ಕಣ್ಣಲ್ಲಿ ದೇಶಾಭಿಮಾನ ತುಂಬಿಕೊಂಡು ಅಪ್ರತಿಮ ಕನ್ನಡ ಸೇನಾನಿಯಾಗಿ, ಅಸಾಧಾರಣ ಸ್ವಾತಂತ್ರ್ಯ ಹೋರಾಟಗಾರರಾಗಿ ಕನ್ನಡಿಗರಲ್ಲಿ ಕನ್ನಡ ಮತ್ತು ಕರ್ನಾಟಕ ಏಕೀಕರಣದ ಪ್ರಜ್ಞೆ ಮೂಡಿಸಿದ ಕನ್ನಡ ಕುಲೋದ್ಧಾರಕರು ಆಲೂರರು. ಇಂತಹ ಅಪ್ರತಿಮ ಕನ್ನಡ ಚೇತನದ ಆತ್ಮಕ್ಕೆ ಶಾಂತಿ ದೊರೆಯಬೇಕೆಂದರೆ ಅವರು ಪರಿಶ್ರಮದ ಹೋರಾಟದಿಂದ ಒಂದುಗೂಡಿಸಿ ನಿರ್ಮಿಸಿರುವ ಕರ್ನಾಟಕದ ಪುರೋಭಿವೃದ್ಧಿ ಹಾಗೂ ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗರೂ ಕಂಕಣ ಬದ್ಧರಾಗಬೇಕು. ಕರ್ನಾಟಕತ್ವ ದೊಡನೆ ಎಲ್ಲರಲ್ಲೂ ಕನ್ನಡ ಪ್ರಜ್ಞೆ ಮೂಡಿಸಿ ಕನ್ನಡದ ಅಭಿಮಾನದ ಬೀಜ ಬಿತ್ತಿ ಬೆಳೆಯುವ ಸದಾಶಯದಿಂದ ಇಡೀ ಕರ್ನಾಟಕವನ್ನು ಸುತ್ತಿ ಅಲೆದಾಡಿ ಆಲೂರರು ‘ಕರ್ನಾಟಕ ಗತವೈಭವ’ ಎಂಬ ಮಹತ್ವದ ಕೃತಿಯೊಂದನ್ನು ಬರೆದು ನಾಡಿಗೆ ನೀಡಿದ್ದಾರೆ. ಕರ್ನಾಟಕಕ್ಕೊಂದು ಚಿರ ದಿಕ್ಸೂಚಿಯಂತಿರುವ ಆಚಾರ್ಯ ಕೃತಿಯಾದ ಇದನ್ನು ಪ್ರತಿಯೊಬ್ಬರೂ ಓದಬೇಕು. ಅಷ್ಟೇ ಅಲ್ಲ, ನಾಡಿನ ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲೂ ಇದು ಪಠ್ಯವಾಗಬೇಕು. ಈ ದಿಸೆಯಲ್ಲಿ ನಮ್ಮ ಸರ್ಕಾರವು ಕನ್ನಡದ ಕಾಳಜಿಯಿಂದ ಕಾರ್ಯೋನ್ಮುಖವಾಗುವುದರ ಜೊತೆಗೆ ಇದನ್ನು ಮರು ಮುದ್ರಣಗೊಳಿಸಿ ಪ್ರತಿಯೊಬ್ಬ ಕನ್ನಡಿಗನ ಕೈಗೆಟುಕುವಂತೆ ಮಾಡಬೇಕೆಂದು ಹೇಳಿದರು.

ಇದಕ್ಕೂ ಮುನ್ನ ಆಲೂರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯಪತ್ರಕರ್ತ ದೊಡ್ಡನಹುಂಡಿರಾಜಣ್ಣನವರು, ಪುರೋಹಿತರೆಂದರೆ ಪುರದ ಹಿತ ಬಯಸುವವರು. ಅಂದರೆ ಒಂದು ಊರಿನ ಹಿತ ರಕ್ಷಕರು. ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರೋ
ಇಡೀ ನಾಡಿನ ಸಂರಕ್ಷಕರು. ಕನ್ನಡದ ಕುಲೋದ್ಧಾರಕರು. ಆದ್ದರಿಂದಲೇ ಅವರು ಕನ್ನಡ ಕುಲ ಪುರೋಹಿತರೆಂದು ಕನ್ನಡ ನಾಡಿನಾದ್ಯಂತ ಹೆಸರಾಗಿರುವುದೆಂದ ಅವರು ಮಾತೃಭಾಷಾಭಿಮಾನದ ವಿಷಯದಲ್ಲಿ ಪ್ರತಿಯೊಬ್ಬರಿಗೂ ಆಲೂರರು ಮಾದರಿ ಎಂದು ಹೇಳಿದರು. ಮುಖ್ಯ ಶಿಕ್ಷಕ ಎಚ್. ಎಸ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಹಾಗೂ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಪ್ರಸ್ತುತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಎಸ್.ಲಕ್ಷ್ಮೀ ಹಾಗೂ ಸಿಂಧುಮೇನ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ವಿದ್ಯಾರ್ಥಿನಿಯರಾದ 10ನೇ ತರಗತಿಯ ಜಯಲಕ್ಷ್ಮಿ,,9 ನೇ ತರಗತಿಯ ಆರ್. ಪ್ರೀತಿ, ಹಾಗೂ 8ನೇ ತರಗತಿಯ ಸ್ಪೂರ್ತಿ ಅವರುಗಳು ಸಾಂಸ್ಕೃತಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ವಿವಿಧ ಬಗೆಯ
ಏಕಪಾತ್ರಾಭಿನಯ ಮಾಡಿ ನೆರೆದಿದ್ದವರ ಮೆಚ್ಚುಗೆ ಗಳಿಸಿ ಬಹುಮಾನವನ್ನು ಪಡೆದರು.

ವಿದ್ಯಾರ್ಥಿನಿಯರಾದ ಟಿ.ಎನ್.ಅಮೃತ ಮತ್ತು ಎಸ್.ಶ್ವೇತಾ ಅವರ ಪ್ರಾರ್ಥನೆಯೊಡನೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ.ಎಂ. ಮಂಗಳಗೌರಮ್ಮ ಎಲ್ಲರನ್ನೂ ಸ್ವಾಗತಿಸಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಎಸ್. ಸತೀಶ್ ವಂದನಾರ್ಪಣೆ ಮಾಡಿದರು.ಶಿಕ್ಷಕರಾದ ಎಚ್. ಪಿ. ಹರೀಶ್, ಮಂಗಳಗೌರಮ್ಮ, ಶ್ರೀನಿವಾಸಮೂರ್ತಿ, ಸತೀಶ್, ಚೇತನ್, ಶಿವು ಮುಂತಾದವರು ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಶಿಕ್ಷಕ ಶ್ರೀನಿವಾಸಮೂರ್ತಿಯವರು ಅಚ್ಚುಕಟ್ಟಾಗಿ ನಿರೂಪಿಸಿದರು.

Leave a Reply

Your email address will not be published. Required fields are marked *