ಮೈಸೂರು:10 ಅಕ್ಟೋಬರ್ 2021
ನ@ದಿನಿ
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ನಾಲ್ಕನೇ ದಿನವಾದ ಭಾನುವಾರದಂದು ಬೆಂಗಳೂರಿನ ಸವಿಗಾನಲಹರಿ ಸುಗಮ ಸಂಗೀತ ತಂಡದವರು ಪ್ರಸ್ತುತ ಪಡಿಸಿದ ಗೀತೆಗಳು ಸಂಗೀತ ಪ್ರಿಯರ ಮನಗೆದ್ದಿತು.
ಬಾಲಗಾಯಕಿ ತನ್ವಿ ಜಿ.ಗೌಡ ಅವರು ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ ‘ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಸರಿಗಮಪ ಸಾವಿರದ ಶರಣು’ ಗೀತೆಯು ಪ್ರೇಕ್ಷಕರೆಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡಿತು. ಬಳಿಕ ‘ಸೊಜುಗಾದ ಸೂಜಿಮಲ್ಲಿಗೆ, ಬೆಟ್ಟ ಬಿಟ್ಟಿಳಿಯುತ್ತಾ ಬಂದಾಳೆ ಚಾಮುಂಡಿ ಜಾನಪದ ಭಕ್ತಿಗೀತೆ, ಪಾಯಿ ಪಾಯಿಸುವೇ ಮಹಿಷ ಮರ್ಧಿನಿ’ ಇಂಪಾದ ಗೀತೆಗಳು ಸಭಿಕರೆಲ್ಲರನ್ನೂ ಭಕ್ತಿಯ ಕಡಲಲ್ಲಿ ತೇಲಿಸಿತು.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಟಿ.ರಾಜಾರಾಮ್ ಅವರ ಸಿರಿಕಂಠದಲ್ಲಿ ಮೂಡಿಬಂದ ನಾವಾಡುವ ನುಡಿಯೇ ಕನ್ನಡ ನುಡಿ, ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ, ತರವಲ್ಲ ತಗಿ ನಿನ್ನ ತಂಬೂರಿ ಗೀತೆಗೆ ಪ್ರೇಕ್ಷಕರು ತಲೆದೂಗಿದರು.
ಬಾಲ ಗಾಯಕಿ ತನ್ವಿ ಜಿ.ಗೌಡ ಅವರ ಶುಶ್ರಾವ್ಯವಾದ ಗಾಯನಕ್ಕೆ ಮೆಚ್ಚಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಹಾಗೂ ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಅವರು ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.
ತಂಡದಲ್ಲಿ ಗಾಯಕಿ ಸ್ವಪ್ನ ಮಂಜು, ಕೀ ಬೋರ್ಡ್‌ನಲ್ಲಿ ಸೃಷ್ಟಿ ಉಮೇಶ್, ಟಿ.ಆರ್.ರಾಜ್ ಕಿರಣ್, ತಬಲಾದಲ್ಲಿ
ಟಿ.ಆರ್.ರವಿಕಿರಣ್, ರಿದಂ ಪ್ಯಾಡ್‌ನಲ್ಲಿ ಸೃಷ್ಟಿ ಶ್ರೀನಿವಾಸ್ ಇದ್ದರು.
ಕಾರ್ಯಕ್ರಮದಲ್ಲಿ ಅರಣ್ಯ ವಸತಿ ಹಾಗೂ ವಿಹಾರಧಾಮ ಸಂಸ್ಥೆಯ ಅಧ್ಯಕ್ಷ ಅಪ್ಪಣ್ಣ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ ಯೋಗೀಶ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಸೇರಿತಂತೆ ಇನ್ನಿತರರು ಉಪಸ್ಥಿತರಿದ್ದರು.