ಮೈಸೂರು:11 ಅಕ್ಟೋಬರ್ 2021:
ನ@ದಿನಿ
ಕನ್ನಡ ಚಿತ್ರರಂಗದಲ್ಲಿ 40 ರಿಂದ 70ರ ದಶಕದವರೆಗೂ ನಟನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮಿನುಗು ತಾರೆಗಳ ಸುಮಧುರ ಗೀತೆಯನ್ನು ಹಾಡಿ ‘ಸ್ವರ ನಮನ’ ಅರ್ಪಿಸುವ ಮೂಲಕ ಖ್ಯಾತ ಗಾಯಕಿ ಡಾ.ಶಮಿತಾ ಮಲ್ನಾಡ್ ತಂಡದವರು ಸಂಗೀತ ರಸಿಕರಿಗೆ ಭರಪೂರ ರಸದೌತಣ ಉಣಬಡಿಸಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಭಾನುವಾರ ನಡೆದ ‘ಮಧುರ ಮಧುರವೀ ಮಂಜುಳಗಾನ’ ಸಂಗೀತ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್‌ನಲ್ಲಿ ಮಿಂಚಿದ ನಾಯಕಿಯರಾದ ಪಂಡರೀಬಾಯಿ, ಸರಿತಾ, ಜಯಂತಿ, ಭಾರತಿ, ಜಯಪ್ರದಾ, ಮಾಧವಿ, ಜಮುನಾ ಸೇರಿದಂತೆ ಪ್ರಸಿದ್ಧ ನಾಯಕಿಯರು ನಟಿಸಿದ ಸಿನಿಮಾ ಗೀತೆಗಳನ್ನು ಹಾಡಿ ಸ್ಮರಿಸಿದರು.
ಮೊದಲಿಗೆ ಶ್ರೀ ಚಾಮುಂಡೇಶ್ವರಿ ಗೀತೆಯ ಮೂಲಕ ಗಾಯನ ಕಾರ್ಯಕ್ರಮ ಪ್ರಾರಂಭಿಸಿದ ತಂಡವು, ಶರಣನೆಂದಾ ನಾ ಶಶಿಭೂಷಣ, ಶರಣು ಶರಣು ನರಸಿಂಗನಿಗೆ ಗೀತೆಗಳನ್ನು ಹಾಡಿ ವೀಕ್ಷಕರಲ್ಲಿ ಭಕ್ತಿ ಭಾವನೆಗಳನ್ನು ಮೂಡಿಸಿದರು.
ಗಾಯಕಿ ಡಾ.ಶಮಿತಾ ಮಲ್ನಾಡ್ ಅವರು ಸುಮಧುರು ಕಂಠದಲ್ಲಿ ಮೂಡಿಬಂದ ‘ಬಾಳ ಬಂಗಾರ ನೀನು’ ಗೀತೆಯೂ ಪ್ರೇಕ್ಷರಿಂದ ಶಿಳ್ಳೆ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು. ಗೆಜ್ಜೆಪೂಜೆ ಚಿತ್ರದ ‘ಗಗನವು ಎಲ್ಲೊ, ಭೂಮಿಯು ಎಲ್ಲೊ.. ಅರರೇ ಗಿಳಿರಾಮ ಪಂಚರಂಗಿ ರಾಮ.. ಅಂತಿಂತ ಹೆಣ್ಣು ನಾನಲ್ಲ.. ಈ ಶತಮಾನದ ಮಾದರಿ ಹೆಣ್ಣು… ಗೀತೆಗಳು ಕೇಳುಗರನ್ನು ಪರವಶಗೊಳಿಸಿದವು.
ಗಾಯಕಿ ಜೋಗಿ ಸುನಿತಾ ಹಾಗೂ ಗಾಯಕ ಚೇತನ್ ಸೋಸ್ಕಾ, ಅವರ ಜೋಡಿ ಸ್ವರದಲ್ಲಿ ಮೂಡಿಬಂದ ‘ಅಮರ ಮಧುರ ಪ್ರೇಮ’.. ಕಸ್ತೂರಿ ನಿವಾಸ ಚಿತ್ರದ ನೀ ಬಂದು ನಿಂತಾಗ.. ಗೀತೆಗಳಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಗಾಯಕಿ ಸುರೇಖಾ ಅವರು ಹಾಡಿದ ‘ಮೆಲ್ಲುಸಿರೇ ಸವಿ ಗಾನ.. ಪ್ರೀತಿನೆ ಆ ದ್ಯಾವ್ರೆ ತಂದ ಆಸ್ತಿ ನಮ್ಮ ಬಾಳ್ವೆಗೆ… ಗೀತೆಗಳು ಪ್ರತಿಯೊಬ್ಬರನ್ನೂ ರೋಮಾಂಚನಗೊಳಿಸಿತು.
ಇದೇ ಸಂದರ್ಭದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಗಾಯಕಿ ಡಾ.ಶಮಿತಾ ಮಲ್ನಾಡ್ ಅವರ ಗಾಯನ ಮೆಚ್ಚಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.
ತಬಲಾದಲ್ಲಿ ಜಯಚಂದ್ರ, ಗಿಟಾರ್‌ನಲ್ಲಿ ಕರಣ್, ಡ್ರಮ್ಸ್‌ನಲ್ಲಿ ಪ್ರಿಯಾ, ಕೀ ಬೋರ್ಡ್‌ನಲ್ಲಿ ದೀಪಕ್, ಕೊಳಲಿನಲ್ಲಿ ನೀತು ನಿನಾದ್, ಕಾಂಗೋದಲ್ಲಿ ಸೋನು, ಪರ್ಕಸನ್ಸ್ ಶಿವಮಲ್ಲು, ನಿರೂಪಕರಾದ ಆರ್ಜೆ ರಶ್ಮಿ, ಕಲಾದೇಗುಲಾ ಶ್ರೀನಿವಾಸ್ ಇದ್ದರು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷರಾದ ಹೆಚ್.ವಿ. ರಾಜೀವ್, ಅರಣ್ಯ ವಸತಿ ಹಾಗೂ ವಿಹಾರಧಾಮ ಸಂಸ್ಥೆಯ ಅಧ್ಯಕ್ಷ ಅಪ್ಪಣ್ಣ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ ಯೋಗೀಶ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.