ಅಪ್ರಾಪ್ತೆಯರ ಎದುರು ಅಸಭ್ಯವಾಗಿ ವರ್ತಿಸಿದ್ದ ನಟನಿಗೆ ಒಂದು ವರ್ಷ ಜೈಲು!

ಸಿನಿಮಾ: ಸಿನಿಮಾ ನಟರು ಅಂದ್ರೆ ಸಮಾಜಕ್ಕೆ ಮಾದರಿಯಾಗಿರಬೇಕು. ಅವರ ನಡೆ ನುಡಿ ವರ್ತನೆ ಎಲ್ಲವೂ ಜನರ ಮೇಲೆ ಪರಿಣಾಮ ಬೀರುತ್ತೆ. ಹೀಗಿದ್ರೂ ಜನರ ಎದುರು ಹುಚ್ಚು ಹುಚ್ಚಾಗಿ ವರ್ತಿಸಿದ ಖ್ಯಾತ ನಟನೊಬ್ಬ ಈಗ ಜೈಲುಪಾಲಾಗಿದ್ದಾನೆ.

ಶ್ರೀಜಿತ್ ರವಿ, 2005ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಜಿತ್ ರವಿ, ಇಲ್ಲಿಯವರೆಗೆ 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಹೆಚ್ಚಾಗಿ ಹೀರೋ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಕಾಮಿಡಿ ಮತ್ತು ಖಳನಾಯಕನ ಪಾತ್ರಗಳ ಮೂಲಕ ಮಲಯಾಳಂ ಪ್ರೇಕ್ಷಕರಿಗೆ ಬಹಳ ಚಿರಪರಿಚಿತರಾಗಿದ್ದಾರೆ. ‘ಪುಣ್ಯಾಲನ್ ಅಗರ್‌ಬತ್ತೀಸ್’, ‘ಗೋಧಾ’, ‘ರಾಮಂತೆ ಏಡೆನ್ತೋಟಂ’ ಮತ್ತು ‘ಜೋ ಅಂಡ್ ಜೋ’ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಇಂಥ ನಟ ತಮ್ಮ ವಿಕೃತ ವರ್ತನೆಯಿಂದ ಜೈಲು ಸೇರಬೇಕಾಗಿಬಂಡಿದೆ.

ಅಪ್ರಾಪ್ತೆಯರ ಮುಂದೆ ಪ್ಯಾಂಟ್ ಬಿಚ್ಚಿ ವಿಕೃತ ವರ್ತನೆ!
ಅದು 2022ರ ಜುಲೈ 4. ಕೇರಳದ ತ್ರಿಶೂರಿನ ಅಯ್ಯಂತೋಲ್ ಮೈದಾನದ ಬಳಿ ಶಾಲಾ ಮಕ್ಕಳ ಗುಂಪೊಂದು ನಡೆದುಕೊಂಡು ಹೋಗುತ್ತಿತ್ತು. ಈ ವೇಳೆ ಅಲ್ಲಿದ್ದ ನಟ ಶ್ರೀಜಿತ್ ರವಿ, ಮಕ್ಕಳ ಮುಂದೆ ತಮ್ಮ ಖಾಸಗಿ ಅಂಗಗಳನ್ನು ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಇಬ್ಬರು ಮಕ್ಕಳು ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ’ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಟನನ್ನು ಬಂಧಿಸಿದ್ದರು. ಅಲ್ಲದೆ, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಸಾಕ್ಷ್ಯವಾಗಿ ಸಂಗ್ರಹಿಸಿ, ಚಾರ್ಜ್ ಶೀಟ್ ಹಾಕಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ತ್ರಿಶೂರ್‌ನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ-2, ಶ್ರೀಜಿತ್ ಅಪರಾಧಿ ಅಂತ ಈ ತೀರ್ಪು ನೀಡಿದ್ದು, 1 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ದಂಡದ ಮೊತ್ತವನ್ನು ಸಂತ್ರಸ್ತ ಬಾಲಕಿಯರಿಗೆ ಹಂಚಿಕೊಡುವಂತೆ ಸೂಚಿಸಿದೆ. ಆದರೆ, ಮೇಲಿನ ನ್ಯಾಯಾಲಯದಲ್ಲಿ ತೀರ್ಪು ಪ್ರಶ್ನಿಸಲು ಅವಕಾಶ ನೀಡುವ ಉದ್ದೇಶದಿಂದ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ. ನಟನಿಗೆ ಜಾಮೀನನ್ನೂ ಮಂಜೂರು ಮಾಡಲಾಗಿದೆ.

ತನ್ನ ಸ್ಥಾನ ಮಾನ ಮರೆತು ಬೀದಿ ಪೋಕರಿ ರೀತಿ ವರ್ತಿಸಿದ ನಟನಿಗೆ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ. ಇದು ಇತರೆ ಜನರಿಗೆ ಪಾಠವಾಗಬೇಕು.

Leave a Reply

Your email address will not be published. Required fields are marked *