ರೇಣುಕಾಸ್ವಾಮಿ ಕೊಲೆ ಕೇಸ್: ಕೋರ್ಟ್ ವಿಚಾರಣೆವೇಳೆ ಸ್ಫೋಟಕ ತಿರುವು..!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪದೇ ಪದೇ ಹಿನ್ನಡೆ ಆಗುತ್ತಲೇ ಇತ್ತು. ಇದು ಪತ್ನಿ ವಿಜಯಲಕ್ಷ್ಮಿ ಹಾಗೂ ಅಭಿಮಾನಿಗಳಿಗೆ ಆತಂಕ ಮೂಡಿಸಿತ್ತು. ಮುಂದಿನ ವರ್ಷ ಏಪ್ರಿಲ್ ವರೆಗೂ ಬೇಲ್ ಕೂಡ ಇಲ್ಲ ಅಂತ ಸುಪ್ರೀಂ ಕೋರ್ಟ್ ಕಡಾ ಖಂಡಿತವಾಗಿ ಹೇಳಿತ್ತು. ಹೀಗಾಗಿ ಬೇಸರಕ್ಕೊಳಗಾಗಿದ್ದ ವಿಜಯಲಕ್ಷ್ಮಿ ಕಂಡ ಕಂಡ ದೇವರ ಮೊರೆ ಹೋಗಿದ್ರು. ಈಗ ದೇವರ ಪ್ರಾರ್ಥನೆ ಫಲಿಸಿದಂತೆ ಕಾಣುತ್ತಿದೆ. ಕೋರ್ಟ್ ನಲ್ಲಿ ಬಹುಮುಖ್ಯ ಬೆಳವಣಿಗೆ ಆಗಿದೆ.

ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್‌ಗೆ ಭಾರಿ ಹಿನ್ನಡೆಯಾಗಿದೆ. ಮೊನ್ನೆಯಷ್ಟೇ ಪ್ರತ್ಯಕ್ಷ ಸಾಕ್ಷಿ ಪುನೀತ್ “ನನಗೇನೂ ಗೊತ್ತಿಲ್ಲ” ಎಂದು ಉಲ್ಟಾ ಹೊಡೆದಿದ್ದ. ಈಗ ಅದೇ ಹಾದಿ ಹಿಡಿದಿರುವ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಮತ್ತು ಕಿರಣ್ ಕೂಡ ಸಂಪೂರ್ಣ ಯೂ-ಟರ್ನ್ ತೆಗೆದುಕೊಂಡಿದ್ದಾನೆ. ಕೇಸ್‌ನಲ್ಲಿ ಪೊಲೀಸರಿಗೆ ಪ್ರಬಲ ಅಸ್ತ್ರವಾಗಿದ್ದ ಪ್ರತ್ಯಕ್ಷ ಸಾಕ್ಷಿಗಳೇ ಈಗ ಕೋರ್ಟ್ ಕಟಕಟೆಯಲ್ಲಿ ಒಬ್ಬರ ಹಿಂದೆ ಒಬ್ಬರು ಉಲ್ಟಾ ಹೊಡೆಯುತ್ತಿರುವುದು ದರ್ಶನ್ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

SPP ಪ್ರಸನ್ನ ಕುಮಾರ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ನರೇಂದ್ರ ಸಿಂಗ್, “ಅವತ್ತು ಶೆಡ್‌ನಲ್ಲಿ ಏನಾಯ್ತು ಅಂತ ನನಗೆ ಗೊತ್ತಿಲ್ಲ, ಆರೋಪಿಗಳನ್ನ ನಾನು ನೋಡಿಯೇ ಇಲ್ಲ. ವಿನಯ್ ಪರಿಚಯವಿದೆ, ಅವರದ್ದು ಕೆಂಪು ಬಣ್ಣದ ಕಾರು. ಆದ್ರೆ ಕೊಲೆ ನಡೆದ ದಿನ ಆ ಕಾರು ಶೆಡ್‌ಗೆ ಬಂದಿತ್ತಾ ಅನ್ನೋದು ನನಗೆ ನೆನಪಿಲ್ಲ” ಎಂದಿದ್ದಾರೆ.

ಪ್ರತ್ಯಕ್ಷ ಸಾಕ್ಷಿ ಕಿರಣ್ ಹೇಳಿಕೆ: “2024 ಜೂನ್ 8ರಂದು ಪಟ್ಟಣಗೆರೆ ಶೆಡ್‌ನಲ್ಲಿ ಏನೂ ನಡೆದಿಲ್ಲ. ನಾನು ಎಂದಿನಂತೆ ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಬಂದು ಸಂಜೆ 6ಕ್ಕೆ ಮನೆಗೆ ಹೋಗಿದ್ದೆ. ಕಟಕಟೆಯಲ್ಲಿರುವ ಆರೋಪಿಗಳು ಯಾರು ಅಂತ ನನಗೆ ಗೊತ್ತಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕೆ ನೀಡುವಾಗ ಏನು ಹೇಳಿದ್ದೆ ಅನ್ನೋದು ಸರಿಯಾಗಿ ನೆನಪಿಲ್ಲ” ಎಂದು ಕಿರಣ್ ಕೋರ್ಟ್‌ಗೆ ತಿಳಿಸಿದ್ದಾರೆ.
ಇಬ್ಬರು ಪ್ರಮುಖ ಸಾಕ್ಷಿಗಳು ಪ್ರತಿಕೂಲವಾಗಿ (Hostile Witness) ತಿರುಗಿಬಿದ್ದ ಹಿನ್ನೆಲೆಯಲ್ಲಿ, ಇವರನ್ನು ಪಾಟಿ ಸವಾಲಿಗೆ (Cross Examination) ಒಳಪಡಿಸಲು ಎಸ್‌ಪಿಪಿ ಸಮಯ ಕೇಳಿದ್ದಾರೆ. ಹೀಗಾಗಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದೆ. ಕಾನೂನು ತಜ್ಞರ ಪ್ರಕಾರ, ಪ್ರತ್ಯಕ್ಷ ಸಾಕ್ಷಿಗಳೇ ಉಲ್ಟಾ ಹೊಡೆದರೆ ಅದು ದರ್ಶನ್ ಪರ ವಕೀಲರಿಗೆ ದೊಡ್ಡ ಅಸ್ತ್ರವಾಗಲಿದ್ದು, ಕೇಸ್‌ನಲ್ಲಿ ಬಿಗ್ ರಿಲೀಫ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಮುಂದೇನು?
ಸಾಲು ಸಾಲು ಸಾಕ್ಷಿಗಳು ಉಲ್ಟಾ ಹೊಡೆಯುತ್ತಿರುವುದು ದರ್ಶನ್ ಬಿಡುಗಡೆಯ ಹಾದಿಯನ್ನು ಸುಗಮಗೊಳಿಸುತ್ತಿದೆಯಾ? ಜೊತೆಗೆ ಬೆನ್ನುನೋವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗುವ ಅವಕಾಶವೂ ಸಿಗುತ್ತಾ? ದಾಸನಿಗೆ ಸಿಗಲಿರುವ ಈ ‘ಡಬಲ್ ರಿಲೀಫ್’ ಬಗ್ಗೆ ನವೆಂಬರ್ 30ರಂದು ಸ್ಪಷ್ಟ ಚಿತ್ರಣ ಸಿಗಲಿದೆ.

Leave a Reply

Your email address will not be published. Required fields are marked *