ಪಿರಿಯಾಪಟ್ಟಣ:21 ಜುಲೈ 2022
ನಂದಿನಿ ಮೈಸೂರು
ಕ್ರೀಡಾಪಟುಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಯಶಸ್ಸಿನ ಗುರಿ ತಲುಪಬಹುದು ಎಂದು ಪಿರಿಯಾಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಚಾಣಕ್ಯ ವಿದ್ಯಾಸಂಸ್ಥೆಯಲ್ಲಿ ನಡೆದ ಬೆಟ್ಟದಪುರ ಹೋಬಳಿ ವಲಯ ಮಟ್ಟದ ಪ್ರೌಢಶಾಲೆ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಸ್ಪರ್ಧೆಯಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ, ಗೆದ್ದಾಗ ಸಂಭ್ರಮಿಸದೆ ಸೋತಾಗ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕ್ರೀಡಾಸ್ಫೂರ್ತಿ ಮೆರೆದಾಗ ಮಾತ್ರ ಯಶಸ್ಸಿನ ಗುರಿ ತಲುಪಬಹುದು ಎಂದರು.
ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಜಗದೀಶ್ ಅವರು ಮಾತನಾಡಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
ದೈಹಿಕ ಶಿಕ್ಷಕ ರಘುಪತಿ ಅವರು ಮಾತನಾಡಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಮತ್ತಷ್ಟು ಹೆಚ್ಚಿನ ತರಬೇತಿಯೊಂದಿಗೆ ಮುಂದಿನ ಹಂತಗಳ ಕ್ರೀಡಾಕೂಟಗಳಲ್ಲೂ ಜಯಗಳಿಸಿ ತಾಲ್ಲೂಕಿಗೆ ಹೆಮ್ಮೆ ತರಬೇಕು ಎಂದು ಶುಭಕೋರಿದರು.
ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿ ಜಯಗಳಿಸಿದ ಬೆಟ್ಟದಪುರದ ಎಸ್ಎಂಎಸ್ ವಿದ್ಯಾ ಸಂಸ್ಥೆ ಸಮಗ್ರ ಪ್ರಶಸ್ತಿ ಪಡೆದುಕೊಂಡರೆ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಾಜಶೇಖರ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗೆ ಭಾಜನರಾದರು, ವಿಜೇತ ತಂಡಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಾಲೆಗಳು ಹಾಗು ದೈಹಿಕ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು, ಮುಂದಿನ ವರ್ಷದ ಬೆಟ್ಟದಪುರ ಹೋಬಳಿ ವಲಯ ಮಟ್ಟದ ಕ್ರೀಡಾ ಕೂಟದ ಆಯೋಜಕರಾದ ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಗೆ ಕ್ರೀಡಾ ಧ್ವಜ ಹಸ್ತಾಂತರಿಸಲಾಯಿತು.
ಈ ಸಂದರ್ಭ ಚಾಣಕ್ಯ ಸಂಸ್ಥೆಯ ನಿರ್ದೇಶಕರಾದ ಯದುರಾಜ್, ಹರೀಶ್, ದೈಹಿಕ ಶಿಕ್ಷಣ ತಾಲ್ಲೂಕು ಪರಿವೀಕ್ಷಕ ಶಿವಯ್ಯ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಜಗದೀಶ್, ಕಸಾಪ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಹಾಗು ಶಿಕ್ಷಕ ಗೊರಳ್ಳಿ ಜಗದೀಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್ ಕಾಂತರಾಜು, ತಾಲೂಕು ಸಹ ಶಿಕ್ಷಕರ ಸಂಘದ ನಿರ್ದೇಶಕ ಆಲನಹಳ್ಳಿ ಕೆಂಪರಾಜು, ಚಾಣಕ್ಯ ಪ್ರೌಢಶಾಲೆ ಮುಖ್ಯಶಿಕ್ಷಕ ತಿಮ್ಮಯ್ಯ, ದೈಹಿಕ ಶಿಕ್ಷಕ ನಿಂಗರಾಜ್, ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗು ದೈಹಿಕ ಶಿಕ್ಷಕರು ಇದ್ದರು.