ಹಿರಿಯರೆಂದು ಗೌರವಿಸಿ ಮನೆಗೇ ಬಂದು ಹುಟ್ಟುಹಬ್ಬದ ಶುಭ ಕೋರಿದ ಎಸ್.ಎಂ.ಕೃಷ್ಣ

 

ಬೆಂಗಳೂರು:20 ಅಕ್ಟೋಬರ್ 2021

ನಂದಿನಿ

ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಮ್ಮ ತಾಯಿಯವರಾದ ಶ್ರೀಮತಿ ಸೀತಮ್ಮ ತಿಮ್ಮೇಗೌಡ ಅವರ ಹುಟ್ಟುಹಬ್ಬವನ್ನು ಕಳೆದ ವಾರವಷ್ಟೇ ಆಚರಿಸಿದರು. ಅವರ ತಾಯಿಯವರು ಹುಟ್ಟುಹಬ್ಬಕ್ಕೆ ಕೇಳಿದ ಕೊಡುಗೆ ಏನು..? ಅದನ್ನು ಪೂರೈಸಿದ ಬಗೆ ಹೇಗೆ ಎಂಬ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಹುಟ್ಟುಹಬ್ಬಕ್ಕೆ ಏನು ಕೊಡಬೇಕು ತಮಗೆ ಎಂದು ಸಚಿವರು ತಮ್ಮ ಮಾತೃಶ್ರೀಯವರಲ್ಲಿ ಕೇಳಿಕೊಳ್ಳುತ್ತಾರೆ. ಆಗ ಅವರು ನನಗೆ ವಯಸ್ಸು 94 ಆಗುತ್ತಿದೆ. ನನಗೆ ಏನೇನು ಅವಶ್ಯಕತೆಗಳಿವೆಯೋ ಅದನ್ನೆಲ್ಲ ನೀನು ಪೂರೈಸಿದ್ದೀಯ. ಅದರೆ ನಾನು ರಾಜಕೀಯ ನಾಯಕರಾದ, ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಎಸ್ ಎಂ ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂದು ಕೇಳಿಕೊಳ್ಳುತ್ತಾರೆ.

ಸಚಿವರು ಈ ವಿಷಯವನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಗಳಾದ ಶ್ರೀ ದಿನೇಶ್ ಗೂಳಿಗೌಡ ಅವರಿಗೆ ತಿಳಿಸುತ್ತಾರೆ. ಅವರು ಮಾನ್ಯ ಎಸ್.ಎಂ. ಕೃಷ್ಣ ಅವರ ಬಳಿ ಸಚಿವರ ಮಾತೃಶ್ರೀಯವರ ಹುಟ್ಟುಹಬ್ಬದ ಕೋರಿಕೆಯನ್ನು ತಿಳಿಸುತ್ತಾ, ತಮ್ಮ ಮನೆಗೆ ಯಾವಾಗ? ಯಾವ ಸಮಯಕ್ಕೆ ಸಚಿವರ ತಾಯಿಯವರನ್ನು ಕರೆದುಕೊಂಡು ಬರಬೇಕೆಂಬುದನ್ನು ಮನವಿ ಮಾಡಿಕೊಳ್ಳುತ್ತಾರೆ. ಇದನ್ನು ಕೇಳಿದ ಎಸ್.ಎಂ. ಕೃಷ್ಣ ಅವರು ಸಚಿವರ ಮಾತೃಶ್ರೀಯವರು ನನಗಿಂತ ಹಿರಿಯರು. ಹಾಗಾಗಿ ಅವರು ನಮ್ಮ ಮನೆಗೆ ಬರುವುದು ಉಚಿತವಲ್ಲ. ಹಾಗಾಗಿ ನಾನೇ ಅವರ ಮನೆಗೆ ಬಂದು ಭೇಟಿ ಮಾಡುತ್ತೇನೆ ಎಂದು ಹೇಳುತ್ತಾರೆ.

*ಸಚಿವರ ನಿವಾಸಕ್ಕೆ ಎಸ್.ಎಂ.ಕೃಷ್ಣ*

ಕೊಟ್ಟ ಮಾತಿನಂತೆ ಮಂಗಳವಾರ ರಾತ್ರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್ .ಎಂ. ಕೃಷ್ಣ ಅವರು ಭೇಟಿ ಕೊಡುತ್ತಾರೆ. ಸಚಿವರ ಮಾತೃಶ್ರೀ ಅವರನ್ನು ಭೇಟಿಯಾಗಿ ಕೆಲಕಾಲ ಮಾತನಾಡುವ ಮೂಲಕ ಅವರ ಕೋರಿಕೆಯನ್ನು ಈಡೇರಿಸುತ್ತಾರೆ. ಇತ್ತ ತಮ್ಮ ತಾಯಿಯ ಕೋರಿಕೆಯನ್ನು ನೆರವೇರಿಸಲು ಕೃಷ್ಣ ಅವರೇ ತಮ್ಮ ಮನೆಗೆ ಆಗಮಿಸಿದ್ದಕ್ಕೆ ಸಚಿವರಾದ ಸೋಮಶೇಖರ್ ಅವರೂ ಸಹ ಕಣ್ಮನ ತುಂಬಿ ಬಂತು.

ಈ ಸಂದರ್ಭದಲ್ಲಿ ಸಚಿವರ ಪತ್ನಿ ರಾಧಾ ಸೋಮಶೇಖರ್ ಹಾಗೂ ಪುತ್ರ ನಿಶಾಂತ್ ಸೋಮಶೇಖರ್ ಅವರು ಇದ್ದರು.

Leave a Reply

Your email address will not be published. Required fields are marked *