ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಸಹಕಾರ ಸಪ್ತಾಹ ಆಚರಣೆ

ಮೈಸೂರು:14 ನವೆಂಬರ್ 2021

ನಂದಿನಿ

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಿಯಮ ಉಲ್ಲಂಘನೆಯಾಗದ ರೀತಿ 68ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸರಳವಾಗಿ ಆಚರಿಸಲಾಗಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಅವರು ಹೇಳಿದರು.

ಇಂದು ಮೈಸೂರಿನಲ್ಲಿ ‘ಸಹಕಾರದ ಮೂಲಕ ಸಮೃದ್ಧಿ’ ಎಂಬ ಧ್ಯೇಯದೊಂದಿಗೆ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಪ್ರತಿ ವರ್ಷ ನ.14 ರಿಂದ 21 ರವರೆಗೆ ಸಹಕಾರ ಸಪ್ತಾಹವನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎಂಎಲ್ ಸಿ ಚುನಾವಣೆ ಇರುವುದರಿಂದ ನಿಯಮವನ್ನು ಪಾಲಿಸಿ ಸರಳವಾಗಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಸಪ್ತಾಹವನ್ನು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ದೊಡ್ಡ ಮಟ್ಟದಲ್ಲಿ ಮಾಡೋಣ ಎಂದು ಹೇಳಿದರು.
ಎಲ್ಲ ರಂಗಗಳಲ್ಲಿ ನಮ್ಮ ಸಹಕಾರಿ ಕ್ಷೇತ್ರ ಸೇವೆ ಸಲ್ಲಿಸುತ್ತಿದೆ. ಪ್ರತಿ ಕ್ಷೇತ್ರದಲ್ಲಿ ನಮ್ಮ ಸಹಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಸಹಕಾರ ಚಳವಳಿಯಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ತೊಡಗಿಸಿಕೊಳ್ಳಬೇಕು. ಸಹಕಾರ ತತ್ವಗಳಡಿಯಲ್ಲಿಯಾಗುತ್ತಿರುವ ಕೆಲಸಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ಆಗಬೇಕು. ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಯುವಕರು ಬರಬೇಕು. ಪ್ರತಿ ಮನೆ, ಮನಗಳಲ್ಲೂ ಸಹಕಾರಿ ಕ್ಷೇತ್ರ ತಲುಪುವಂತೆ ಮಾಡಬೇಕು ಆಗ ಸಹಕಾರಿ ಚಳವಳಿಯನ್ನು ಕಟ್ಟಿ ಬೆಳೆಸಿದ ಅನೇಕ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಈ ವೇಳೆ ‘ಕೊರೊನಾ ಸೋಂಕನ್ನು ನಿಭಾಯಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಆರೋಗ್ಯ ಸಹಕಾರಿ ಸಂಸ್ಥಗಳನ್ನು ಬಲಪಡಿಸುವುದು ಕುರಿತು ಚರ್ಚಿಸಲಾಯಿತು.


ಸಮಾರಂಭದಲ್ಲಿ ಹಿರಿಯ ಸಹಕಾರಿ ರಾಜೀವ್, ಮೈಸೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಶ್ರೀ ಕೆ.ಎಸ್.ಹರೀಶ್ ಕುಮಾರ್, ಸಹಕಾರಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಶ್ರೀ ಡಾ.ದಿವಾಕರ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *