ರೈತಪರ ವಿವಿಧ ಯೋಜನೆಗಳಿಗೆ ಚಾಲನೆ

ಮೈಸೂರು:31 ಡಿಸೆಂಬರ್ 2021

ನಂದಿನಿ

ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಹಾಗೂ ಮೈಸೂರು ತಾಲ್ಲೂಕು ಹಂಚ್ಯಾ ಗ್ರಾಮದ ಪಶು ಚಿಕಿತ್ಸಾಲಯದ ಆಶ್ರಯದಲ್ಲಿ ಶುಕ್ರವಾರ ರೈತ ಸಂಬಂಧಿತ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹಂಚ್ಯಾ ಗ್ರಾಮದ ಪಶು ಚಿಕಿತ್ಸಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಹುಟ್ಟೂರಿನ ಅಭಿವೃದ್ದಿ ಮಾಡಿದಾಗಲೇ ಅಧಿಕಾರದ ಸಾರ್ಥಕತೆಯಾಗಲಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಹಂಚ್ಯಾ ಗ್ರಾಮಕ್ಕೆ ನೂತನ ಗ್ರಂಥಾಲಯ ಹಾಗೂ ಪಬ್ಲಿಕ್ ಶಾಲೆಯನ್ನು ತರಲಾಗುವುದು ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ಸಹಕಾರದಿಂದ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಬಂದಿತು. ಅಂದು ಕುದುರೆಗಳಿಗಿಂತಲೂ ರೈತರಿಗೆ ಅಗತ್ಯವಾಗಿ ಬೇಕಾಗಿರುವುದು ಪಶುಚಿಕಿತ್ಸಾಲಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಾಗ ಪಶು ಇಲಾಖೆ ರಾಜ್ಯ ಮುಖ್ಯ ಅಧಿಕಾರಿಗಳಾದ ಪಿ.ಮಣಿವಣ್ಣನ್ ಅವರು ಆಸ್ಪತ್ರೆ ಮಂಜೂರು ಮಾಡಿಕೊಟ್ಟರು. ಅನಂತರ ಇಲ್ಲಿನ ಸಿಬ್ಬಂದಿಗಳು ಆಸ್ಪತ್ರೆ ಅಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ ತರಿಸಿದೆ ಎಂದು ಹೇಳಿದರು.

ಶೀಘ್ರವೇ ಗ್ರಾಮಕ್ಕೆ ಒಂದು ಗ್ರಂಥಾಲಯ ಹಾಗೂ ಪಬ್ಲಿಕ್ ಶಾಲೆ ತರುವ ಪ್ರಯತ್ನಗಳು ನಡೆಯುತ್ತಿದ್ದು, ಅವುಗಳನ್ನು ಶೀಘ್ರ ಕಾರ್ಯ ರೂಪಕ್ಕೆ ಬರಲಿವೆ. ಹುಟ್ಟೂರಿನ ಅಭಿವೃದ್ಧಿ ಆದಾಗ ಮಾತ್ರವೇ ನಾವು ಪಡೆದ ಅಧಿಕಾರದ ಸಾರ್ಥಕತೆ ಆಗಲಿದ್ದು, ಈ ದಿಸೆಯಲ್ಲಿ ಗ್ರಾಮದ ಅಭಿವೃದ್ದಿಗೆ ದುಡಿಯುತ್ತಿರುವುದಾಗಿ ಹೇಳಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಜಾನುವಾರು ಆರೋಗ್ಯ ತಪಾಸಣಾ ಶಿಬಿರ, ಮಿಶ್ರತಳಿ ಕರುಗಳ ಪ್ರದರ್ಶನ, ಕಾಲುಬಾಯಿ ಜ್ವರರೋಗದ ಬಗ್ಗೆ ಜಾಗೃತಿ ಅಭಿಯಾನ, ಮೇವಿನ ಬೀಜ ವಿತರಣೆ, ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ, ಪಶು ಚಿಕಿತ್ಸಾಲಯಕ್ಕೆ ಉಚಿತ ಔಷಧ ನೀಡಿದ ದಾನಿಗಳಿಗೆ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ಕಾಲುಬಾಯಿ ಜ್ವರರೋಗದ ಪರಿಣಾಮ, ತಡೆಗಟ್ಟುವಿಕೆ ಮತ್ತು ರೈತರ ಜವಾಬ್ದಾರಿ ಎಂಬ ವಿಷಯ ಕುರಿತು ಪಶು ಸೂಕ್ಷ್ಮಾಣು ಜೀವಿ ತಜ್ಞ ಕ್ಯಾಪ್ಟನ್ ಡಾ.ತಿಮ್ಮಯ್ಯ ಅವರು ವಿಚಾರ ಮಂಡಿಸಿ, ಕಾಯಿಲೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.

ನಂತರ ನಡೆದ ಪಶು ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ಪಶುವೈದ್ಯರಾದ ಡಾ.ಅನಿಲ್‍ಕುಮಾರ್, ಡಾ.ಮಲ್ಲಿಕಾರ್ಜುನ, ಡಾ.ರಾಜಶೇಖರ ಮುಡಬಾಗಿಲು ಹಾಗೂ ಡಾ.ನಿಖಿತ್ ಅವರುಗಳು ಜಾನುವಾರುಗಳಿಗೆ ಚಿಕಿತ್ಸೆಗೆ ನೀಡಿದರು.

ಕಾರ್ಯಕ್ರಮದ ನಿಮಿತ್ತ ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ವಿಜೇತರಾದ ಜಾನುವಾರುಗಳ ಮಾಲೀಕರಿಗೆ ಮೊದಲನೇ ಬಹುಮಾನ 3000ರೂ., ಎರಡನೇ ಬಹುಮಾನ 2000 ರೂ., ಮೂರನೇ ಬಹುಮಾನ 1000 ರೂ. ಮೌಲ್ಯದ ಹಸುವಿನ ತಿಂಡಿ ಮತ್ತು ಹಾಲು ಕ್ಯಾರಿಯರ್ ನೀಡಲಾಯಿತು.
ಆಯ್ದ 8 ಮಂದಿಗೆ 500 ರೂ. ಒಟ್ಟು 4000 ಬೆಲೆ ಬಾಳುವ ಹಸುವಿನ ತಿಂಡಿ ಮತ್ತು ಹಾಲು ಕ್ಯಾರಿಯರ್ ಅನ್ನು ಸಮಾಧಾನಕರ ಬಹುಮಾನವಾಗಿ ಪ್ರದಾನ ಮಾಡಲಾಯಿತು.

ಈ ವೇಳೆ ವೇದಿಕೆಯಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಅಪರ ನಿರ್ದೇಶಕ ಡಾ.ಪ್ರಸಾದಮೂರ್ತಿ, ಜಂಟಿ ನಿರ್ದೇಶಕ ಡಾ.ವೀರಭದ್ರಯ್ಯ, ಇಲಾಖೆಯ ಮೈಸೂರು ಜಿಲ್ಲಾ ಉಪನಿರ್ದೇಶಕ ಡಾ.ಷಡಕ್ಷರಮೂರ್ತಿ, ಸಹಾಯಕ ನಿರ್ದೇಶಕ ಡಾ.ಬಾಲರಾಜ್, ರೆಮಿನಿಸೆನ್ಸ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಕರ್ನಲ್ ಡಾ.ಜಗದೀಶ್, ಉಪಾಧ್ಯಕ್ಷ ಡಾ.ಲಕ್ಷ್ಮೀನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಕಾಂತರಾಜ್, ಖಜಾಂಚಿ ಡಾ.ಚಂದ್ರಶೇಖರ್, ವೆಸ್ಟರ್ ಔಷಧ ಕಂಪನಿ ಮಾಲೀಕ ಡಾ.ಧೀರೇಂದ್ರಕುಮಾರ್, ಹಂಚ್ಯಾ ಗ್ರಾಮದ ಪಶು ಆಸ್ಪತ್ರೆ ವೈದ್ಯ ಡಾ.ಮ.ಪು.ಪೂರ್ಣಾನಂದ, ಹಂಚ್ಯಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತಮ್ಮೇಗೌಡ, ಗ್ರಾಮದ ಮುಖಂಡ ಕೆ.ಸಣ್ಣಸ್ವಾಮಿ, ಬೋರೆಗೌಡ, ವೆಂಕಟೇಶ್ ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.

ಪ್ರದರ್ಶನ:
ಅತ್ಯುತ್ತಮ ಮಿಶ್ರ ತಳಿಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತಲ್ಲದೆ 80ಕ್ಕೂ ವಿವಿಧ ತಳಿಯ ಕರು ಹಾಗೂ ರಾಸು, ಕುರಿ, ಮೇಕೆಗಳ ಪ್ರದರ್ಶನ ನಡೆಯಿತು. ಈ ಪೈಕಿ ಮೊದಲ ಪ್ರಶಸ್ತಿಯನ್ನು ಗಳಿಗರಹುಂಡಿ ಗ್ರಾಮದ ಪ್ರಸನ್ನ ಮಹದೇವ್, ಎರಡನೇ ಪ್ರಶಸ್ತಿಯನ್ನು ಹಂಚ್ಯಾ ಗ್ರಾಮದ ಮಂಜುನಾಥ್ ಮಹದೇವಪ್ಪ, ಮೂರನೇ ಪ್ರಶಸ್ತಿಯನ್ನು ಗಳಿಗರಹುಂಡಿ ಗ್ರಾಮದ ಮರೀಗೌಡ ಚಿಕ್ಕಮರಯ್ಯ ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *