ನಂದಿನಿ ಮನುಪ್ರಸಾದ್ ನಾಯಕ್
ಮೋದಿ ಏಕೆ ಮೌನ? – ಯೋಗಿ ಬುಲ್ಡೋಜರ್ ಏಕೆ ಸೈಲೆಂಟ್? – ಸುಬ್ರಹ್ಮಣ್ಯ ಪ್ರಶ್ನೆ
– ದೇಣಿಗೆ ಕದ್ದವರ ವಿರುದ್ಧ ಕ್ರಮ ವಹಿಸದಿದ್ರೆ ಬಿಜೆಪಿ ರಾಮನಿಗೆ ಮಾಡಿದ ಅಪಮಾನ

ಮೈಸೂರು: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣ ದೇಶದಲ್ಲೇ ತಲ್ಲಣ ಸೃಷ್ಟಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ಖಂಡನೀಯ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಆಕ್ಷೇಪಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿಲ್ಲಿಸುವಂತೆ ಸೂಚನೆ ಕೊಟ್ಟ ಬಳಿಕವೂ ಬುಲ್ಡೋಜರ್ ಗುಡುಗಿಸುತ್ತಿದ್ದ ಯೋಗಿ ಆದಿತ್ಯ ನಾಥ್ ಅವರು ಏಕೆ ಸೈಲೆಂಟ್ ಆಗಿದ್ದಾರೆ? ಮಾತಿಗೆ ಮುಂಚೆ ಯಾವುದೇ ಪ್ರಕರಣ ಬಂದ್ರೂ ಸಿಬಿಐ ಸಿಬಿಐ ಅಂತಾ ಬಡಿದುಕೊಳ್ಳುತ್ತಿದ್ದ ಬಿಜೆಪಿ ನಾಯಕರು ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ? ರಾಮನ ದೇಣಿಗೆ ಕದ್ದವರ ಆಸ್ತಿ 100 ಪಟ್ಟು ಹೆಚ್ಚಾಗಿದೆ. ಈಗ ಸಿಬಿಐ ದೇಶದಲ್ಲಿ ಕಾಣ್ತಿಲ್ಲವೇ ಎಂದು ಆಕ್ಷೇಪಿಸಿದ್ದಾರೆ.
ಇದು ದೇಶದ ಕೋಟ್ಯಂತರ ಭಕ್ತರ ಧಾರ್ಮಿಕ ನಂಬಿಕೆಗೆ ಮಾಡಿದ ಅಪಮಾನ ಆಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಯಾವುದೇ ಪಾರದರ್ಶಕ ಮಾನದಂಡ ಅಥವಾ ಸಾರ್ವಜನಿಕ ಸಮಾಲೋಚನೆಯಿಲ್ಲದೆ ಕೇಂದ್ರ ಸರ್ಕಾರ ರಚಿಸಿದೆ.
ಟ್ರಸ್ಟ್‌ನಲ್ಲಿ ಆರ್‌ಎಸ್‌ಎಸ್ ಸದಸ್ಯರನ್ನು ನೇಮಿಸಿ, ಬಳಿಕ ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಯಿಂದಲೂ ಟ್ರಸ್ಟ್‌ಗೆ ವಿನಾಯಿತಿ ನೀಡಲಾಗಿದೆ. ಮಂದಿರ ಕಟ್ಟುವಾಗ ದೇಶದ ತುಂಬಾ ರಾಮ ರಾಮ ಅಂತ ಮೋದಿ ಸೇರಿ ಇಡೀ ಬಿಜೆಪಿ ನಾಯಕರು ಡಂಗೂರ ಹೊಡೆದರು. ಈಗ ಏಕೆ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ದೂರು ದಾಖಲಾಗುವ ಮೊದಲೇ ಹಗರಣದ ಬಗ್ಗೆ ಪ್ರಾಥಮಿಕ ತನಿಖೆ ಆಗಿದೆ, ಟ್ರಸ್ಟ್‌ನ ಚಂಪತ್ ರಾಯ್ ಅವರಿಗೆ ಈ ವಿಷಯ ಮೊದಲೇ ತಿಳಿದಿದ್ದರೂ ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ. ಇಂಥವರ ವಿರುದ್ಧ ಕ್ರಮ ಇನ್ನೂ ಆಗದಿರುವುದು ಶ್ರೀರಾಮನಿಗೆ ಮಾಡಿದ ಅಪಮಾನ ಎಂದು ಕುಟುಕಿದ್ದಾರೆ.
ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ವಿಸರ್ಜಿಸಬೇಕು. ಅಲ್ಲದೇ ಈವರೆಗೆ ಸಂಗ್ರಹಿತ ದೇಣಿಗೆ ಬಗ್ಗೆ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬಿ ಸುಬ್ರಹ್ಮಣ್ಯ
ಮಾಜಿ ಅಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು 9845394933