ನಂದಿನಿ ಮೈಸೂರು
ಮೈಸೂರು : ತಲೆಗೆ ತೀವ್ರವಾದ ಪೆಟ್ಟುಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ನಗರದ ನಿರ್ಮಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಾನವೀಯತೆ ಮೆರೆದಿದೆ.
ಚಾಮರಾಜನಗರ ಜಿಲ್ಲೆಯ ಕೂಡ್ಲೂರು ಗ್ರಾಮದ ಸತ್ಯರಾಜ್ ಫೆ.23 ರಂದು ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ತಲೆಸುತ್ತಿನಿಂದ ಕುಸಿದು ಬಿದ್ದು ತಲೆಗೆ ತೀವ್ರ ಸ್ವರೂಪದಲ್ಲಿ ಗಾಯ ಉಂಟಾಗಿತ್ತು. ಅವರನ್ನು ನಿರ್ಮಲ ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಗಂಭೀರ ಸ್ಥಿತಿಯಲ್ಲಿ ಇದ್ದರು. ಆದರೆ, ಅವರ ಚಿಕಿತ್ಸೆಗೆ ಕುಟುಂಬದವರ ಹಣ ಇರಲಿಲ್ಲ. ಈ ವಿಚಾರವನ್ನು ನಾವು ರೋಟರಿ ಪಶ್ಚಿಮ ಹಾಗೂ ಭಾಮಿಸ್ ಫೌಂಡೇಷನ್ ಗಮನಕ್ಕೆ ತಂದಾಗ ರೋಟರಿ ಸಂಸ್ಥೆಯ ‘ಸೇವ್ ಲೈಫ್’ ಯೋಜನೆಯಡಿ 1.50 ಲಕ್ಷ ರೂ.ನೆರವು ದೊರೆಯಿತು. ಉಳಿದ 1.50 ಲಕ್ಷ ರೂ.ಗಳನ್ನು ಆಸ್ಪತ್ರೆಯಿಂದ ಭರಿಸುವ ಮೂಲಕ ಸತ್ಯರಾಜ್ ಅವರ ಜೀವ ಉಳಿಸಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರೀಕ್ಷಕ ಡಾ.ಆರ್. ಬಸವರಾಜು ಹೇಳಿದರು.
ಸತ್ಯರಾಜ್ ಅವರನ್ನು ಆಸ್ಪತ್ರೆಗೆ ಕರೆ ತಂದ ಸಂದರ್ಭ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಅವರನ್ನು ಸಿ.ಟಿ. ಸ್ಕಾೃನ್‌ಗೆ ಒಳಪಡಿ ಸಲಾಯಿತು. ಜೀವ ಉಳಿಸಲು ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿತ್ತು. ಈ ವಿಚಾರವನ್ನು ಸತ್ಯರಾಜ್ ಕುಟುಂಬದವರ ಗಮನಕ್ಕೆ ತಂದಾಗ ಅವರ ಬಳಿ ಹಣ ಇಲ್ಲದೆ ಇರುವುದು ತಿಳಿದು ಬಂತು. ಸತ್ಯರಾಜ್ ತಾಯಿ ಲಕ್ಷ್ಮಿ ಬಳಿ ಮಂಗಳಸೂತ್ರ ಮಾರಿದ 5,000 ರೂ.ಮಾತ್ರ ಇತ್ತು. ಕುಟುಂಬದ ಸಂಕಷ್ಟವನ್ನು ಅರಿತು ನಮ್ಮ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆಯ ನೆರವಿನೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದೇವೆ. ಇದೀಗ ಸತ್ಯರಾಜ್ ಸಂಪೂರ್ಣ ಚೇತರಿಸಿಕೊಂಡಿದ್ದು, ಗುರುವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದರು.
ರೋಟರಿ ವೆಸ್ಟ್ ಅಧ್ಯಕ್ಷ ಉಲ್ಲಾಸ್ ಪಂಡಿತ್ ಮಾತನಾಡಿ, ಕಳೆದ 15 ವರ್ಷಗಳಿಂದ ನಮ್ಮ ಸಂಸ್ಥೆಯಿಂದ ಸೇವ್ ಚೈಲ್ಡ್ ಯೋಜನೆಯಡಿ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡುತ್ತಿದ್ದೇವೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸೇವ್ ಲೈಫ್ ಯೋಜನೆ ಜಾರಿಗೆ ತರಲಾಗಿದ್ದು, ಇದುವರೆಗೆ 5 ಜನರಿಗೆ ಚಿಕಿತ್ಸೆಗೆ ನೆರವು ನೀಡಲಾಗಿದೆ. ಕುಟುಂಬದ ಆಧಾರಸ್ತಂಭದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇದ್ದರೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ರಾಘವೇಂದ್ರ ಪ್ರಸಾದ್, ಶ್ರೀನಾಥ್, ಸುಧೀಂದ್ರ, ಆಸ್ಪತ್ರೆಯ ವೈದ್ಯ ಡಾ.ಲೋಕೇಶ್ ಇದ್ದರು.
=============