ನಂದಿನಿ ಮೈಸೂರು
ಮಣ್ಣು ನಮ್ಮೆಲ್ಲರ ಕಣ್ಣು
ಭೂತಾಯಿಯ ರಕ್ಷಣೆ ನಮ್ಮೆಲ್ಲರ ಹೊಣೆ-ಶಾಸಕ ಹೆಚ್.ಪಿ.ಮಂಜುನಾಥ್
ತೇಗದ ನಾಡಿನಲ್ಲಿ ರೈತ ಕಲ್ಯಾಣೋತ್ಸವ
ಹುಣಸೂರು: ಮಣ್ಣು ನಮ್ಮೆಲ್ಲರ ಕಣ್ಣು. ಈ ಭೂ ತಾಯಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ಮಣ್ಣನ್ನು ನಮ್ಮ ಮಕ್ಕಳ ರೀತಿ ಪೋಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು..
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ವತಿಯಿಂದ ತಾಲೂಕಿನ ಗದ್ದಿಗೆಯ ಕೆಂಡಗಣ್ಣೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ರೈತ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಫಲವತ್ತಾದ ಸಾಕಷ್ಟು ಭೂಮಿಗಳು ಬೆಳೆ ಬೆಳೆಯಲಾರದೇ ಬಂಜರಾಗಿದೆ.ಇದಕ್ಕೆ ಕಾರಣ ನಿರಂತರ ರಾಸಾಯನಿಕ ಬಳಕೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು, ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಇದು ಹೀಗೆ ಮುಂದುವರೆದರೇ ಮುಂದಿನ ದಿನಗಳಲ್ಲಿ ಕಷ್ಟದ ಸ್ಥಿತಿಯನ್ನು ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಲಿದೆ ಎಂದರು.
ಮಣ್ಣಿನ ಸಂರಕ್ಷಣೆಯ ಪಣ ತೊಟ್ಟು ರಾಜ್ಯಾದ್ಯಂತ ಹಳ್ಳಿ ಹಳ್ಳಿಗೂ ತೆರಳಿ ಅನ್ನದಾತರಲ್ಲಿ ಸಾವಯವ ಕೃಷಿ ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ಅರಿವು ಮೂಡಿಸುತ್ತಾ ರೈತರ ಕನಸು ನನಸಾಗುವಲ್ಲಿ ಶ್ರಮಿಸುತ್ತಿರುವ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್‌ಗೌಡರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಅನ್ನದಾತನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲದೇ, ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೇ, ಅವರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡದೇ ತಾರತಮ್ಯ ತೋರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೇ, ರೈತ ಬಾಂಧವರು ಇನ್ನಾದರೂ ರಾಸಾಯನಿಕ ಬಳಕೆ ನಿಲ್ಲಿಸಿ ಜೈವಿಕ ಕೃಷಿಯತ್ತ ಒಲವು ತೋರಬೇಕು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಕಾರ್ಯಕ್ರಮದ ಅತಿಥಿಗಳಾಗಿದ್ದ ಜೆಡಿಎಸ್ ಮುಖಂಡ ಜಿಡಿ.ಹರೀಶ್ ಗೌಡ ಮಾತನಾಡಿ, ಜಗತ್ತಿಗೆ ಅನ್ನ ನೀಡುವವನು ರೈತ. ಆದರೆ ರೈತನ ಸಮಸ್ಯೆಗಳಿಗೆ ಇಂದು ಕೊನೆಯೇ ಇಲ್ಲದಂತಾಗಿದೆ.ಸರ್ಕಾರದಿAದ ಅನ್ನದಾತನಿಗೆ ದೊರಕುವ ಸವಲತ್ತುಗಳು ಸರಿಯಾದ ಸಮಯಕ್ಕೆ ಸಿಗದೇ ಇರುವ ಕಾರಣ ಇಂದು ಕಷ್ಟದ ಪರಿಸ್ಥಿತಿಯನ್ನು ರೈತರು ದೂಡಬೇಕಾದ ಸಮಯ ಸೃಷ್ಠಿಯಾಗಿದೆ ಎಂದು ಬೇಸರಿಸಿದರು.
ರೈತ ಬೆಳೆವ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸಿ ಹಾಗೂ ಅವರ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಿ, ಶಾಶ್ವತ ನೀರಾವರಿ ಯೋಜನೆ ನೀಡಿದಲ್ಲಿ, ಅನ್ನದಾತರು ಸ್ವಾಭಿಮಾನದ ಜೀವನ ನಡೆಸುತ್ತಾರೆ ಎಂದ ಅವರು, ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವಲ್ಲಿ ಸಾಕಷ್ಟು ಅಭಿಯಾನ, ಕಾರ್ಯಕ್ರಮ ಹಮ್ಮಿಕೊಂಡು ಉತ್ತಮ ಕಾರ್ಯ ನಡೆಸುತ್ತಿರುವ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್‌ಗೌಡರಿಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಅನ್ನದಾತರು ರಾಸಾಯನಿಕ ಮುಕ್ತ ಕೃಷಿಯತ್ತ ಆಸಕ್ತಿ ತೋರಬೇಕೆಂದು ಕೋರಿದರು.
ರಾಜ್ಯಾಧ್ಯಕ್ಷ ಸಿ.ಚಂದನ್‌ಗೌಡ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷಗಳೇ ಕಳೆದುಹೋಗಿದೆ. ಗಾಂಧಿಜೀ ಕಂಡ ರಾಮರಾಜ್ಯದ ಕನಸು ನನಸಾಗಿಲ್ಲ. ಈ ನಡುವೇ ಇಂದಿಗೂ ಜಗತ್ತಿನ ಮನುಕುಲದ ಹಸಿವಿನ ಚೀಲಕ್ಕೆ ಊಟ ತುಂಬಿಸುವ ಅನ್ನದಾತನ ಸ್ಥಿತಿ ಬದಲಾಗಿಲ್ಲ ಎಂದು ವಿಷಾದಿಸಿದರು.
ಅನ್ನದಾತನ ಬದುಕಿನಲ್ಲೂ ಉತ್ಸಾಹ, ಸಂತೋಷ, ಪ್ರತಿದಿನ ಸಮೃದ್ಧಿಯ ನಿತ್ಯೋತ್ಸವವಾಗಲಿ ಎಂಬ ಸಂಕಲ್ಪದೊAದಿಗೆ ರೈತ ಕಲ್ಯಾಣೋತ್ಸವ ಹೆಸರಿನಲ್ಲಿ ವಿಭಿನ್ನವಾದ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿದೆ. ರೈತ ಕಲ್ಯಾಣ ಸಂಘ ಹೋರಾಟಕ್ಕೆಂದು ಸ್ಥಾಪನೆಯಾದದಲ್ಲ, ರೈತರ ಬದುಕು ಕಟ್ಟಿಕೊಡಲು ಸ್ಥಾಪನೆಯಾದದ್ದು ಎಂದ ಅವರು, ಹೋರಾಟದಿಂದ ಯಾವುದೇ ಪ್ರಯೋಜನವಿಲ್ಲ. ರೈತರು ನಿಜವಾಗಿಯೂ ಹೋರಾಟ ನಡೆಸಬೇಕಿರುವುದು ತಮ್ಮ ಜಮೀನಿನ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವಲ್ಲಿ. ತಮ್ಮಲ್ಲಿ ಎಷ್ಟು ಎಕರೆ ಜಮೀನು ಇದೆ ಎಂಬುದು ಮುಖ್ಯವಲ್ಲ. ಅಷ್ಟು ಜಮೀನಿನ ಮಣ್ಣಿನ ಎಷ್ಟು ಭಾಗದಲ್ಲಿ ಫಲವತ್ತತೆ ಇದೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಸಂರಕ್ಷಣೆ ಬಗ್ಗೆ ಈಗಲೂ ರೈತರು ಎಚ್ಚೆತ್ತಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದರು.
ಅನ್ನದಾತರೂ ಕೂಡ ಸಮಾಜದಲ್ಲಿ ಎಲ್ಲರಂತೇ ಬದುಕಬೇಕು.ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಅನ್ನದಾತರಲ್ಲಿ ಸಾವಯವ ಕೃಷಿಯ ಬಗ್ಗೆ ಮನದಟ್ಟು ಮಾಡಿಕೊಡಲಾಗುತ್ತಿದೆ. ರಾಸಾಯನಿಕ ಬಳಕೆಯಿಂದಾಗಿ ಮಣ್ಣು ನಿಶ್ಯಕ್ತಿಯಾಗುತ್ತಿದ್ದು, ಸತ್ವವನ್ನೇ ಕಳೆದುಕೊಳ್ಳುತ್ತಿದೆ. ಇನ್ನಾದರೂ ರೈತ ಕುಲ ಇದನ್ನು ಅರಿತು ಭೂ ತಾಯಿಯ ರಕ್ಷಣೆಗೆ ಮುಂದಾಗಬೇಕೆAದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗೌರವಾಧ್ಯಕ್ಷ ಹೇಮಂತ್‌ಕುಮಾರ್, ಯುವ ಮುಖಂಡ ಸಂದೇಶ್ ಸ್ಯಾಂಡಿ, ಹುಣಸೂರು ತಾಲೂಕು ಅಧ್ಯಕ್ಷ ಪ್ರತಾಪ್, ಎಚ್.ಡಿ.ಕೋಟೆ. ತಾಲೂಕು ಅಧ್ಯಕ್ಷ ಉಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ್ರು, ರಾಜ್ಯ ಸಂಘಟನಾ ಕಾರ್ಯದರ್ಶಿ ಮೂರ್ತಿ ಕೋಟೆ, ರಾಜ್ಯ ಪತ್ರಿಕಾ ಕಾರ್ಯದರ್ಶಿ ಹರೀಶ್.ಪಿ.ಗೌಡ
ರಾಜ್ಯ ಸಹ ಕಾರ್ಯದರ್ಶಿ ಕಂದಸ್ವಾಮಿ, ರಾಜ್ಯ ಸಂಚಾಲಕ ಸಂಜಯ್ ಗೌಡ, ಬಸವರಾಜ್,ಗಜೇಂದ್ರ, ಅನಿತಾ, ಪುಟ್ಟಮ್ಮ,ರತ್ನಮ್ಮ, ಶೇಖರಗೌಡ, ಮೀನಾಕ್ಷಿ, ಸುರೇಶ್,ಧರ್ಮರಾಜ್, ರವಿಕುಮಾರ್, ಗಾಯತ್ರಿ, ಎಂ,ಡಿ ಮಂಚಯ್ಯ ಮಹೇಶ್ ಶಂಕರ್, ಶಶಿಕುಮಾರ್, ಪುನೀತ್, ನಂದೀಶ್, ಶಿವಣ್ಣ, ಶುಭಾಷ್ ಕುಟ್ಟವಾಡಿ, ಮರಿಜಾನ್, ವೆಂಕಟೇಶ್ ಅಸ್ವಾಳ್, ಪುಟ್ಟಸ್ವಾಮಿ, ಚೇತನ್, ರವಿ, ಮಹೇಶ್, ದಾಸೇಗೌಡ, ಹೆಚ್.ಸಿ.ಶಿವಣ್ಣ ಸುರೇಶ್ ಹಾಗೂ ರೈತ ಕಲ್ಯಾಣದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.