ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲ:ಮಾದೇಶ್ ಗುರೂಜಿ ಅಭಿಮತ

 

ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲ, ಆದ್ದರಿಂದ ಮಾನವರಾದ ನಾವು ದ್ವೇಷ ಅಸೂಯೆಯನ್ನು ಮರೆತು ಪರಸ್ಪರ ಪ್ರೀತಿವಿಶ್ವಾಸದಿಂದ ನೆಮ್ಮದಿಯ ಜೀವನವನ್ನು ನಡೆಸಬೇಕು. ದನಿಯಿಲ್ಲದ ಬಡಜನರು ಹಾಗೂ ದೀನದಲಿತರಿಗೆ ಕೈಲಾದ ಸಹಾಯವನ್ನು ಮಾಡುವ ಮೂಲಕ ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದು ಸನಾತನ ಧರ್ಮರತ್ನಾಕರ ಶ್ರೀ.ಮಾದೇಶ್ ಗುರೂಜಿ ಹೇಳಿದರು.

ಇಂದು ತಾಲ್ಲೂಕಿನ ಬೆಡದಹಳ್ಳಿಯ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನೂತನ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಪಾರ್ವತಿ ಅಮ್ಮನವರ ಶಿಲಾಮೂರ್ತಿಯ ಪ್ರಾಣಪ್ರತಿಷ್ಠಾಪನೆ, ದೇವಾಲಯದ ಕಳಸಾರೋಹಣ, ಶ್ರೀ ಚಂಡಿಕಾಹೋಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು..

ದೇವಾಲಯಗಳು ಶಾಂತಿ ನೆಮ್ಮದಿಯನ್ನು ಅರಸಿ ಬರುವ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಿ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೌಢ್ಯಗಳ ವಿರುದ್ಧ ಶ್ರೀ ಸಾಮಾನ್ಯರಲ್ಲಿ ಕಂದಾಚಾರಗಖ ವಿರುದ್ಧ ಹೋರಾಡುವ ಶಕ್ತಿಯನ್ನು ತುಂಬುವ ಆಶ್ರಯ ತಾಣವಾಗಬೇಕು. ದಯೆಯಿಲ್ಲದ ಧರ್ಮ ಯಾವುದೂ ಇಲ್ಲ, ಸಕಲ ಪ್ರಾಣಿ ಪಕ್ಷಿಗಳು ಹಾಗೂ ಸಣ್ಣ ಪುಟ್ಟ ವಿಚಾರಗಳಿಗಾಗಿ ಕಿತ್ತಾಡಿಕೊಂಡು ಬಡಿದಾಟ ಮಾಡಿಕೊಂಡು ಪೋಲಿಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿ ತಮ್ಮ ಅಮೂಲ್ಯವಾದ ಸಮಯ ಹಾಗೂ ಮಾನವೀಯ ಸಂಬಂಧಗಳು ಹಾಗೂ ಬಂಧುತ್ವವನ್ನು ಕಳೆದುಕೊಳ್ಳುತ್ತಿರುವ ಜನರಿಗೆ ಅರಿವಿನ ಜ್ಯೋತಿಯನ್ನು ಬೆಳಗಿಸುವ ಮೂಲಕ ಪರಸ್ಪರ ಪ್ರೀತಿವಿಶ್ವಾಸದಿಂದ ಜೀವನ ನಡೆಸುವಂತೆ ಪ್ರೇರೇಪಿಸಿ ಮುನ್ನಡೆಸುವ ಕೆಲಸವನ್ನು ಮಠಮಾನ್ಯಗಳು ಹಾಗೂ ದೇವಾಲಯಗಳು ಮಾಡಬೇಕು. ಸಮಾಜದಲ್ಲಿ ಬದಲಾವಣೆ ತರುವ, ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಹಾದಿಯಲ್ಲಿಯೇ ಸಾಗುವ ಮೂಲಕ ಬದುಕಿನ ಪಯಣದ ಹಾದಿಯಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಬೇಕು. ಬಡತನ ಹಾಗೂ ಕಷ್ಠದಿಂದ ನೊಂದ ಶೋಷಿತ ವರ್ಗಗಳ ಜನರ ಕಣ್ಣೀರನ್ನು ಒರೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಪಂಚಭೂತೇಶ್ವರ ಕ್ಷೇತ್ರದ ಶ್ರೀ ರುದ್ರಮುನಿ ಸ್ವಾಮೀಜಿಯವರು ಶ್ರೀ ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀ ಕ್ಷೇತ್ರವನ್ನು ಜನಸಾಮಾನ್ಯರ ಶ್ರದ್ಧಾಕೇಂದ್ರದಂತೆ ಮುನ್ನಡೆಸಿ ಅಭಿವೃದ್ಧಿಪಡಿಸುತ್ತಿದ್ದಾರೆ. ಕೋವಿಡ್ ಸಂಕಷ್ಠದ ಸಮಯದಲ್ಲಿ ಬಡಜನರಿಗೆ ಎರಡು ಹೊತ್ತು ಊಟವನ್ನು ನೀಡುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡುವ ಪುಣ್ಯದ ಕೆಲಸ ಮಾಡಿ ತಾಲ್ಲೂಕಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಂಚಭೂತೇಶ್ವರ ಕ್ಷೇತ್ರದ ಅಭಿವೃದ್ಧಿ ಕಂಡು ನನಗೆ ಸಂತೋಷವಾಗಿದೆ. ಶ್ರೀಕ್ಷೇತ್ರವನ್ನು ಬಡಜನರು ಹಾಗೂ ತುಳಿತಕ್ಕೊಳಗಾದ ಜನರಿಗೆ ಕೈಲಾದ ಸಹಾಯ ಮಾಡುವ ಮೂಲಕ ಶ್ರೀ ಮಠವನ್ನು ಜನರ ಬಳಿಗೆ ಕೊಂಡೊಯ್ಯಬೇಕೇ ಹೊರತು ಹಣ, ಆಸ್ತಿಯ ವ್ಯಾಮೋಹಕ್ಕೆ ಒಳಗಾಗಬಾರದು ಎಂದು ಮಾದೇಶ್ ಗುರೂಜಿ ಕಿವಿಮಾತು ಹೇಳಿದರು..

ಕಾಪನಹಳ್ಳಿ ಗವಿಮಠದ ಶ್ರೀ ಚನ್ನವೀರಯ್ಯ ಸ್ವಾಮೀಜಿಗಳು ಹಾಗೂ ಕೆ.ಆರ್.ನಗರ ತಾಲ್ಲೂಕಿನ ಕನಕ ಗುರುಪೀಠದ ಶ್ರೀ ಗುರುಸಿದ್ದೇಶ್ವರ ಶ್ರೀಗಳು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು..

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆ.ಆರ್.ಪೇಟೆ ಮಾಜಿಶಾಸಕ ಬೊಮ್ಮೇನಹಳ್ಳಿ ಬಿ.ಪ್ರಕಾಶ್ ಮಾತನಾಡಿ ಶ್ರೀ ಪಂಚಭೂತೇಶ್ವರ ಕ್ಷೇತ್ರವು ಕೇವಲ 07 ವರ್ಷಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತ ಶ್ರೀ ಸಾಮಾನ್ಯರ ಶ್ರದ್ಧಾಕೇಂದ್ರವಾಗಿ, ಜನಸಾಮಾನ್ಯರ ಕಣ್ಣೀರನ್ನು ಒರೆಸಿ ಸಾಂತ್ವನ ಹೇಳಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದೆ ಎಂದು ಅಭಿಮಾನದಿಂದ ಹೇಳಿದರು..

ಪಂಚಭೂತೇಶ್ವರ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿಸದಸ್ಯೆ ಹೇಮಾಪ್ರಕಾಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಅನ್ನಪೂರ್ಣ, ಕಾವ್ಯ ಹರೀಶ್, ಭಾರತಿಪುರ ಕ್ರಾಸ್ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸುನೀಲ್, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರಾಜಾಸ್ಥಾನ ಸೇವಾಸಮಿತಿ ಸಂಚಾಲಕ ರಮೇಶ್ ಚೌಧರಿ, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠ ಜಿಲ್ಲಾಧ್ಯಕ್ಷ ಬಿಗ್ ಬಾಸ್ ಮೋಹನ್, ಶ್ರೀ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಕುಮಾರಣ್ಣ, ಸಂಚಾಲಕ ಕಾಡುಮೆಣಸ ಚಂದ್ರು, ಪತ್ರಕರ್ತರಾದ ದೊಡ್ಡಹಾರನಹಳ್ಳಿ ಮಲ್ಲೇಶ್, ಕಿಕ್ಕೇರಿ ಶಂಭೂ, ಸಿದ್ಧಾಪುರ ಉಮೇಶ್, ಸೈಯ್ಯದ್ ಖಲೀಲ್ ಸೇರಿದಂತೆ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 10 ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ಸಾಮೂಹಿಕ ಅನ್ನ ಪ್ರಸಾದವನ್ನು ರುದ್ರಮುನಿ ಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು..

*ವರದಿ.ಡಾ.ಕೆ.ಆರ್.ನೀಲಕಂಠ* .
*ಕೃಷ್ಣರಾಜಪೇಟೆ* . *ಮಂಡ್ಯ*

Leave a Reply

Your email address will not be published. Required fields are marked *