ಹಂದಿ ಜೋಗಿಗಳು ವಾಸಿಸುವ ಸ್ಥಳ ಸರ್ಕಾರಕ್ಕೆ ಸೇರಿದ್ದು ಖಾಸಗಿ ವ್ಯಕ್ತಿಗಳು ಕಬಳಿಸಲು ಬಿಡುವುದಿಲ್ಲ : ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್

5 ಆಗಸ್ಟ್ 2022

ಸತೀಶ್ ಆರಾಧ್ಯ / ನಂದಿನಿ ಮೈಸೂರು

ಪಿರಿಯಾಪಟ್ಟಣದಲ್ಲಿ ಹಂದಿ ಜೋಗಿಗಳು ವಾಸಿಸುತ್ತಿರುವ ಸ್ಥಳವನ್ನು ಯಾರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದು ಕಬಳಿಸಲು ಹುನ್ನಾರ ನಡೆಸಿದರು ಅವರ ವಿರುದ್ಧ ಹೋರಾಟ ನಡೆಸಿ ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಾನು ಬದ್ಧನಾಗಿರುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಲ ಪ್ರಭಾವಿ ವ್ಯಕ್ತಿಗಳು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಹಂದಿಜೋಗಿಗಳು ವಾಸಿಸುತ್ತಿರುವ ಸ್ಥಳವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಇದರ ಹಿಂದೆ ಯಾರೇ ಇದ್ದರೂ ಅಂತಹವರ ವಿರುದ್ಧ ಕಾನೂನು ರೀತಿ ಹೋರಾಟ ನಡೆಸಿ ಹಂದಿ ಜೋಗಿ ಕಾಲೊನಿ ನಿವಾಸಿಗಳಿಗೆ ನ್ಯಾಯ ದೊರಕಿಸಿಕೊಡುತ್ತೇನೆ,

ಹಂದಿಜೋಗಿಗಳು ವಾಸಿಸುತ್ತಿರುವ ಸ್ಥಳವನ್ನು 2001 ರಲ್ಲಿಯೇ ಸ್ಲಂ ಎಂದು ಘೋಷಿಸಿದ್ದರು 2008 ರಲ್ಲಿ ಸತ್ತ ವ್ಯಕ್ತಿಯ ಪರವಾಗಿ ಆತನ ಹೆಂಡತಿ ನಮಗೆ ಸೇರಿದ್ದು ಎಂದು ವಾದಿಸುತ್ತಿದ್ದಾರೆ, ಇದಕ್ಕೆ ಸ್ಥಳೀಯ ಕೆಲ ಪ್ರಭಾವಿ ವ್ಯಕ್ತಿಗಳ ಸಹಕಾರವಿದೆ ಮುಂದಿನ ದಿನಗಳಲ್ಲಿ ಅದನ್ನು ಬಹಿರಂಗಪಡಿಸಲಾಗುವುದು, ಈ ಜಾಗ ಸರ್ಕಾರದ ಆಸ್ತಿ ಎಂಬುದಕ್ಕೆ ನಮ್ಮ ಬಳಿ ಸೂಕ್ತ ದಾಖಲಾತಿಗಳಿದ್ದು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದಾಗ ಅವರು ಸ್ವತಃ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಆ ಸ್ಥಳದ ಅಭಿವೃದ್ಧಿಗೆ ಒತ್ತು ನೀಡಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದ್ದಾರೆ, ಪುರಸಭೆ ಮುಖ್ಯಾಧಿಕಾರಿ ರಾಜಕೀಯ ಪ್ರೇರಿತವಾಗಿ ಈ ಸ್ಥಳ ಖಾಸಗಿ ವ್ಯಕ್ತಿಗೆ ಸೇರಿದ್ದು ಅಲ್ಲಿನ ನಿವಾಸಿಗಳಿಂದ ಖಾಸಗಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ ಹಣ ವಸೂಲಿ ಮಾಡಿ ನಿಮ್ಮ ಪರ ಹೋರಾಟ ಮಾಡುತ್ತೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ, ಅಲ್ಲಿನ ನಿವಾಸಿಗಳ ಬಳಿ ಅಷ್ಟೊಂದು ಹಣ ಹೊಂದಿಸಿಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು, ತಾಲ್ಲೂಕಿನ ಯುವ ಮುಖಂಡ ನೇರಳಕುಪ್ಪೆ ನವೀನ್ ಅವರ ಮುಖಾಂತರ ಹಂದಿಜೋಗಿ ನಿವಾಸಿಗಳ ಸಮಸ್ಯೆ ಬಗ್ಗೆ ತಿಳಿದು ನಂತರ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರ ಪರ ಹೋರಾಟ ಮಾಡುವುದಾಗಿ ತಿಳಿಸಿದ್ದು ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ಪರವಲ್ಲ ಹೊರತಾಗಿ ಮೂಲ ಸೌಕರ್ಯ ವಂಚಿತ ಹಂದಿಜೋಗಿ ಕಾಲೊನಿ ನಿವಾಸಿಗಳ ಪರವಾಗಿ ಎಂದು ಸ್ಪಷ್ಟಪಡಿಸಿ ಆ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಯಾವ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದರು.

ಯುವ ಮುಖಂಡ ನೇರಳೆಕುಪ್ಪೆ ನವೀನ್ ಮಾತನಾಡಿ ಹಂದಿಜೋಗಿ ಕಾಲೊನಿ ನಿವಾಸಿಗಳಿಗೆ ಮೂಲ ಸೌಕರ್ಯ ನೀಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ, ಅವರು ವಾಸಿಸುತ್ತಿರುವ ಸ್ಥಳ ಸರ್ಕಾರದ ಆಸ್ತಿ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಖಾಸಗಿ ವ್ಯಕ್ತಿಗಳು ಕಬಳಿಸಲು ಬಿಡುವುದಿಲ್ಲ ಎಂದರು.

Leave a Reply

Your email address will not be published. Required fields are marked *