ನಾನು ಚಾಮುಂಡಿ ಬೆಟ್ಟದ ಸಾವಿರಾರು ಮೆಟ್ಟಿಲು ಹತ್ತಿ ಉದ್ಘಾಟನೆಗೆ ಬಂದಿದ್ದೇನೆ:ಹಂಸಲೇಖ

ನಂದಿನಿ ಮೈಸೂರು

ನಾದ ಬ್ರಹ್ಮ ಹಂಸಲೇಖ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ

ಚಾಮುಂಡಿ ದೇವಿಯ ಮೂರ್ತಿಗೆ ಗಣ್ಯರಿಂದ ಪುಷ್ಪಾರ್ಚನೆ

ಮೈಸೂರು : ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಈ ಬಾರಿಯ ದಸರಾ ಉದ್ಘಾಟಕರಾದ ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕರಾದ ನಾದಬ್ರಹ್ಮ ಹಂಸಲೇಖ ಅವರು ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2023 ಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕರ್ನಾಟಕ ಏಕೀಕರಣ ಆಗಿ 50 ವರ್ಷ ತುಂಬಿದೆ. ಹಾಗೆಯೇ ನನ್ನ ಕಲೆಯ ಕಾಯಕಕ್ಕೆ 50 ವರ್ಷಗಳು ತುಂಬಿದೆ. ನನ್ನ 50 ವರ್ಷಗಳ ಕಲಾ ಜೀವನದಲ್ಲಿ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ನನ್ನ ಜೀವನದ ಅಮೂಲ್ಯ ಅವಕಾಶ. ನಾನು ಚಾಮುಂಡಿ ಬೆಟ್ಟದ ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಉದ್ಘಾಟನೆಗೆ ಬಂದಿದ್ದೇನೆ. ಈ ಅವಕಾಶಕ್ಕೆ ಎಲ್ಲರಿಗೂ ನನ್ನ ನಮನಗಳು ಎಂದು ಸ್ಮರಿಸಿದರು.

ನಾನು ಹಚ್ಚಿದ್ದು ಕನ್ನಡ ದೀಪ, ಹಚ್ಚಿದ್ದು ನಾನೂ ಆದರೂ ಅದರ ಚೈತನ್ಯ ಈ ನಾಡಿನ ಹಿರಿಯರದ್ದು, ದಸರಾ ಎನ್ನುವುದು ಒಂದು ಜೀವಂತ ಕಥಾ ಕಾವ್ಯ. ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯ ಈ ದಸರಾ ಆಚರಣೆಗೆ ಕಥಾವಸ್ತು. ಈ ಜೀವಂತ ದಸರಾ ಮುಂದೆ ಮಹಾ ಕಾವ್ಯವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.

ಕನ್ನಡದ ಭಾಷೆಗೆ ಮಿತಿಯಿದೆ ಆದರೆ ಅದರ ಭಾವಕ್ಕೆ ಮಿತಿಯಿಲ್ಲ. ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಕನ್ನಡದ ಶಾಂತಿ ಸಮೃದ್ಧಿಯನ್ನು ಹೆಚ್ಚಿಸಬೇಕು. ಕರ್ನಾಟಕದಲ್ಲಿ ವಾಸ ಮಾಡುತ್ತಾ ಇರುವ ಎಸ್ಟು ಜನರಿಗೆ ಕನ್ನಡ ಗೊತ್ತಿಲ್ಲ ಎಂಬ ಸಮೀಕ್ಷೆ ಆಗಿ, ಅವರಿಗೆ 30 ದಿನಗಳಲ್ಲಿ ಕನ್ನಡ ಕಲಿಸಿ, ಅವರಿಗೆ ಕನ್ನಡ ಪಟ್ಟ ಎಂಬ ಕಾರ್ಡ್ ನೀಡಬೇಕು. ಈ ಕಾರ್ಡ್ ಆಸ್ಪತ್ರೆ ಗಳಲ್ಲಿ ಬಿಪಿಎಲ್ ಕಾರ್ಡ್ ಗೆ ಸಿಗುವ ಸೌಲಭ್ಯಗಳು ಸಿಗಬೇಕು ಎಂದು ಕಾರ್ಪೊರೇಟ್ ಕಂಪನಿಗಳ ಕನ್ನಡಿಗರ ಒಂದು ತಂಡ ನನಗೆ ಸಲಹೆ ನೀಡಿ ಮನವಿ ಮಾಡಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಸಂಘಟನೆಗಳು ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಲು ಈ ಕಾರ್ಯ ಮಾಡುವಲ್ಲಿ ಮುಂದಾಗಬೇಕು. ಈ ಕಾರ್ಯದಲ್ಲಿ ನಾನು ಕೈ ಜೋಡಿಸುತ್ತೆನೆ. ಕುವೆಂಪು ಅವರು ಕನ್ನಡವನ್ನು ಉತ್ತುಂಗ ಶಿಖರಕ್ಕೆ ಏರಿಸಿದ್ದಾರೆ.

ಅಂಬಾರಿ ಹೊರುವ ಆನೆ ಅಭಿಮನ್ಯು ಬಗ್ಗೆ ಒಂದು ಮಾಹಿತಿ ಬಂತು. ಅಭಿಮನ್ಯು ಮಾವುತನ ಸಲಹೆಯಂತೆ ಮರದ ದಿಂಬಿಗಳನ್ನ ಲಾರಿಗೆ ಹಾಕುವಾಗ 2 ನ್ನು ಉಳಿಸಿ ಎಲ್ಲವನ್ನೂ ಹಾಕಿತು. ಉಳಿದ 2 ಧಿಂಬಿಗಳನ್ನು ಹಾಕಲು ನಿರಾಕರಿಸಿತು. ಅಧಿಕಾರಿಗಳ ಒತ್ತಾಯದ ಮೇರೆಗೆ ಮಾವುತ ಇನ್ನೆರಡು ದಿಂಬಿಗಳನ್ನು ಹಾಕಲು ಹೇಳಿದನು. ಆ ಧಿಂಬಿ ಗಳನ್ನು ಹಾಕಿದಾಗ ಎಲ್ಲಾ ದಿಂಬಿಗಳು ಕೆಳಕ್ಕೆ ಜಾರಿದವು. ಇದರಿಂದ ಪ್ರಾಣಿಗಳಿಗೆ ಲಾರಿಯಲ್ಲಿ ತುಂಬಬಹುದಾದ ಸಾಮರ್ಥ್ಯ ತಿಳಿದಿತ್ತು ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾತನಾಡಿ ನಾವು ದಸರಾ ಹಬ್ಬವನ್ನು ನವರಾತ್ರಿ ಹಬ್ಬ ಎಂದು ಕರೆಯುತ್ತೇವೆ. 10 ನೆಯ ದಿನ ಜಂಬೂ ಸವಾರಿ ನಡೆಯುತ್ತದೆ. ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ ಆಚರಣೆಯಾಗಿತ್ತು. ವಿಜಯನಗರ ಸಾಮ್ರಾಜ್ಯ ವೈಭವ ಯುತವಾಗಿತ್ತು. ಈ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಸೇರು ಬಳ್ಳ ಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ ಮೈಸೂರು ಅರಸರು ದಸರಾ ಹಬ್ಬವನ್ನು ಆಚರಣೆ ಮಾಡಲು ಪ್ರಾರಂಭಿಸಿದರು. ಈಗ ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ದಸರಾ ಆಚರಣೆಯ ಮೂಲಕ ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಹಾಗೂ ಪರಂಪರೆ ಯನ್ನು ಜನರಿಗೆ ಸಾರುವ ಕೆಲಸ ಮಾಡುತ್ತದೆ. ಕನ್ನಡ ನಾಡಿನ ಸಮೃದ್ಧಿ, ವೈಭವವನ್ನು ವಿಶ್ವಕ್ಕೆ ಸಾರುವ ಕೆಲಸವನ್ನು ನಾವು ದಸರಾ ಮೂಲಕ ಮಾಡುತ್ತಿದ್ದೇವೆ. ನಮ್ಮ ನಾಡು ಸಮೃದ್ಧವಾಗಿದೆ. ಕರ್ನಾಟಕ ನಾಡಿನ ಜನ ಪ್ರೀತಿ ವಿಶ್ವಾಸ, ಸಹಕಾರ ಗೌರವದ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಎಲ್ಲರೂ ಪ್ರೀತಿ ವಿಶ್ವಾಸದಿಂದ ಕಾಣಬೇಕು. ಸಂವಿಧಾನದ ಪೀಠಿಕೆಯಲ್ಲಿ ಕಾನೂನು ದೃಷ್ಟಿಯಿಂದ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ನಾವು ಎಲ್ಲಾ ಜನರಿಗೆ ಸ್ಥಿರ ಆದಾಯವನ್ನು ಬರುವಂತೆ ಮಾಡಿ ಕೊಂಡುಕೊಳ್ಳುವ ಶಕ್ತಿ ಬರುವಂತೆ ಮಾಡಲು 5 ಗ್ಯಾರೆಂಟಿ ಗಳನ್ನು ಘೋಷಣೆ ಮಾಡಿ 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ. 5 ನೇಯ ಗ್ಯಾರೆಂಟಿ ಯನ್ನು ಮುಂದಿನ ಜನವರಿಯಲ್ಲಿ ಜಾರಿಗೆ ತರುತ್ತೇವೆ. ಮುಂಗಾರು ಮಳೆ ಕೊರತೆಯಿಂದ 42 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 30 ಸಾವಿರ ಕೋಟಿ ರೂಪಾಯಿಗಳ ಬೆಳೆ ನಷ್ಟ ಆಗಿದೆ.
ಮಾನದಂಡಗಳ ಪ್ರಕಾರ 4850 ಕೋಟಿ ಬೆಳೆ ಹಾನಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 116 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ಹಿಂಗಾರು ಮಳೆ ಉತ್ತಮವಾಗಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ನಮ್ಮ ಕನ್ನಡ ಸಂಸ್ಕತಿಯನ್ನು ಬಿಂಬಿಸುವ ಆಚರಣೆ ದಸರಾ. ಭೂಮಿಯನ್ನು ಭಾಷೆಯನ್ನು ತಾಯಿಯ ಹೆಸರಿನಲ್ಲಿ ಕರೆಯುತ್ತೇವೆ. ನಮ್ಮ ನಾಡಿನ ಅಗ್ರ ದೇವತೆ ಚಾಮುಂಡಿತಾಯಿ. ಪ್ರಯತ್ನ ಮಾಡಿ ಸೋಲಬಹುದು ಆದರೆ ಪ್ರಾರ್ಥಿಸಿ ಸೋತಿಲ್ಲ ಎಂಬ ನಂಬಿಕೆ ಇಟ್ಟು ನಾಡಿಗೆ ಒಳ್ಳೆ ಮಳೆ ಬೆಳೆ ನೀಡುವಂತೆ ಪ್ರಾರ್ಥಿಸಲು ಇಲ್ಲಿ ಬಂದಿದ್ದೇವೆ ಎಂದರು.

ನಾವು ಚುನಾವಣೆಗೆ ಮುಂಚೆ ನಾನು ಮತ್ತು ಮಾನ್ಯ ಮುಖ್ಯಮಂತ್ರಿಗಳು ತಾಯಿ ಚಾಮುಂಡಿ ದೇವಿಗೆ 5 ಗ್ಯಾರೆಂಟಿ ಗಳನ್ನು ಜಾರಿಗೆ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಅದರಂತೆ ನಾವು ನುಡಿದಂತೆ ನಡೆದು 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಸುತ್ತಾ, ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಮೇಲೆ ಬೆಳಕು ಚೆಲ್ಲುವುದು ಮೈಸೂರು ದಸರಾ. ಮೈಸೂರು ದಸರಾ ನಾಡಿನ ಕಲೆ ಸಂಸೃತಿ, ಪರಂಪರೆಯನ್ನು ತಿಳಿಸುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಜನಪರ ಆಡಳಿತ, ಕಾಳಜಿ, ಬದ್ದತೆ ಮೈಸೂರು ದಸರಾದ ಪ್ರತೀಕ. ಮೈಸೂರಿನ ಜನರು ಶಾಂತಿಪ್ರಿಯರು ಎಂದು ತಿಳಿಸಿದರು.

ಸೆಪ್ಟೆಂಬರ್ 15 ರಂದು ಸಂವಿಧಾನ ಪೀಠಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಓದಿ, ಎಲ್ಲಾ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಏಕ ಕಾಲಕ್ಕೆ ಓದಲಾಯಿತು. ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರವನ್ನು ಮಾಡಿ ಚಾಮುಂಡಿ ಬೆಟ್ಟ ವನ್ನು ಅಭಿವೃದ್ಧಿ ಮಾಡಲು ಸರ್ಕಾರ ಕ್ರಮವಹಿಸಲಾಗಿದೆ. ಈ ಬಾರಿ ಮಳೆ ಕೊರತೆ ಆಗಿರುವುದರಿಂದ ಸಾಂಪ್ರದಾಯಿಕ ದಸರಾ ಆಚರಿಸುತ್ತಿದ್ದ, ಶಾಂತಿ ಸೌಹಾರ್ದತೆ ಯಿಂದ ಎಲ್ಲರೂ 9 ದಿನಗಳ ಕಾಲ ದಸರಾ ಆಚರಿಸೋಣ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರು ಮಾತನಾಡಿ ವಿಜಯ ದಶಮಿ ವಿಜಯದ ಒಂದು ಸಂಕೇತ. ಎಲ್ಲಾ ಶಕ್ತಿಯನ್ನು ಹೊಂದಿರುವ ತಾಯಿ ಚಾಮುಂಡೇಶ್ವರಿ ರಾಕ್ಷಸರನ್ನು ಸಂಹಾರ ಮಾಡಿದಳು. ಇಂದು ನಮ್ಮಲ್ಲಿಯೇ ರಾಕ್ಷಸ ಗುಣಗಳು ಇವೆ. ಇವನ್ನು ಬಿಟ್ಟು ಎಲ್ಲರೂ ಶಾಂತಿ ಸೌಹಾರ್ದತೆ ಯಿಂದ ನಡೆದುಕೊಂಡು ಹೋಗಬೇಕು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾಗೆ ಸೇರುತ್ತಾರೆ. 9 ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ಎಲ್ಲರೂ ಭಾಗಿಗಳಾಗಿ ಎಂದರು.

ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ, ಇಂಧನ ಇಲಾಖೆಯ ಸಚಿವರಾದ ಕೆ ಜೆ ಜಾರ್ಜ್, ಹಿಂದುಳಿದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಕೊಡಗು ಮೈಸೂರು ಲೋಕಸಭಾ ಸಂಸದರಾದ ಪ್ರತಾಪ್ ಸಿಂಹ ಮೈಸೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶಿವಕುಮಾರ್, ಶಾಸಕರಾದ ತನ್ವೀರ್ ಸೇಠ್, ಅನಿಲ್ ಕುಮಾರ್, ಶ್ರೀವತ್ಸ, ಜಿ ಡಿ ಹರೀಶ್ ಗೌಡ, ಡಿ ರವಿಶಂಕರ್, ಹರೀಶ್ ಗೌಡ, ದರ್ಶನ್ ದ್ರುವ ನಾರಾಯಣ್ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ ತಿಮ್ಮಯ್ಯ, ಉಪ ಮಹಾ ಪೌರರಾದ ಡಾ ರೂಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *