ಅಪ್ಪನ ಹೆಗಲ ಮೇಲೆ ಕುಳಿತು ನೋಡಿದ ದಸರಾ ನೆನೆದ ಸಿಎಂ ಸಿದ್ದರಾಮಯ್ಯ

ನಂದಿನಿ ಮೈಸೂರು

ನಾನು ಏಳು ವರ್ಷದ ಹುಡುಗನಿದ್ದಾಗ ನನ್ನ ತಂದೆಯವರು ಹೆಗಲ ಮೇಲೆ ಕೂರಿಸಿಕೊಂಡು ದಸರಾ ತೋರಿಸಿದ್ರೂ.ಚಿನ್ನದ ಅಂಬಾರಿಯಲ್ಲಿ ಕುಳಿತ ಮಹಾರಾಜರಿಗೆ ಕೈಮುಗಿಯುವಂತೆ ಹೇಳುತ್ತಿದ್ರೂ ಅಂತ ಸಿಎಂ ಸಿದ್ದರಾಮಯ್ಯರವರು ಬಾಲ್ಯದಲ್ಲಿ ದಸರಾ ನೋಡಿದ್ದನ್ನ ನೆನಪು ಮಾಡಿಕೊಂಡರು.

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಾವು ದಸರಾ ಹಬ್ಬವನ್ನು ನವರಾತ್ರಿ ಹಬ್ಬ ಎಂದು ಕರೆಯುತ್ತೇವೆ. 10 ನೆಯ ದಿನ ಜಂಬೂ ಸವಾರಿ ನಡೆಯುತ್ತದೆ. ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ ಆಚರಣೆಯಾಗಿತ್ತು. ವಿಜಯನಗರ ಸಾಮ್ರಾಜ್ಯ ವೈಭವ ಯುತವಾಗಿತ್ತು. ಈ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಸೇರು ಬಳ್ಳ ಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ ಮೈಸೂರು ಅರಸರು ದಸರಾ ಹಬ್ಬವನ್ನು ಆಚರಣೆ ಮಾಡಲು ಪ್ರಾರಂಭಿಸಿದರು. ಈಗ ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ದಸರಾ ಆಚರಣೆಯ ಮೂಲಕ ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಹಾಗೂ ಪರಂಪರೆ ಯನ್ನು ಜನರಿಗೆ ಸಾರುವ ಕೆಲಸ ಮಾಡುತ್ತದೆ. ಕನ್ನಡ ನಾಡಿನ ಸಮೃದ್ಧಿ, ವೈಭವವನ್ನು ವಿಶ್ವಕ್ಕೆ ಸಾರುವ ಕೆಲಸವನ್ನು ನಾವು ದಸರಾ ಮೂಲಕ ಮಾಡುತ್ತಿದ್ದೇವೆ. ನಮ್ಮ ನಾಡು ಸಮೃದ್ಧವಾಗಿದೆ. ಕರ್ನಾಟಕ ನಾಡಿನ ಜನ ಪ್ರೀತಿ ವಿಶ್ವಾಸ, ಸಹಕಾರ ಗೌರವದ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಎಲ್ಲರೂ ಪ್ರೀತಿ ವಿಶ್ವಾಸದಿಂದ ಕಾಣಬೇಕು. ಸಂವಿಧಾನದ ಪೀಠಿಕೆಯಲ್ಲಿ ಕಾನೂನು ದೃಷ್ಟಿಯಿಂದ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ನಾವು ಎಲ್ಲಾ ಜನರಿಗೆ ಸ್ಥಿರ ಆದಾಯವನ್ನು ಬರುವಂತೆ ಮಾಡಿ ಕೊಂಡುಕೊಳ್ಳುವ ಶಕ್ತಿ ಬರುವಂತೆ ಮಾಡಲು 5 ಗ್ಯಾರೆಂಟಿ ಗಳನ್ನು ಘೋಷಣೆ ಮಾಡಿ 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ. 5 ನೇಯ ಗ್ಯಾರೆಂಟಿ ಯನ್ನು ಮುಂದಿನ ಜನವರಿಯಲ್ಲಿ ಜಾರಿಗೆ ತರುತ್ತೇವೆ. ಮುಂಗಾರು ಮಳೆ ಕೊರತೆಯಿಂದ 42 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 30 ಸಾವಿರ ಕೋಟಿ ರೂಪಾಯಿಗಳ ಬೆಳೆ ನಷ್ಟ ಆಗಿದೆ.
ಮಾನದಂಡಗಳ ಪ್ರಕಾರ 4850 ಕೋಟಿ ಬೆಳೆ ಹಾನಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 116 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ಹಿಂಗಾರು ಮಳೆ ಉತ್ತಮವಾಗಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *