ಸಹಕಾರ ಸಂಘಗಳು ರೈತರಿಗೆ ಸಂಜೀವಿನಿ: ಶಾಸಕ ಜಿ.ಟಿ.ದೇವೇಗೌಡ

 

ಮೈಸೂರು:3 ಫೆಬ್ರವರಿ 2022

ನಂದಿನಿ ಮೈಸೂರು

ರೈತರಿಗೆ ಸಹಕಾರ ಸಂಘಗಳು ಸಂಜೀವಿನಿ ಇದ್ದಂತೆ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಹೇಳಿದರು.

ಇಂದು ವಿಜಯ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ನಿ. ಹಾಗೂ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ನಿ., ಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಸಹಕಾರ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳು ರೈತರಿಗೆ ನೆರವಾಗುವ ಮೂಲಕ ರೈತರನ್ನು ಉಳಿಸಿ, ಬೆಳೆಸಬೇಕು. ರೈತರನ್ನು ಕಾಪಾಡುತ್ತಿರುವುದು ಸಹಕಾರ ಸಂಘಗಳು. ರೈತರಿಗೆ ಸಾಲ ಕೊಡುವುದರ ಜೊತೆಗೆ ಕೃಷಿ ಕುರಿತು ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ನಾನು ಈ ಮಟ್ಟಕ್ಕೆ ಬೆಳದಿದ್ದರೆ ಸಹಕಾರ ಕ್ಷೇತ್ರ ಬಹಳ ಮುಖ್ಯ ಕಾರಣ. ವಾಣಿಜ್ಯ ಬ್ಯಾಂಕ್ ನವರು 5-6 ವರ್ಷ ರೈತರಿಗೆ ಸಾಲ ಕೊಟ್ಟರು. ಬಳಿಕ ಸಾಲ ಕೊಡುವುದನ್ನು ನಿಲ್ಲಿಸಿದರು. ಆದರೆ ಎಂಸಿಡಿಸಿಸಿ ಬ್ಯಾಂಕ್ 8 ಬ್ಯಾಂಕ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ರೈತರಿಗೆ ಸಾಲ ಕೊಡಲು ಶುರು ಮಾಡಿತ್ತು. ಅಂದಿನಿಂದ ರೈತರಿಗೆ ವಿವಿಧ ಯೋಜನೆಗಳ ಮೂಲಕ ಸಾಲ ಕೊಡುತ್ತಿದೆ ಎಂದು ಹೇಳಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಮಾತನಾಡಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಂದ ಮೇಲೆ ಎಸ್ ಅಪೆಕ್ಸ್ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗಳ ವತಿಯಿಂದ ಕಳೆದ ಎರಡು ಸಾಲಿನಲ್ಲಿ 2019-20 ನೇ ಸಾಲಿನಲ್ಲಿ ಇಡೀ ರಾಜ್ಯದಲ್ಲಿ 22.50 ಲಕ್ಷ ಕುಟುಂಬಗಳಿಗೆ 13,500 ಸಾವಿರ ಕೋಟಿ ಸಾಲವನ್ನು ಕೊಟ್ಟೆ. ಬಜೆಟ್ ನಲ್ಲಿ ಟಾರ್ಗೆಟ್ ನಿಗದಿ ಮಾಡಿದ್ದರು. ಅದರಂತೆ ಕಳೆದ ವರ್ಷ ಸುಮಾರು 25 ಲಕ್ಷ ರೈತರಿಗೆ 17,500 ಸಾವಿರ ಕೋಟಿ ಸಾಲವನ್ನು ಮಂಜೂರು ಮಾಡಿದ್ದೇವೆ. ಈ ಬಾರಿ 30 ಲಕ್ಷ ರೈತ ಕುಟುಂಬಗಳಿಗೆ 20 ಸಾವಿರ ಕೋಟಿ ಸಾಲವನ್ನು ಕೊಡಬೇಕೆಂಬ ಗುರಿಯನ್ನು ಸಚಿವರು ನೀಡಿದ್ದಾರೆ. ಈಗಾಗಲೇ ಶೇ.75 ರಷ್ಟು ಗುರಿಯನ್ನು ಎಲ್ಲ ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ತಲುಪಲಾಗಿದೆ. ಹೀಗಾಗಿ 8 ಲಕ್ಷ ರೈತ ಕುಟುಂಬಗಳಿಗೆ ನಾವು ಹೆಚ್ಚುವರಿಯಾಗಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದೇವೆ ಎಂದರು.

ಮೈಸೂರು, ಚಾಮರಾಜನಗರ ಡಿಸಿಸಿ ಬ್ಯಾಂಕ್ ನಲ್ಲಿ ಈ ಬಾರಿ 1,250 ಕೋಟಿ ಸಾಲವನ್ನು ನೀಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಡಿಸೆಂಬರ್ ಅಂತ್ಯಕ್ಕೆ ಈ ಸಾಲವನ್ನು ವಿತರಣೆ ಮಾಡಿದ್ದೇವೆ. ಕಳೆದ 3 ವರ್ಷ ಅವಧಿಯಲ್ಲಿ 660 ಕೋಟಿ ಸಾಲವನ್ನು ಕೊಟ್ಟಿದ್ದೇವೆ. ಕಳೆದ ಎರಡುವರೆ ವರ್ಷಗಳಲ್ಲಿ 1,250 ಕೋಟಿ ಸಾಲವನ್ನು ರೈತರಿಗೆ ಕೊಟ್ಟಿದ್ದೇವೆ. 45 ಸಾವಿರ ರೈತ ಕುಟುಂಬಗಳಿಗೆ 660 ಕೋಟಿ ಸಾಲವನ್ನು, 91 ಸಾವಿರ ರೈತ ಕುಟುಂಬಗಳಿಗೆ 1,250 ಕೋಟಿ ಸಾಲವನ್ನು ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಸಾಲ ಮನ್ನಾ ಹಣವನ್ನು ಹಂತ ಹಂತವಾಗಿ ಕೊಡಿಸಿಕೊಟ್ಟಿದ್ದಾರೆ. 50 ಕೋಟಿ ಸಾಲ ಮನ್ನಾ ಹಣ ಬಾಕಿ ಬರಬೇಕಿತ್ತು. ಈಗಾಗಲೇ 31 ಕೋಟಿ ಸಾಲ ಮನ್ನಾ ಹಣವನ್ನು ಕೊಡಿಸಿಕೊಟ್ಟಿದ್ದಾರೆ. 19 ಕೋಟಿ ಬಾಕಿ ಇದೆ. ಈಗ ಪುನಃ 60 ಕೋಟಿ ಸಾಲ ಮನ್ನಾ ಹಣ ಕೊಡಿಸುತ್ತಿದ್ದಾರೆ ಎಂದು ಹೇಳಿದರು.

ಎಂಸಿಡಿಸಿಸಿ ಬ್ಯಾಂಕ್ ಗೆ ಎ ಗ್ರೇಡ್ ನೀಡಿದೆ. ಡಿಸಿಸಿ ಬ್ಯಾಂಕ್ ನಲ್ಲಿ 377 ಕೋಟಿ ಡೆಪಾಸಿಟ್ ಇತ್ತು. ಎರಡು ವರ್ಷಗಳಲ್ಲಿ 750 ಕೋಟಿ ಡೆಪಾಸಿಟ್ ಮಾಡಿದ್ದೇವೆ. 660 ಕೋಟಿ ಇದ್ದ ಸಾಲವನ್ನು 1250 ಕೋಟಿ ಸಾಲ ನೀಡಿಕೆ ಏರಿಸಿದ್ದೇವೆ. 27 ಲಕ್ಷ ಲಾಭ ಇತ್ತು. ಈಗ 4 ಕೋಟಿ ಲಾಭವನ್ನು ಮಾಡಿದ್ದೇವೆ. ಈ ಬಾರಿ 10 ಕೋಟಿ ಲಾಭವನ್ನು ಮಾಡುತ್ತೇವೆ ಎಂಬ ಭರವಸೆ ಇದೆ ಎಂದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಬಹಳ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಅಂತಹವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಶಸ್ತಿ ನೀಡಿರುವುದು ಬಹಳ ಸಂತಸದ ವಿಷಯ. ಈ ಬಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಸಹಕಾರ ಸಂಸ್ಥೆಗಳನ್ನು ಗುರುತಿಸಿ ಅವರಿಗೂ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಉಳಿಯಬೇಕು, ಬೆಳೆಯಬೇಕು. ಸಹಾಕಾರಿ ಸಂಸ್ಥೆಗಳನ್ನು ಉಳಿಸುವುದು ಬಹಳ ಮುಖ್ಯವಾದದ್ದು. ಹೀಗಾಗಿ ಜಿಲ್ಲಾ ಮಟ್ಟದಲ್ಲಿರುವ ಪ್ರಶಸ್ತಿ ಪ್ರದಾನವನ್ನು ರಾಜ್ಯ ಮಟ್ಟದಲ್ಲೂ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವಾರದ ಶ್ರೀ ಎಸ್.ಟಿ.ಸೋಮಶೇಖರ್, ಮೈಮುಲ್ ನ ಅಧ್ಯಕ್ಷರಾದ ಪಿ.ಎಂ.ಪ್ರಸನ್ನ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *