ಮಾಡ್ರಹಳ್ಳಿ ಸರಕಾರಿ ಶಾಲೆಯಲ್ಲಿ ಬಹುಮಾಧ್ಯಮ ಬೋಧನಾ ವ್ಯವಸ್ಥೆ

ಮೈಸೂರು:20 ಫೆಬ್ರವರಿ 2022

 

 

ನಂದಿನಿ ಮೈಸೂರು

ಖಾಸಗಿ ವಿದ್ಯಾಸಂಸ್ಥೆಗಳ ಅಪರಿಮಿತ ವೇಗದ ಪೈಪೋಟಿ ಸರಕಾರಿ ಶಾಲೆಗಳಿಗೆ ಕುತ್ತು ತರುತ್ತಿರುವ ನಡುವೆಯೇ, ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ನಿರಂತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಮಾಡ್ರಹಳ್ಳಿ ಗ್ರಾಮದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೆಚ್ಚುಗೆಗೆ ಪಾತ್ರವಾಗಿದೆ.

ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವುದು ಮತ್ತು ಆ ಮೂಲಕ ವಿದ್ಯಾರ್ಥಿಗಳ ಜ್ಞಾನವೃದ್ದಿಗೆ ಶ್ರಮಿಸುವಲ್ಲಿ ಶಾಲೆಯ ಶಿಕ್ಷಕರು ನಿರಂತರ ಆಸಕ್ತಿ ವಹಿಸುತ್ತಿರುವ ಪರಿಣಾಮ, ಶಾಲೆಯು ಇದೀಗ “ಬಹುಮಾಧ್ಯಮ ಆಧಾರಿತ ಬೋಧನಾ ವ್ಯವಸ್ಥೆ” (Multimedia Based Teaching System) ಅಳವಡಿಸಿಕೊಂಡಿದೆ.

ನಾಡು-ನುಡಿಗಾಗಿ ಅನೇಕ ವರ್ಷಗಳಿಂದ ನಿರಂತರ ಕಾರ್ಯಕ್ರಮಗಳನ್ನು ರೂಪಿಸಿ ಜನಮನ್ನಣೆ ಗಳಿಸಿರುವ ಬೆಂಗಳೂರಿನ ‘ಅವಿರತ ಪ್ರತಿಷ್ಠಾನವು’ ಶಾಲೆಗೆ ಅತ್ಯಾಧುನಿಕ ಪ್ರೊಜೆಕ್ಟರ್, 100 ಅಂಗುಲದ ಸ್ಕ್ರೀನ್ ಮತ್ತು ಬ್ಲೂಟೂತ್ ಸ್ಪೀಕರ್ ಅನ್ನು ಕೊಡುಗೆಯಾಗಿ ನೀಡಿದೆ.

ಶನಿವಾರ ಈ ಉಪಕರಣಗಳನ್ನು ನೀಡಿದ ಅವಿರತ ಬಳಗದ ಸದಸ್ಯರು, ಮಕ್ಕಳಲ್ಲಿ ಮಕ್ಕಳಾಗಿ ಆನಂದಿಸಿದರು. ಬಳಗದ ಗುರುಪ್ರಸಾದ್, ಹರೀಶ್ ಮತ್ತು ರೋಹಿತ್ ಶಾಲೆಯ ಕಾರ್ಯಚಟುವಟಿಕೆ ಗಳನ್ನು ಗಮನಿಸಿ ಶಿಕ್ಷಕರ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು.

ಶಾಲೆಯು ಒಂದೊಮ್ಮೆ 100 ಕ್ಕು ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿತ್ತು. ಆದರೆ, ಖಾಸಗಿ ಶಾಲೆಗಳು ಸುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾದ ಕಾರಣ ವಿದ್ಯಾರ್ಥಿಗಳ ನೋಂದಣಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಆದರೆ ಶಿಕ್ಷಕರ ನಿರಂತರ ಶ್ರಮದ ಫಲ ಮತ್ತೆ ಹಾಜರಾತಿ ಹೆಚ್ಚುತ್ತಿದೆ. ಮುಖ್ಯವಾಗಿ, 2017 ರ ಸಾಲಿನಲ್ಲಿ ಜಿಲ್ಲೆಯ ಉತ್ತಮ ಶಾಲೆಗಳಲ್ಲಿ ಒಂದು ಎಂದು ಶಿಕ್ಷಣ ಇಲಾಖೆಯ ಪ್ರಶಸ್ತಿಗೂ ಭಾಜನವಾಗಿತ್ತು.

ಶಾಲೆಯ ವಿದ್ಯಾರ್ಥಿಗಳು ಇನ್ಸ್ಪೈರ್ ರಾಷ್ಟ್ರೀಯ ವಿಜ್ಞಾನ ಮಾದರಿಗಳ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳ ಕಾಲ ರಾಜ್ಯ ಮಟ್ಟದ ಸುತ್ತಿನವರೆಗು ಆಯ್ಕೆಯಾಗಿದ್ದರು.

ಶಾಲೆಗೆ ಬಹುಮಾಧ್ಯಮ ಆಧಾರಿತ ಬೋಧನಾ ವ್ಯವಸ್ಥೆ ಗೆ ಬೇಕಾದ ಉಪಕರಣಗಳ ಅಗತ್ಯತೆಯನ್ನು ಶಿಕ್ಷಕ ವರ್ಗ ಈಚೆಗೆ ಹಿರಿಯ ಪತ್ರಕರ್ತ ಎಂ. ಟಿ. ಶಿವಕುಮಾರ್ ಅವರ ಬಳಿ ಪ್ರಸ್ತಾಪಿಸಿತ್ತು. ಅವಿರತ ಬಳಗದ ಸದಸ್ಯರೂ ಆಗಿರುವ ಶಿವಕುಮಾರ್ ಈ ವಿಚಾರವನ್ನು ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಗೌಡ ಅವರಲ್ಲಿ ತಿಳಿಸಿದ್ದರು.

ನಾವು ಪ್ರಸ್ತಾಪ ಮಾಡಿದ ಎರಡೇ ವಾರದಲ್ಲಿ ಈ ಸೌಲಭ್ಯಗಳು ಒದಗಿದ್ದು ಸಂತಸದ ಸಂಗತಿ ಎನ್ನುತ್ತಾರೆ ಶಿಕ್ಷಕ ಶಾಂತಕುಮಾರ್.

ಶಾಲೆಯು ಈ ಉಪಕರಣಗಳನ್ನು ನೀಡಿದ ಅವಿರತ ಬಳಗಕ್ಕೆ ಆಭಾರಿ ಹಾಗೂ ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿ ಮಕ್ಕಳ ಜ್ಞಾನವೃದ್ದಿಗೇ ಶ್ರಮಿಸುತ್ತದೆ ಎನ್ನುತ್ತಾರೆ ಮುಖ್ಯಶಿಕ್ಷಕ ಮಹೇಶ್.

ಶಿಕ್ಷಕಿಯರಾದ ವಿ. ಗೀತಾಮಣಿ ಮತ್ತು ಡಿ. ಬಿ. ರೇಣುಕಾ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮತ್ತು ಶಾಲೆಯ ಕಾರ್ಯಚಟುವಟಿಕೆಗಳ ವಿವರಗಳನ್ನು ಹಂಚಿಕೊಂಡರು.ಇದರಿಂದ ಪ್ರೇರಿತರಾದ ಅವಿರತ ಬಳಗದ ಸದಸ್ಯರು, ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಮತ್ತು ಗಣಿತ ಪ್ರಯೋಗಾಲಯ ಸ್ಥಾಪನೆಗೆ ಅವಿರತ ಪ್ರತಿಷ್ಠಾನದ ವತಿಯಿಂದ ಶ್ರಮಿಸುವ ಭರವಸೆ ನೀಡಿದರು.

ಹರೀಶ್ ಅವರು ಶಾಲೆಗೆ ಎರಡು ನೀರಿನ ಶುದ್ಧೀಕರಣ ಸೆಟ್ ಗಳನ್ನೂ ನೀಡಿದರು.

ಪತ್ರಕರ್ತ ಎಂ. ಟಿ. ಶಿವಕುಮಾರ್, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ರಾಜೇಶ್, ಎಸ್. ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಉಪಾಧ್ಯಕ್ಷ ಸುಂದರಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *