ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ

ಮೈಸೂರು:15 ಜುಲೈ 2022

ನಂದಿನಿ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಮೂರನೇ ಆಷಾಢ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ.

ಬೆಳಿಗ್ಗೆ 3.30ರಿಂದಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ಇಂದು ತಾಯಿ ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಭಿಷೇಕ, ಸಹಸ್ರ ನಾಮಾರ್ಚನೆ ಹಾಗೂ ಮಹಾಮಂಗಳಾರತಿಗಳು ನಡೆದಿವೆ. ಬೆಳಿಗ್ಗೆ 5.30ರಿಂದಲೇ ಭಕ್ತರಿಗೆ ತಾಯಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸರತಿ ಸಾಲಿನಲ್ಲಿಯೇ ತೆರಳಿ ಭಕ್ತರು ತಾಯಿಯ ದರ್ಶನವನ್ನು ಪಡೆಯುತ್ತಿದ್ದಾರೆ. ವಿವಿಧ ಬಗೆಯ ಹೂವಿನಿಂದ ದೇವಾಲಯದ ಒಳ ಆವರಣವನ್ನು ಸಿಂಗರಿಸಲಾಗಿದೆ. ಕೆಲವು ಭಕ್ತರು ಮೆಟ್ಟಿಲಿನ ಮೂಲಕ ತೆರಳಿ ತಾಯಿಯ ದರ್ಶನವನ್ನು ಪಡೆದರು. ಇಂದು ಮಳೆರಾಯ ಕೊಂಚ ಬಿಡುವು ಪಡೆದಿದ್ದು ತಾಯಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾದಂತಾಗಿದೆ.

ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಮಾತನಾಡಿ ಆಷಾಢ ಮಾಸದ ಮೂರನೇ ಶುಕ್ರವಾರ ಇಂದು ಬೆಳಿಗ್ಗೆ 3.30ರಿಂದ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಅಲಂಕಾರವಾಗಿದೆ. ಹಾಗೆ ಲಕ್ಷ್ಮಿ ಅಲಂಕಾರ ಮಾಡಲಾಗಿದೆ. ಎಂದಿನಂತೆ ಬೆಳಿಗ್ಗೆ 5.30ರಿಂದ ರಾತ್ರಿ 9.30ರವರೆಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಮುಂದುವರಿಯಲಿದೆ. ಮುಂದಿನ ಶುಕ್ರವಾರವೂ ಕೂಡ ಇದೇ ರೀತಿ ಕಾರ್ಯಕ್ರಮ ಮುಂದುವರಿದುಕೊಂಡು ಹೋಗತ್ತೆ. 20ನೇ ತಾರೀಖು ವರ್ಧಂತಿ ಇರುವುದರಿಂದ ವಿಶೇಷವಾಗಿರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ಬರುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *