ಪ್ರಕೃತಿಯಲ್ಲಿ ಏನಿಲ್ಲ ಎನ್ನುವಂತಿಲ್ಲ ಎಲ್ಲವೂ ಇದೆ: ಗೀತಾ ಶಿವರಾಜ್ ಕುಮಾರ್

ನಂದಿನಿ ಮೈಸೂರು

ಪ್ರಕೃತಿಯಲ್ಲಿ ಏನಿಲ್ಲ ಎನ್ನುವಂತಿಲ್ಲ ಎಲ್ಲವೂ ಇದೆ: ಗೀತಾ ಶಿವರಾಜ್ ಕುಮಾರ್

ಮೈಸೂರು: ಪ್ರತಿದಿನವೂ ಶಾಲಾ ಆಟ,ಪಾಠದಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡು, ಸಹ ವಿದ್ಯಾರ್ಥಿಗಳೊಂದಿಗೆ ಶಾಲೆಯ ತರಗತಿಯಲ್ಲೇ ಒಂದು ರೀತಿ ಏಕತಾನತೆಯಲ್ಲಿ ಇರುತ್ತಿದ್ದ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ನಂಜನಗೂಡಿನ ರಸ್ತೆಯಲ್ಲಿರುವ ಶಕ್ತಿಧಾಮ ಶಾಲೆಯ ವಿದ್ಯಾರ್ಥಿಗಳು ಶಾಲಾ ಕೊಠಡಿಯ ಗೂಡಿನಿಂದಾಚೆಗೂ ಹಾರಿ ಬಂದು ಹಕ್ಕಿಗಳೊಂದಿಗೆ ಹಕ್ಕಿಗಳಾಗಿ ಶನಿವಾರ ಬೆಳ್ಳಂ ಬೆಳಗ್ಗೆ ಕುಕ್ಕರಹಳ್ಳಿ ಕೆರೆಯಲ್ಲಿ ವಿವಿಧ ಪಕ್ಷಿ ವೀಕ್ಷಣೆ ಮಾಡಿ ಸಂಭ್ರಮಿಸಿ ಸಂತಸದಿಂದ ಮಿಂದೆದ್ದರು.

ಮುಂಜಾನೆ ೬ ಗಂಟೆಯ ಸುಮಾರಿಗೆ ಶಾಲಾ ವಾಹನದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನ ಶಕ್ತಿಧಾಮದಿಂದ ಹೊರಟ ವಿದ್ಯಾರ್ಥಿಗಳು, ಬೆಳಗ್ಗೆ ೬.೩೦ರಿಂದ ೮.೩೦ರವರೆಗೆ ಸುದೀರ್ಘ ಎರಡು ಗಂಟೆಗಳ ಕಾಲ ನಮ್ಮ ರಾಷ್ಟ್ರಕವಿ ಕುವೆಂಪು ಅವರಿಗೆ ಅತ್ಯಂತ ಪ್ರಿಯವಾಗಿದ್ದ ಮತ್ತು ಅನೇಕ ಕಾವ್ಯ ಮೇರುಗಳ ಸೃಷ್ಠಿಗೆ ಸ್ಫೂರ್ತಿಯಾಗಿರುವ ಚಾರಿತ್ರಿಕ ಮಹತ್ವದ ಕುಕ್ಕರಹಳ್ಳಿ ಕೆರೆಯ ನ್ನು ಪಕ್ಷಿ ವೀಕ್ಷಣೆಯೊಡನೆ ಸುತ್ತು ಹಾಕಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಕರೂ ಆದ ಶಕ್ತಿಧಾಮ ಶಾಲೆಯ ಶಿಕ್ಷಣಾಧಿಕಾರಿ ಮಂಜುಳಾ ಮಿರ್ಲೆ ಅವರ ಸಾರಥ್ಯದಲ್ಲಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಪಕ್ಷಿ ತಜ್ಞ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ದೂರದರ್ಶಕ ಯಂತ್ರ (ಬೈನಾಕುಲರ್) ಹಿಡಿದು ಪಕ್ಷಿಗಳ ಚಲನ ವಲನಗಳನ್ನು ಗಮನಿಸಿ ಖುಷಿ ಗೊಂಡರು.

ಬಾತುಕೋಳಿ(ಸ್ಪಾಟ್ ಬಿಲ್ಡ್ ಡಕ್), ಕೂಟ್, ಪರ್ಪಲ್ ಮೊರ್‌ಹೆನ್, ಇಂಡಿಯನ್ ಮೊರ್‌ಹೆನ್, ಕೊಕ್ಕರೆ (ಮೀಡಿಯಂ ಇಗ್ರೇಟ್, ಲಿಟಲ್ ಇಗ್ರೇಟ್), ಗ್ರೇ ಹೆರಾನ್, ಪಾಂಡ್ ಹೆರಾನ್, ವೈಟ್ ಥ್ರೋಟೆಡ್ ಕಿಂಗ್‌ಫಿಷರ್, ಡಬ್‌ಚಿಕ್, ಪೇಂಟೆಡ್ ಶಾರ್ಕ್, ಹೆಜ್ಜಾರ್ಲೆ, ಕೆಂಪು ತಲೆಯ ಐಬೀಸ್, ಡಾರ್ಟರ್, ಕಾರ್ಮೊರೆಂಟ್, ಬ್ರೌನ್ ವಿಂಗ್ಡ್ ಜಕನಾ ಸೇರಿ ಸುಮಾರು ೧೮ಕ್ಕೂ ಹೆಚ್ಹು ಪ್ರಭೇದದ ಪಕ್ಷಿಗಳು ವಿದ್ಯಾರ್ಥಿಗಳಿಗೆ ಕಾಣಿಸಿಕೊಂಡವು.
ಶಕ್ತಿ ಧಾಮ ಶಾಲೆಯಲ್ಲಿ ಒಟ್ಟು ೨೦೦ ವಿದ್ಯಾರ್ಥಿಗಳಿದ್ದು, ಮೊದಲ ಸುತ್ತಿನಲ್ಲಿ ೯ ಹಾಗೂ ೧೦ನೇ ತರಗತಿಯ ಆಯ್ದ ೫೦ ಮಂದಿ ವಿದ್ಯಾರ್ಥಿಗಳನ್ನು ಪಕ್ಷಿ ವೀಕ್ಷಣೆ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಯ ಅನುಭವ ನೀಡಲಾಗುವುದು ಎಂದು ಶಿಕ್ಷಣಾಧಿಕಾರಿ ಮಂಜುಳಾ ಮಿರ್ಲೆ ಅವರು ತಿಳಿಸಿದರು.

ಪಕ್ಷಿ ಪ್ರೇಮ ಮತ್ತು ಪರಿಸರ ಜಾಗೃತಿ: ಈ ಸಂದರ್ಭದಲ್ಲಿ ಮಾತನಾಡಿದ ಶಕ್ತಿಧಾಮದ ಅಧ್ಯಕ್ಷರೂ ಆದ ಖ್ಯಾತ ಚಲನಚಿತ್ರ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಅವರು, ಪ್ರಕೃತಿಯಲ್ಲಿ ಏನಿಲ್ಲ ಎನ್ನುವಂತಿಲ್ಲ ಇಲ್ಲಿ ಎಲ್ಲವೂ ಇದೆ. ಇದೊಂದು ರೀತಿ ಭೂರಮೆಯ ಸ್ವರ್ಗವಾಗಿದೆ ಎನ್ನಬಹುದು.ಆದ್ದರಿಂದ ಪ್ರತಿ ಯೊಬ್ಬ ವಿದ್ಯಾರ್ಥಿಗಳೂ ಪ್ರಕೃತಿಗೆ ತೆರೆದುಕೊಳ್ಳುವುದು ಬಹುಮುಖ್ಯ. ಅದರಲ್ಲೂ ಪಕ್ಷಿ ವೀಕ್ಷಣೆ ಎಂಬುದು ಆಸಕ್ತಿ ದಾಯಕವಾಗಿದ್ದು ವಿಶೇಷ ಅನುಭವ ನೀಡುತ್ತದೆ. ಇದು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಜ್ಞಾನಾರ್ಜನೆಗೊಳಿಸುವ ಒಂದು ಪ್ರಯತ್ನವಾಗಿದೆ ಎಂದ ಅವರು,
ನಾನು ರಂಗನತಿಟ್ಟು ಸೇರಿದಂತೆ ಅನೇಕ ಪಕ್ಷಿಧಾಮಗಳನ್ನು ನೋಡಿದ್ದೇನೆ. ನನ್ನ ಪತಿ ಶಿವರಾಜ್ ಕುಮಾರ್ ಅವರೊಂದಿಗೆ ಕುಕ್ಕರಹಳ್ಳಿ ಕೆರೆಗೂ ವಾಯುವಿಹಾರಕ್ಕೆ ಬಂದಿದ್ದೇನೆ.ವಿಶೇಷವೆಂದರೆ ವಿದ್ಯಾರ್ಥಿಗಳೊಂದಿಗೆ ಬಂದು ಪಕ್ಷಿ ವೀಕ್ಷಣೆ ಮಾಡುತ್ತಿರುವುದು ಹೆಚ್ಚಿನ ಖುಷಿ ನೀಡಿದೆ ಎಂದು ಸಂತಸ ಹಂಚಿಕೊಂಡರು.

ಮುಂಬರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸುವ ಬಗ್ಗೆ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಗುಟ್ಟು ಬಿಟ್ಟು ಕೊಡದೆ ಬಹಳ ಜಾಣತನದಿಂದ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಕುತೂಹಲವನ್ನು ಉಳಿಸಿಕೊಂಡರು. ನಾವು ಪಕ್ಷಿ ವೀಕ್ಷಣೆಗೆ ಬಂದಿದ್ದೇವೆ. ಇಲ್ಲಿ ರಾಜಕೀಯ ಮಾತನಾಡುವುದು ಅಷ್ಟು ಸೂಕ್ತವಲ್ಲ. ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಬೇರೆ ಸಂದರ್ಭದಲ್ಲಿ ಇನ್ನೊಮ್ಮೆ ಮಾತನಾಡುತ್ತೇನೆ. ಈಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಗೀತಾ ಶಿವರಾಜ್‌ಕುಮಾರ್, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಠ್ಯಕ್ರಮ ಬದಲಾದರೆ ಒಳ್ಳೆಯದು. ವಿದ್ಯಾರ್ಥಿಗಳು ಸರಿಯಾದ ವಿಚಾರಗಳನ್ನು ಕಲಿಯಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರವು ತೆಗೆದು ಕೊಂಡಿರುವ ನಿರ್ಧಾರ ಸೂಕ್ತವಾಗಿದೆ ಎಂದರು.

ಪತ್ರಕರ್ತರೂ ಆದ ಸಾಹಿತಿ
ಬನ್ನೂರು ಕೆ.ರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪಕ್ಷಿತಜ್ಞೆ ಮತ್ತು ಪರಿಸರವಾದಿ ಗೋಪಮ್ಮ ಸೇರಿದಂತೆ ಅನೇಕ ಮಂದಿ ಪಕ್ಷಿ ವೀಕ್ಷಕರು ಹಾಗೂ ಪರಿಸರ ಪ್ರೇಮಿಗಳು ಈ ಪಕ್ಷಿ ವೀಕ್ಷಣಾ ಕಾರ್ಯಕ್ರಮದಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಿದ್ದರು.

Leave a Reply

Your email address will not be published. Required fields are marked *