ಮೃತ ಕರಿಯಪ್ಪ ಕುಟುಂಬಕ್ಕೆ ಸಾಂತ್ವಾನ ಹೇಳಿ ಪರಿಹಾರ ಚೆಕ್ ವಿತರಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ನಂದಿನಿ ಮೈಸೂರು


ಮೃತ ಕರಿಯಪ್ಪ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಡಿಸಿ ಡಾ.ಬಗಾದಿ ಗೌತಮ್

ಎಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿ ಹಾಡಿಯಲ್ಲಿ ಅಧಿಕಾರಿಗಳ ದೌರ್ಜನ್ಯದಿಂದ ಮೃತಪಟ್ಟ ಕರಿಯಪ್ಪ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕರಿಯಪ್ಪ ಕುಟುಂಬಕ್ಕೆ ಸಾಂತ್ವಾನ ಹೇಳಿ ಪರಿಹಾರದ ಚೆಕ್ ವಿತರಣೆ ಮಾಡಿದರು.

ಹೊಸಹಳ್ಳಿ ಹಾಡಿಯಲ್ಲಿ ಕರಿಯಪ್ಪ ಕುಟುಂಬಸ್ಥರನ್ನು ಮಾತನಾಡಿಸಿದ ಜಿಲ್ಲಾಧಿಕಾರಿ ಬಗಾದಿ ಗೌತಮ್ ರವರು ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯ ಹಾಗೂ ಪರಿಹಾರವನ್ನು ಮೃತ ಕರಿಯಪ್ಪ ಕುಟುಂಬಕ್ಕೆ ನೀಡುವ ಜತೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತದೆ. ಆದಿವಾಸಿ ಗಿರಿಜನ ಮಕ್ಕಳನ್ನು ನೇರವಾಗಿ ಹತ್ತನೇ ತರಗತಿಗೆ ಪ್ರವೇಶ ಕಲ್ಪಿಸಲು ಅವಕಾಶ ಇದೆ. ಜತೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಕೂಡ ಅವಕಾಶ ಇದೆ. ಹಾಗಾಗಿ ಕರಿಯಪ್ಪ ನ ಕುಟುಂಬ ಈ ಸದಾವಕಾಶ ಪಡೆದುಕೊಳ್ಳಲು ತಿಳಿಸಿದರು.

– ಮೃತ ಕರಿಯಪ್ಪನ ಮಗ ಸತೀಶ್ ಮಾತನಾಡಿ ನಾವು ಕೂಲಿ ಮಾಡಿಕೊಂಡೇ ಜೀವನ ಸಾಗಿಸುತ್ತೇವೆ. ನಮ್ಮ ತಂದೆಯ ಸಾವಿಗೆ ನ್ಯಾಯ ಕೊಡಿಸಿ, ಜತೆಗೆ ಆದಿವಾಸಿ ಜನರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿರುವ ದೌರ್ಜನ್ಯ ತಪ್ಪಿಸಿ ಎಂದು ಮನವಿ ಮಾಡಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಕರಿಯಪ್ಪ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದೆ. ಕಾನೂನಿನಡಿ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾನು ಕೂಡ ಈ ಬಗ್ಗೆ 3 ತಿಂಗಳಿಗೊಮ್ಮೆ ನಡೆಯುವ ಎಸ್ಸಿ, ಎಸ್‌ಟಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಅಮಾಯಕ ಗಿರಿಜನರಿಗೆ ಅನ್ಯಾಯ ಆಗದ ರೀತಿಯಲ್ಲಿ ಕ್ರಮ ಕೈಗೊಂಡು ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್, ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನಾರಾಯಣಸ್ವಾಮಿ, ಆದಿವಾಸಿ ಮುಖಂಡ ವಡ್ಡರಗುಡಿ ಚಿಕ್ಕಣ್ಣ, ವೇಣು, ಮಂಜು, ಪುಟ್ಟ ಬಸವ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *