ಪಿರಿಯಾಪಟ್ಟಣ:4 ಸೆಪ್ಟೆಂಬರ್ 2021
ತಾಲ್ಲೂಕಿನ ಆನೇಚೌಕೂರು ಮತ್ತು ಮುತ್ತೂರು ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಪದೇಪದೆ ಕಾಡಾನೆಗಳು ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ ರೈತರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿದ್ದು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮಾಡುವುದಾಗಿ ಕಾಡಂಚಿನ ಹಲವು ಗ್ರಾಮಗಳ ನಿವಾಸಿಗಳು ಆಗ್ರಹಿಸಿದ್ದಾರೆ.
ಗುರುವಾರ ಬೆಳಗಿನ ಸಮಯದಲ್ಲಿಯೇ ಕಾಡಾನೆ ತನ್ನ ಮರಿಯೊಂದಿಗೆ ತಾಲ್ಲೂಕಿನ ಕಾಳೆ ತಿಮ್ಮನಹಳ್ಳಿ ಹಾಗೂ ಚೌತಿ ಗ್ರಾಮ ಸೇರಿದಂತೆ ಹಲವೆಡೆ ದಾಳಿ ನಡೆಸಿ ರೈತರು ತಮ್ಮ ಜಮೀನು ಹಾಗೂ ತೋಟಗಳಲ್ಲಿ ಬೆಳೆದಿದ್ದ ಫಸಲಿಗೆ ಬಂದಿದ್ದ ಬಾಳೆ ಶುಂಠಿ ಜೋಳ ಬೆಳೆ ಸೇರಿದಂತೆ ಭತ್ತದ ನಾಟಿಯನ್ನು ನಾಶ ಪಡಿಸಿವೆ, ಇತ್ತೀಚಿನ ದಿನಗಳಲ್ಲಿ ಸತತವಾಗಿ ಕಾಡಾನೆ ದಾಳಿ ನಡೆಸುತ್ತಿರುವುದರಿಂದ ತೋಟದ ಮಾಲೀಕರು ಹಾಗೂ ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕಟಾವಿಗೆ ಬಂದ ಸಂದರ್ಭ ಹಾಳಾಗುತ್ತಿರುವುದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ, ಕಾಡಂಚಿನ ಗ್ರಾಮಗಳು ಹುಣಸೂರು ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಗೆ ಸೇರಿದ್ದು ಕೂಡಲೇ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಗುರುವಾರ ಬೆಳಗಿನ ಸಮಯದಲ್ಲಿಯೇ ಕಾಳೆತಿಮ್ಮನಹಳ್ಳಿ ಗ್ರಾಮದ ಎಂ.ಡಿ ಪ್ರಕಾಶ್ ಅವರ ಬಾಳೆ ತೋಟ, ಗ್ರಾ.ಪಂ ಮಾಜಿ ಅಧ್ಯಕ್ಷ ಸುನಂದ ಅವರ ಜಮೀನು ಮತ್ತು ಯಲ್ಲಣ್ಣ ಅವರ ಜೋಳದ ಜಮೀನಿನಲ್ಲಿ ದಾಳಿ ನಡೆಸಿದ ಕಾಡಾನೆ ಹಾಗೂ ಮರಿಯಾನೆ ಫಸಲಿಗೆ ಬಂದಿದ್ದ ಬಾಳೆ, ಜೋಳ, ಶುಂಠಿ ಸೇರಿದಂತೆ ಹಲವು ಬೆಳೆಗಳನ್ನು ನಾಶ ಪಡಿಸಿವೆ.
ಜಮೀನನ್ನು ಬೇರೆಯವರಿಂದ ನಾವು ಭೋಗ್ಯಕ್ಕೆ ಪಡೆದು ವ್ಯವಸಾಯ ನಡೆಸುತ್ತಿದ್ದೇವೆ, ಪದೇಪದೆ ಕಾಡಾನೆ ದಾಳಿಯಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ, ಕಾಡಾನೆ ದಾಳಿ ವೇಳೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಆ ಸಂದರ್ಭದಲ್ಲಿ ಮಾತ್ರ ಯಾರಾದರೂ ಓರ್ವ ಸಿಬ್ಬಂದಿ ಬಂದು ಪರಿಹಾರಕ್ಕೆ ಅರ್ಜಿ ನೀಡಿ ಎನ್ನುತ್ತಾರೆ, ಲಕ್ಷಾಂತರ ರೂ ನಷ್ಟಕ್ಕೆ ಸಾವಿರ ರೂ ಪರಿಹಾರ ಮಾತ್ರ ದೊರೆಯುತ್ತದೆ, ಪರಿಹಾರ ಸಂದರ್ಭ ಅದು ಜಮೀನಿನ ಮೂಲ ಮಾಲೀಕರಿಗೆ ಹೋಗುವುದರಿಂದ ಜಮೀನು ಭೋಗ್ಯ ಪಡೆದು ವ್ಯವಸಾಯ ನಡೆಸುತ್ತಿರುವ ನಮಗೆ ನಷ್ಟ ಉಂಟಾಗುತ್ತಿದೆ, ಅರಣ್ಯ ಇಲಾಖೆಯವರು ಶೀಘ್ರ ಕ್ರಮ ಕೈಗೊಳ್ಳುವಂತೆ ಎಂ.ಡಿ ಪ್ರಕಾಶ್ ಹಾಗೂ ಮನು ಅವರು ಒತ್ತಾಯಿಸಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಲಕ್ಷಾಂತರ ರೂ ಮೌಲ್ಯದ ಬೆಳೆ ಫಸಲುಗಳು ನಾಶವಾಗಿದ್ದು ಕಾಡಂಚಿನ ಗ್ರಾಮಗಳಿಗೆ ಅರಣ್ಯ ಇಲಾಖೆಯವರು ಸೂಕ್ತ ಭದ್ರತೆ ಒದಗಿಸಿ ಕಾಡಾನೆಗಳು ತಮ್ಮ ಜಮೀನುಗಳಿಗೆ ನುಗ್ಗುವುದನ್ನು ತಪ್ಪಿಸಿ ಕೂಡಲೆ ಅರಣ್ಯ ಪ್ರದೇಶದ ಸುತ್ತ ರೈಲು ಕಂಬಿ ಅಳವಡಿಸುವಂತೆ ಕಾಳೆ ತಿಮ್ಮನಹಳ್ಳಿ ಗ್ರಾಮದ ಯುವ ಮುಖಂಡ ದೇವಿಪ್ರಸಾದ್ ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆ ಹುಲಿ ಚಿರತೆ ಹಾವಳಿಯಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಗಸ್ತು ಹೆಚ್ಚಿಸಬೇಕು, ಸೋಲಾರ್ ತಂತಿಬೇಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು, ದುಸ್ಥಿತಿ ತಲುಪಿರುವ ಕಂದಕಗಳನ್ನು ದುರಸ್ತಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಕಾಡಂಚಿನ ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ.