ಮೈಸೂರು:24 ಸೆಪ್ಟೆಂಬರ್ 2021
ನ@ದಿನಿ

ಜಾತಿಗಣತಿ ದಿಕ್ಕು ತಪ್ಪಿಸುವ ಕೆಲಸ ಕೆಲವರಿಂದ ನಡೆಯುತ್ತಿದ್ದು, ಇದನ್ನು ಮೀರಿ ನೂತನ ಸಮಿತಿ ರಚಿಸಿ ರಾಜ್ಯವ್ಯಾಪಿ ಜಾತಿಗಣತಿ ಜಾರಿಗೆ ಹೋರಾಟಕ್ಕಿಳಿಯುವ ಕುರಿತು ನಿರ್ಣಯಿಸಲಾಯಿತು.
ನಗರದ ಜಲದರ್ಶಿನಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ನೇತೃತ್ವದಲ್ಲಿ ನಡೆದ ಜಾತಿಗಣತಿ ಜಾರಿ ಕುರಿತ ಪೂರ್ವಭಾವಿ ಸಭೆಯಲ್ಲಿ ಮೇಲಿನ ನಿರ್ಣಯ ಕೈಗೊಳ್ಳಲಾಯಿತು. ಸಾಮಾಜಿಕ ಮತ್ತು ಶೈಕ್ಷಣಿಕ ೨೦೧೫ರ ಸಮೀಕ್ಷಾ ವರದಿ ಜಾರಿಗಾಗಿ ರಾಜ್ಯ ಮಟ್ಟದ ಹೋರಾಟ ಸಮಿತಿ ರಚಿಸುವುದು. ಅದರ ಪ್ರಧಾನ ಸಂಚಾಲಕರಾಗಿ ಕೆ.ಎಸ್.ಶಿವರಾಮು ಅವರನ್ನು ನೇಮಿಸಲಾಯಿತು. ಗೌರವ ಸಲಹಾ ಸಮಿತಿ ಸದಸ್ಯರಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎಂ.ಲಿಂಗಪ್ಪ, ಪ್ರೊ.ಮಹೇಶ್‌ಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್ ನೇಮಿಸಲಾಯಿತು.
ಸಮಿತಿಯೂ ಮೈಸೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸುವುದು. ಮೈಸೂರಿನಿಂದ ಬೆಂಗಳೂರಿಗೆ ಜಾತಿಗಣತಿ ಜಾರಿಗೆ ಆಗ್ರಹಿಸಿ ಅಭಿಯಾನ ಕೈಗೊಳ್ಳುವುದು. ಎಲ್ಲಾ ಜಿಲ್ಲೆ ಕೇಂದ್ರಗಳಲ್ಲಿ ಹಾಗೂ ರಾಜ್ಯವ್ಯಾಪಿ ಪ್ರತಿಭಟನೆಗೆ ಸಂಘಟಿಸುವುದು. ಜಾತಿಗಣತಿ ಜಾರಿಯಿಂದ ಸಿಗುವ ಸಾಮಾಜಿಕ ನ್ಯಾಯದ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಹೋರಾಟ ತೀವ್ರಗೊಳಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಇದಕ್ಕೂ ಮುನ್ನ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮಹೇಶ್‌ಚಂದ್ರಗುರು ಮಾತನಾಡಿ, ಈಗಿರುವ ರಾಜಕಾರಣಿಗಳಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ.ಪಾಟೀಲ್, ಮಹದೇವಪ್ಪ, ಶ್ರೀನಿವಾಸ್‌ಪ್ರಸಾದ ಯಾರು ಸಹ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಒಬ್ಬರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಈಗಿನ ರಾಜಕೀಯದಲ್ಲಿ ಸಿದ್ದರಾಮಯ್ಯರನ್ನ ಹರಕೆಯ ಕುರಿ ಮಾಡಲು ಹೊರಟ್ಟಿದ್ದಾರೆ. ಇನ್ನೆರಡು ವರ್ಷದಲ್ಲಿ ಇವರೆಲ್ಲಾ ಹರಕೆಯ ಕುರಿಯಾಗುತ್ತಾರೆ. ನಾವು ಮುಂದೆ ಎಚ್ಚರಿಕೆಯಿಂದ ಮತ ಹಾಕಬೇಕು ಎಂದರು.
ಜಾತಿಗಣತಿ ಜಾರಿಯಲ್ಲಿ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ದೇಶ ಕೇಳುತ್ತಿಲ್ಲ. ನಮ್ಮ ಪಾಲಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿ ಈ ಕೆಟ್ಟ ಸರ್ಕಾರವನ್ನ ಕಿತ್ತುಹಾಕಬೇಕು. ಈ ಹೋರಾಟ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ನಡೆಯಬೇಕಿದೆ. ಅದಕ್ಕಾಗಿ ನಾವೆಲ್ಲರು ಹೊಂದಾಗಬೇಕು. ಈ ಹೋರಾಟವನ್ನು ರಾಜ್ಯ ಮಟ್ಟದೆತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ಮೈಸೂರಿನಿಂದಲೇ ಪ್ರಾರಂಭಿಸಬೇಕಿದೆ ಎಂದರು.
ದೇವರನ್ನೂ ದೂರವಿಟ್ಟೂ ಹೋರಾಡಿ
ಧಾರ್ಮಿಕ ಭಾವನೆಗಳನ್ನು ಮುನ್ನಲೆಗೆ ತಂದು ಹೋರಾಟವನ್ನು ನಿಯಂತ್ರಿಸುವ ಕೆಲಸ ಆಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ಹಿಂದುಳಿದ ಸಮುದಾಯಕ್ಕೆ ಮೊದಲು ಸ್ಪಷ್ಟತೆ ಸಿಗಬೇಕು. ರಾಮ ಮಾತ್ರವಲ್ಲದೆ ಯಾವುದೇ ದೇವತೆಗಳು ಬಂದರೂ ಅವರನ್ನು ಪಕ್ಕಕ್ಕೆ ಸರಿಸಿ ನಮ್ಮ ಹೋರಾಟ ಮುಂದುವರೆಸಬೇಕಿದೆ. ಈ ದಿಸೆಯಲ್ಲಿ ತಳ ಸಮುದಾಯ ಜಾಗೃತರಾಗಬೇಕಿದೆ.
-ಪ್ರೊ.ಕೆ.ಎಸ್.ಭಗವಾನ್, ಸಾಹಿತಿಪಕ್ಷಗಳಿಗೆ ಇಚ್ಛಾಶಕ್ತಿ ಇಲ್ಲ
ಜಾತಿಗಣತಿ ಜಾರಿಗೊಳಿಸುವ ಇಚ್ಛಾಶಕ್ತಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಇಲ್ಲ. ವೈಯುಕ್ತಿಕವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ, ಪಕ್ಷದ ಸಿದ್ಧಾಂತ ಎದುರಾದಾಗ ಹಿಂದೇಟು ಹಾಕುತ್ತಾರೆ. ಈ ನಿಟ್ಟಿನಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹಿನ್ನಡೆಯಾಗಿದೆ. ಅಲ್ಲದೆ ಕೆಲ ಸಮುದಾಯಗಳಲ್ಲಿ ಜಾತಿಗಣತಿ ಬಿಡುಗಡೆಗೊಂಡರೆ ತಮ್ಮ ಪ್ರಾಬಲ್ಯ ಕಸಿದುಕೊಳ್ಳುವ ಆತಂಕದಿಂದಲೂ ವರದಿ ಜಾರಿಗೆ ಬಿಡುತ್ತಿಲ್ಲ. ಇದೆಲ್ಲವನ್ನೂ ಅರ್ಥೈಯಿಸಿಕೊಂಡು ಹೋರಾಟ ರೂಪಿಸಬೇಕಿದೆ.
ಕೆ.ಎಂ.ಲಿಂಗಪ್ಪ, ಮಾಜಿ ಸದಸ್ಯ, ಹಿಂದುಳಿದ ವರ್ಗಗಳ ಆಯೋಗ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ. ಶಿವರಾಮ್,ಕಾಂಗ್ರೆಸ್ ಮುಖಂಡ ಹರೀಶ್‌ಗೌಡ, ಪ್ರದೀಪ್‌ಕುಮಾರ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜು, ಸಿಟಿ ಕೋಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್.ಆರ್.ರವಿಕುಮಾರ್, ಜಿಲ್ಲಾ ಕುಂಬಾರರ ಸಂಘ ಎಚ್.ಎಸ್.ಪ್ರಕಾಶ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್, ಚಾಮರಾಜನಗರ-ಮೈಸೂರು ಆರ್ಯ ಈಡಿಗ ಸಂಘದ ಕಾರ್ಯದರ್ಶಿ ರಾಜಶೇಖರ ಕದಂಬ, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ವಿಶ್ವಕರ್ಮ ಮಹಾಮಂಡಲದ ಅಧ್ಯಕ್ಷ ಸಿ.ಟಿ.ಆಚಾರ್ಯ, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಎನ್.ಆರ್.ನಾಗೇಶ್, ಮುಖಂಡರಾದ ಲೋಕೇಶ್‌ಕುಮಾರ್, ಆರ್.ಕೆ.ರವಿ, ರೋಹಿತ್ ಮಂಜುಳಾ ಸೌಂಡ್ಸ್, ಮಹೇಂದ್ರ ಕಾಗಿನೆಲೆ, ಯಾದವ ಸಮಾಜದ ಮುಖಂಡ ನಾಗಭೂಷಣ್, ನಗರಪಾಲಿಕೆ ಸದಸ್ಯರಾದ ಶಿವಣ್ಣ, ಕೆ.ರವಿನಾಯಕ್, ಮಂಜುನಾಥ್, ಆಶೋಕಪುರಂ ಸಿದ್ದಸ್ವಾಮಿ, ಗೋವಿಂದರಾಜು ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.