ಜನತಾ ದರ್ಶನ: ಜನರ ಸಮಸ್ಯೆಗಳನ್ನು ಆಲಿಸಿದ ಡಾ.ಹೆಚ್.ಸಿ.ಮಹದೇವಪ್ಪ

ನಂದಿನಿ ಮೈಸೂರು

*ಜನತಾ ದರ್ಶನ: ಜನರ ಸಮಸ್ಯೆಗಳನ್ನು ಆಲಿಸಿದ ಡಾ.ಹೆಚ್.ಸಿ.ಮಹದೇವಪ್ಪ*

ಮೈಸೂರು ಜಿಲ್ಲಾಡಳಿತದ ವತಿಯಿಂದ ವಿದ್ಯೋದಯ ಶಿಕ್ಷಣ ಸಂಸ್ಥೆ ಸಭಾಂಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅನೇಕ ಸಮಸ್ಯೆಗಳನ್ನು ಹೊತ್ತು ಬಂದಿದ್ದ ಜನರ ಕಷ್ಟ ಆಲಿಸಿ, ಅಹವಾಲು ಸ್ವೀಕರಿಸಿದ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನತಾ ದರ್ಶನ ಹಿನ್ನೆಲೆ ತಾಲ್ಲೂಕಿನಲ್ಲಿ ಹೋಬಳಿವಾರು ಅರ್ಜಿ ಕರೆದಿದ್ದು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 167 ಅರ್ಜಿದಾರರ ಅಹವಾಲನ್ನು ಸ್ವೀಕರಿಸಿ, ಸಮಸ್ಯೆ ಆಲಿಸಿದರು. ಅದಲ್ಲದೆ, ಅರ್ಜಿ ಸಲ್ಲಿಸದೆ ಇದ್ದಂತಹ ಜನರನ್ನೂ ಕರೆದು ಅವರ ಕುಂದು ಕೊರತೆಗಳನ್ನು ವಿಚಾರಿಸಿದರು.

ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಜಿಲ್ಲೆಗಳಲ್ಲಿ ಜನಸ್ಪಂದನ ಸಭೆ ನಡೆಸಬೇಕೆಂದು ಸೂಚನೆ ನೀಡಿದ್ದರು. ಅದರಂತೆ ಮೊದಲಿಗೆ ಮೈಸೂರಿನಲ್ಲಿ ನಡೆಸಿ ಸ್ವೀಕರಿಸಿದ್ದ ಅಹವಾಲುಗಳಲ್ಲಿ ಶೇ.98 ರಷ್ಟನ್ನು ಬಗೆಹರಿಸಲಾಗಿದೆ ಎಂದು ಹೇಳಿದರು.

ಮೊನ್ನೆ ನಮ್ಮ ಮುಖ್ಯಮಂತ್ರಿಗಳು ನಡೆಸಿದ ಜನಸ್ಪಂದನ ಕಾರ್ಯಕ್ರದಲ್ಲಿ ಮುಗ್ಧಜನರು ತಮ್ಮ ನೋವನ್ನು ತೋಡಿಕೊಂಡ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅಧಿಕಾರಿ ವರ್ಗಕ್ಕೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಇದರ ಅಂಗವಾಗಿ ತಿ.ನರಸೀಪುರ ತಾಲ್ಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಜನರ ಕಷ್ಟವನ್ನು ಕೇಳಲಾಗುತ್ತಿದೆ ಎಂದು ತಿಳಿಸಿದರು.

ಆಡಳಿತ ಚುರುಕುಗೊಳಿಸಿ, ಜನಪರವಾದ ಆಡಳಿತದ ವಾತಾವರಣ ಸೃಷ್ಟಿಸಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಸಂಕಷ್ಟದಲ್ಲಿರುವ ಜನರು ನೇರವಾಗಿ ಬಂದು ಭಾಗಿಯಾಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

*ಡಿ.15 ನಂತರ ಎಲ್ಲಾ ತಾಲ್ಲೂಕಿನಲ್ಲೂ ಜನತದರ್ಶನ*

ವಿಧಾನ ಸಭೆಯ ಅಧಿವೇಶನ ಮುಗಿದ ಬಳಿಕ ಡಿಸೆಂಬರ್ 15 ನಂತರ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಜನಸ್ಪಂದನ ಕಾರ್ಯಕ್ರಮ ನಡೆಸಿ ಜ‌ನರ ಸಮಸ್ಯೆಗಳನ್ನು ಆಲಿಸಲಾಗುವುದು. ಜಿಲ್ಲಾಡಳಿತ, ತಾಲ್ಲೂಕು ಆಡಳಿತವನ್ನು ನೇರವಾಗಿ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಮೂಲಕ ಜನರು ತಿಂಗಳುಗಟ್ಟಲೆ ತಮ್ಮ ಸಮಸ್ಯೆಗಳ ಅರ್ಜಿ ಹಿಡಿದು ಸರ್ಕಾರಿ ಕಚೇರಿಗೆ ಅಲೆದಾಡಬಾರದು ಎಂಬುದು ಮೂಲ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜು ಎಂಬುವರು ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಸಾರ್ವಜನಿಕರಿಗೆ ದೊರಕುವುದಿಲ್ಲ. ಇದರಿಂದ ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ತೊಂದರೆ ಉಂಟಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೆಲವೊಮ್ಮೆ ಅಧಿಕಾರಿಗಳಿಗೆ ಸಭೆ ಸೇರಿದಂತೆ ಇನ್ನಿತರ ಕ್ಷೇತ್ರಭೇಟಿ ಇರುತ್ತದೆ. ಆದರೆ ಸುಳ್ಳು ಹೇಳಿ ಕಚೇರಿಗೆ ಹಾಜರಾಗದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಹೇಳಿದರು.

ಹಳೇಕೆಂಪಯ್ಯನ ಹುಂಡಿ ಗ್ರಾಮದ ರಾಚಯ್ಯ ಅವರು ಸಾಗುವಳಿ ಹಕ್ಕುಪತ್ರ ನೀಡುತ್ತಿಲ್ಲ. ಕಚೇರಿಗೆ ಅಲೆದಾಡಿ ಸಾಕಾಗಿದೆ ದಯವಿಟ್ಟು ಸಾಗುವಳಿ ಚೀಟಿ ಕೊಡಿಸಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಜಿಲ್ಲಾಧಿಕಾರಿ ಮಾತಾನಾಡಿ, ನೀವು ಅರ್ಹರಿದ್ದರೆ ಕಂಡಿತ ಹಕ್ಕುಪತ್ರ ದೊರಕಿಸಿಕೊಡಲಾಗುವುದು. ಈ ಸಂಬಂಧ ಮತ್ತೊಮ್ಮೆ ಅರ್ಜಿ ಪರಿಶೀಲಿಸಲಾಗುವುದು ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಮಾತನಾಡಿ, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ಮೈಸೂರು ಹಾಗೂ ಚಾಮರಾಜನಗರ ಭಾಗದ ರೈತರಿಗೆ ಬಾಕಿ ಹಣ ನೀಡಿಲ್ಲ. ಸರ್ಕಾರದ ವತಿಯಿಂದ 150 ರೂ. ಹೆಚ್ಚುವರಿ ಹಣವನ್ನೂ ನೀಡಿಲ್ಲ‌. ಬರಗಾಲದಲ್ಲಿ ರೈತರ ಬೆಳೆ ನಾಶವಾಗಿದ್ದು, ಕನಿಷ್ಠ 25 ಸಾವಿರ ಬರ ಪರಿಹಾರ ‌ನೀಡಬೇಕು. ವಿದ್ಯುತ್ ಸರಿಯಾಗಿ ಒದಗಿಸಬೇಕು ಎಂದು ಮ‌ನವಿ ಮಾಡಿದರು.

ಈ ಕುರಿತು ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಪ್ರತಿಕ್ರಿಯಿಸಿ, ರೈತರ ಎಲ್ಲಾ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಕಾರ್ಖಾನೆಯವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಜಿಲ್ಲೆಯ ರೈತರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಈ ಎಲ್ಲಾ ವಿಚಾರಗಳನ್ನು ಸರ್ಕಾವು ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

*ವಂಚಿತ ಗೃಹಲಕ್ಷ್ಮಿಯರ ಖಾತೆಗೆ ಹಣ ಗ್ಯಾರಂಟಿ*

ತಾಲ್ಲೂಕಿನಲ್ಲಿ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪೈಕಿ 528 ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎಂಬ ಮಾಹಿತಿ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಈಗಾಗಲೇ ಚರ್ಚಿಸಿದ್ದೇನೆ. ಶೀಘ್ರದಲ್ಲೇ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡಲಾಗುವುದು ಎಂದು ತಿಳಿಸಿದರು.

*ಬಸ್ ಸಂಚಾರಕ್ಕೆ ಕ್ರಮ*

ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯವಿಲ್ಲ ಎಂಬ ಸಮಸ್ಯೆ ಕುರಿತು ಮಾತನಾಡಿದ ಸಚಿವರು, ತಾಲ್ಲೂಕಿನ ಹಳ್ಳಿಗಳಲ್ಲಿ ಬಸ್ ಸಂಚಾರಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. ಬಸ್ ಸಂಚಾರ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಕೆಲವೇ ದಿನಗಳಲ್ಲಿ ಬಸ್‌ಗಳ ನಿಗಧಿತ ಸಮಯಕ್ಕೆ ಸಂಚರಿಸಲಿದ್ದು, ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

*ಕೆರೆಗಳಿಗೆ ನೀರು ತುಂಬಿಸಲು ಸೂಚನೆ*

ತಾಲ್ಲೂಕಿನಲ್ಲಿ ಬರ ಆವರಿಸಿದ್ದು, ಜಾನವಾರುಗಳಿಗೆ ಕುಡಿಯಲು ನೀರಿನ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಕೆರೆಗಳನ್ನು ತುಂಬಿಸುವಂತೆ ನೀರಾವರಿ ಇಲಾಖೆಯ ಎಂಜಿನಿಯರ್‌ಗೆ ಈ ಮೊದಲೇ ಸೂಚಿಸಲಾಗಿತ್ತು. ಅದರಂತೆ ಬಹುತೇಕ ಕೆರೆಗಳಿಗೆ ನೀರು ತುಂಬಿಸಿದ್ದು, ಬಾಕಿ ಉಳಿದಿರುವ ಕೆರೆಗಳಿಗೆ ಕೂಡಲೇ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ನಂದಿನಿ, ತಹಶಿಲ್ದಾರ್ ಸುರೇಶಾಚಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *