ನಂದಿನಿ ಮೈಸೂರು
ಅನ್ನದಾತರಿಗೆ ಸೂಕ್ತ ವೈದ್ಯಕೀಯ
ಸೌಕರ್ಯಕ್ಕೆ ಚಂದನ್‌ಗೌಡ ಒತ್ತಾಯ
ಕೋಟೆ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ರೈತ ಕಲ್ಯಾಣ ಸಂಘದ ಅಸಮಧಾನ
ಮೈಸೂರು: ಅನ್ನದಾತರು ವಾಸಿಸುವ ಪ್ರದೇಶಗಳಲ್ಲಿ ಸೂಕ್ತ ವೈದ್ಯಕೀಯ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯ ಒಸಗಿಸಲು ಸರ್ಕಾರ ಮುಂದಾಗಬೇಕೆAದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ,ಚಂದನ್‌ಗೌಡ ಒತ್ತಾಯಿಸಿದರು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಅವ್ಯವಸ್ಥೆ ಕುರಿತು ರೈತರು ನೀಡಿದ ಮಾಹಿತಿ ಮೇರೆಗೆ ಶುಕ್ರವಾರ ಆಸ್ಪತ್ರೆಗೆ ಸಂಘದ ಪದಾಧಿಕಾರಿಗಳೊಡನೆ ಭೇಟಿ ನೀಡಿದ ಚಂದನ್‌ಗೌಡ, ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳೊಡನೆ ಸೂಕ್ತ ಸಮಾಲೋಚನೆ ನಡೆಸಿದರು.
ಬಳಿಕ ವೈದ್ಯಾಧಿಕಾರಿಗಳೊಡನೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವಂತಾಗಿದೆ. ಅಲ್ಲದೇ ಆಸ್ಪತ್ರೆಯಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ.ಅನ್ನದಾತ ಸಮುದಾಯಕ್ಕೆ ಅಗತ್ಯ ಚಿಕಿತ್ಸೆಯನ್ನು ಒದಗಿಸುವ ವೈದ್ಯಕೀಯ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದರು.
ರೈತರು ವಾಸಿಸುವ ಪ್ರದೇಶಗಳಲ್ಲಿ ಸರ್ಕಾರೇತರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ಮತ್ತು ಸೂಕ್ತ ಸಮಯಕ್ಕೆ ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದ ಚಂದನ್‌ಗೌಡ ಅವರು, ಆಸ್ಪತ್ರೆಯಲ್ಲಿ ಇರುವ ವೈದ್ಯರ ಕೊರತೆ ನೀಗಿಸಿ ಕೂಡಲೇ ವೈದ್ಯರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ದೇಶಕ್ಕೆ ಅನ್ನ ನೀಡುವ ಅನ್ನದಾತರಿಗೆ ಉತ್ತಮ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿಯೂ ಗಮನ ಹರಿಸಬೇಕೇಂದು ಆಗ್ರಹಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತಾಪಿ ವರ್ಗದ ರೋಗಿಗಳನ್ನು ಇದೇ ವೇಳೆ ಭೇಟಿ ಮಾಡಿದ ಅವರು, ಮುಂದಿನ ದಿನಗಳಲ್ಲಿ ಮತ್ತೆ ಸಮಸ್ಯೆಗಳು ಉಂಟಾದಲ್ಲಿ ರೈತ ಕಲ್ಯಾಣದ ಗಮನಕ್ಕೆ ತರಬೇಕೆಂದು ಮನವಿ ಮಾಡಿದರಲ್ಲದೇ, ಆಸ್ಪತ್ರೆ ಅವ್ಯವಸ್ಥೆ ಕುರಿತು ಆರೋಗ್ಯ ಸಚಿವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.