ನಂದಿನಿ ಮೈಸೂರು
ಮರಳೂರು ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕ ವಿತರಣೆ
ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮರಳೂರು (ಗೊದ್ದನಪುರ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕಗಳನ್ನು (ನೋಟ್ ಪುಸ್ತಕ) ಶನಿವಾರ ವಿತರಿಸಲಾಯಿತು.
ನಾಡು-ನುಡಿಗಾಗಿ ಅನೇಕ ವರ್ಷಗಳಿಂದ ನಿರಂತರ ಕಾರ್ಯಕ್ರಮಗಳನ್ನು ರೂಪಿಸಿ ಜನಮನ್ನಣೆ ಗಳಿಸಿರುವ ಬೆಂಗಳೂರಿನ ‘ಅವಿರತ ಪ್ರತಿಷ್ಠಾನವು’ ತನ್ನ ವಾರ್ಷಿಕ ಬರವಣಿಗೆ ಪುಸ್ತಕ ವಿತರಣೆ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಈ ಬಾರಿ ಮರಳೂರು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಬಳಗದ ಸದಸ್ಯರು ಶನಿವಾರ ಶಾಲೆಗೆ ಭೇಟಿ ನೀಡಿ ಪುಸ್ತಕಗಳನ್ನು ವಿತರಿಸಿದರು.
ಶಾಲೆಯಲ್ಲಿ ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಟ್ಟು 226 ವಿದ್ಯಾರ್ಥಿ – ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಶೇ 95 ರಷ್ಟು ಹೆಚ್ಚು ವಿದ್ಯಾರ್ಥಿಗಳು ಶನಿವಾರ ಹಾಜರಿದ್ದರು. ಆರೋಗ್ಯ ಮತ್ತು ಇತರ ಅನಿವಾರ್ಯ ಕಾರಣಗಳಿಂದ ಹಾಜರಾಗದ ಹಲವರಿಗೂ ಶಿಕ್ಷಕರ ಮೂಲಕ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು.
“ಅವಿರತ” ಬಳಗವು ನಾಡಿಗಾಗಿ ನಿರಂತರ ಎನ್ನುವ ಧ್ಯೇಯ ದೊಂದಿಗೆ ಕಳೆದ 15 ವರ್ಷಗಳಿಂದ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅವುಗಳಲ್ಲಿ ಬಳಗದ “ವಾರ್ಷಿಕ ಬರವಣಿಗೆ ಪುಸ್ತಕ ವಿತರಣೆ ಅಭಿಯಾನ” ಪ್ರಮುಖವಾದುದು.
ಅವಿರತ ಸಂಸ್ಥೆ ಯು ಕಳೆದ 15 ವರ್ಷಗಳಲ್ಲಿ 15.5 ಲಕ್ಷ ಬರವಣಿಗೆ ಪುಸ್ತಕಗಳನ್ನು ವಿತರಣೆ ಮಾಡಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 380 ಶಾಲೆಗಳ 34,000 ವಿದ್ಯಾರ್ಥಿಗಳಿಗೆ ಒಟ್ಟು 2.25 ಲಕ್ಷ ಪುಸ್ತಕಗಳನ್ನು ವಿತರಿಸುವ ಗುರಿ ಹಾಕಿಕೊಂಡಿದೆ. ಈಗಾಗಲೇ ರಾಜ್ಯದ ವಿವಿಧೆಡೆ ಬರವಣಿಗೆ ಪುಸ್ತಕಗಳನ್ನು ವಿತರಿಸಿದೆ. ಅದರಂತೆ ಶನಿವಾರ ಮರಳೂರು ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಖಾಸಗಿ ವಿದ್ಯಾಸಂಸ್ಥೆಗಳ ಅಪರಿಮಿತ ವೇಗದ ಪೈಪೋಟಿಯ ನಡುವೆ ಸರಕಾರಿ ಶಾಲೆಗಳು ಸೊರಗುತ್ತಿದ್ದು, ಬೆಲೆ ಏರಿಕೆ ಪರಿಣಾಮ ಜನತೆ ಹೈರಾಣು ಆಗುತ್ತಿದ್ದಾರೆ. ಪಠ್ಯ ಪುಸ್ತಕ, ಶೂ, ಬಿಸಿಯೂಟ, ಹಾಲು, ಪೌಷ್ಠಿಕ ಮಾತ್ರೆ ಇತ್ಯಾದಿಗಳನ್ನು ಸರಕಾರ ನೀಡುತ್ತಿದೆ. ಆದರೆ ಬರವಣಿಗೆ ಪುಸ್ತಕಗಳ ನ್ನು ಖರೀದಿ ಮಾಡಲಾಗದ ಅಸಹಾಯಕತೆ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿ ಉಂಟು ಆಗಬಾರದು ಎನ್ನುವ ಕಾರಣದಿಂದ ಬಳಗವು ಈ ಅಭಿಯಾನ ಹಮ್ಮಿಕೊಂಡಿದೆ.
ಅವಿರತ ಬಳಗದ ಸದಸ್ಯರ ಆರ್ಥಿಕ ನೆರವು ಮತ್ತು ಸಾರ್ವಜನಿಕರು ನೀಡುವ ದೇಣಿಗೆ ಈ ಅಭಿಯಾನಕ್ಕೆ ಸಹಕಾರಿ ಆಗಿದೆ.
ವೆಚ್ಚ ತಗ್ಗಿಸುವ ಸಲುವಾಗಿ ಅವಿರತ ಬಳಗವೇ ಬರವಣಿಗೆ ಪುಸ್ತಕಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮುದ್ರಿಸುವ ವ್ಯವಸ್ಥೆ ಹೊಂದಿದೆ.
ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವುದು ಮತ್ತು ಆ ಮೂಲಕ ವಿದ್ಯಾರ್ಥಿಗಳ ಜ್ಞಾನವೃದ್ದಿಗೆ ಶ್ರಮಿಸುವುದು ಅವಿರತ ಬಳಗದ ಧ್ಯೇಯ.
ಬಳಗದ ಗುರುಪ್ರಸಾದ್, ಡಾ. ಐಶ್ವರ್ಯ, ಡಾ. ಆಶಾ, ಪತ್ರಕರ್ತ ಮೂಡಲಹುಂಡಿ ಎಂ. ಟಿ. ಶಿವಕುಮಾರ್, ಚಿತ್ರಾ, ಡಾ. ಅಮೋದ್, ಶೋಭಿತ, ಡಾ. ಸುಗಂಧಿ,ಶಮಂತ್ ಮೊದಲಾದವರು ಪಾಲ್ಗೊಂಡು ಶಾಲೆಯ ಕಾರ್ಯಚಟುವಟಿಕೆ ಗಳನ್ನು ಗಮನಿಸಿ, ಶಿಕ್ಷಕರ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು.
ಮುಖ್ಯೋಪಾಧ್ಯಾಯ ಕೆ.ಎಸ್. ಮಹೇಂದ್ರ ಶಿಕ್ಷಕರಾದ, ಎಂ. ರಾಜು ಮತ್ತು ತೋಯಿದ್ ಅತ್ತಾರ್, ಗ್ರಾಮ ಪಂಚಾಯ್ತಿಯ ಕೃಷ್ಣ, ಪುಟ್ಟಸ್ವಾಮಿ ಮತ್ತು ಮಹೇಶ್ ಹಾಜರಿದ್ದರು .