ಫೆ.27 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಚುನಾವಣೆ

ಮೈಸೂರು:25 ಫೆಬ್ರವರಿ 2022

ನಂದಿನಿ ಮೈಸೂರು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿಗೆ 2022-2025 ನೆಯ ಸಾಲಿಗೆ ದಿನಾಂಕ 27-2-2022 ರ ಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ರಾಜ್ಯ ಸಂಘಗಳ ಕಚೇರಿ ಮತ್ತು ಜಿಲ್ಲಾ ಸಂಘಗಳ ಕಚೇರಿಯಲ್ಲಿ ಏಕ ಕಾಲಕ್ಕೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬನ್ನೂರು ಕೆ ರಾಜು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲೂ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಇದೇ ಫೆಬ್ರವರಿ 4 ರಿಂದ ಚುನಾವಣಾ ಮಾದರಿ ನೀತಿ ಸಂಹಿತೆಯನ್ನೂ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲೇ ಚುನಾವಣೆಗೆ ಸಕಲ ಸಿದ್ಧತೆಗಳೂ ಸಾಂಗವಾಗಿ ನಡೆದಿವೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ರಾಜ್ಯ ಕಾರ್ಯಕಾರಿ ಸಮಿತಿಯ ಒಂದು ಸ್ಥಾನಕ್ಕೆ ಮೂರು ಮಂದಿ ಸ್ಪರ್ಧಿಸಿದ್ದು ಇವರಲ್ಲಿ ಒಬ್ಬರನ್ನು ಮಾತ್ರ ಮತದಾರರು ಆಯ್ಕೆ ಮಾಡಬೇಕಾಗಿದೆ. ಈ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯಸ್ಥಾನದ ಆಯ್ಕೆಯ ಮತಪತ್ರ ಬಿಳಿಬಣ್ಣದ್ದಾಗಿದ್ದು, ಮತದಾರರು ತಾವು ಆಯ್ಕೆ ಮಾಡಬಯಸುವ ಉಮೇದು ದಾರರ ಹೆಸರಿನ ಮುಂದೆ ಸ್ವಸ್ತಿಕ್ ಮುದ್ರೆಯನ್ನು ಒತ್ತಿ ತಮ್ಮ ಮತ ಚಲಾಯಿಸಬೇಕು.
ಹಾಗೆಯೇ ರಾಜ್ಯದ ಪದಾದಿಕಾರಿಗಳ ಒಟ್ಟು ಒಂಬತ್ತು ಹುದ್ದೆಗಳಲ್ಲಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ಮೂರು ಮಂದಿ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು ಆರು ಹುದ್ದೆಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿವೆ. ಹಾಗಾಗಿ ಉಳಿದ ಮೂರು ಹುದ್ದೆಗಳಿಗೆ ಅಂದರೆ ಮೂರು ರಾಜ್ಯ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಮೂರು ಉಪಾಧ್ಯಕ್ಷ ಸ್ಥಾನಗಳಿಗೆ 4 ಮಂದಿ ಸ್ಪರ್ಧಿಸಿರುತ್ತಾರೆ. ಈ ಮತಪತ್ರ ಪಿಂಕ್ ಬಣ್ಣದ್ದಾಗಿದ್ದು, ಇಲ್ಲೂ ಕೂಡ ಮತದಾರ ಸದಸ್ಯರು ಆಯ್ಕೆ ಮಾಡಬಯಸುವ ಉಮೇದುದಾರರ ಮುಂದೆ ಸ್ವಸ್ತಿಕ್ ಮುದ್ರೆಯನ್ನು ಒತ್ತಬೇಕು.
ಜಿಲ್ಲೆಯಿಂದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಒಬ್ಬರನ್ನೂ, ಮತ್ತು ಮೂರು ಮಂದಿ ರಾಜ್ಯ ಉಪಾಧ್ಯಕ್ಷರನ್ನೂ ಜಿಲ್ಲಾ ಪತ್ರಕರ್ತರ ಸಂಘದ ಮತದಾರ ಸದಸ್ಯರು ಒಟ್ಟಾರೆ ನಾಲ್ಕು ಮಂದಿಯನ್ನು ಚುನಾಯಿಸ ಬೇಕಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮತದಾರರ ಪಟ್ಟಿಯಲ್ಲಿ ಒಟ್ಟು 456ಮಂದಿ ಇದ್ದರೂ ಕೂಡ ಅವರಲ್ಲಿ 436 ಮಂದಿ ಸದಸ್ಯರು ಮಾತ್ರ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಉಳಿದಂತೆ 20 ಮಂದಿ ಸಹ ಸದಸ್ಯರು ಮತ್ತು ಗೌರವ ಸದಸ್ಯರಿಗೆ ಮತ ದಾನದ ಹಕ್ಕು ಇರುವುದಿಲ್ಲ. ಅದ್ದರಿಂದ 436 ಮಂದಿ ಮತದಾರ ಸದಸ್ಯರು ಮತ ಹಾಕಲಿದ್ದಾರೆ. ಫ್ರೆಬ್ರವರಿ 27 ಭಾನುವಾರದಂದು ಮದ್ಯಾಹ್ನ 3 ಗಂಟೆಗೆ ಚುನಾವಣೆ ಮುಗಿದನಂತರ 3-30 , ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭಿಸಿ ಅಂದೇ ಚುನಾಯಿತ ವಿಜೇತರನ್ನು ಘೋಷಣೆ ಮಾಡಲಾಗುವುದು.
ಚುನಾವಣೆಯ ವೇಳೆ ಮತಗಟ್ಟೆಯೊಳಗೆ ಮತದಾರ ಸದಸ್ಯರಲ್ಲದವರಿಗೆ ಪ್ರವೇಶವಿಲ್ಲ. ಸಂಘದ ಸದಸ್ಯರಾದವರು ಮಾತ್ರ ಯಾವುದೇ ರೀತಿಯ ತಕರಾರು ಅರ್ಜಿ ಸಲ್ಲಿಸಲು ಮಾಹಿತಿ ಪಡೆಯಲು ಅರ್ಜಿ ಸಲ್ಲಿಸುವ ಹಕ್ಕು ಹೊಂದಿರುತ್ತಾರೆ. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ಮಾಡಿಕೊಳ್ಳದೆ ಚುನಾವಣೆಯ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

 

Leave a Reply

Your email address will not be published. Required fields are marked *