ಮಧುವಣಗಿತ್ತಿಯಂತೆ ಶೃಂಗಾರಗೊಂಡ ಅರಮನೆಯಲ್ಲಿ ನಾಳೆ ಖಾಸಗೀ ದರ್ಬಾರ್

 

ಮೈಸೂರು:6 ಅಕ್ಟೋಬರ್ 2021

ಸ್ಪೇಷಲ್ ಸ್ಟೋರಿ: ನ@ದಿನಿ           

                                  ದಸರಾ ಆರಂಭವಾಗುತ್ತಿದ್ದಂತೆ ಇಡೀ ಮೈಸೂರು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ.ದಸರಾ ಹಿನ್ನಲೆ ಅರಮನೆಯ ಹೊರಗೆ ವಿವಿಧ ಕಾರ್ಯಕ್ರಮ ನಡೆದರೂ ಅರಮನೆ ಒಳಗೆ ನಡೆಯುವ ಖಾಸಗೀ ದರ್ಬಾರ್ ಕಣ್ತುಂಬಿಕೊಳ್ಳಲು ಅವಕಾಶ ಮಾತ್ರ ಇಲ್ಲ.ಖಾಸಗಿ ದರ್ಬಾರ್ ನಲ್ಲಿ ಏನೆಲ್ಲಾ ನಡೆಯುತ್ತೆ ಯಾರ್ ಯಾರ್ ಇರ್ತಾರೆ ಇದರ ಬಗ್ಗೆ ಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ.

                            ಸದ್ಯ ಅರಮನೆಯಲ್ಲಿ ಒಂದೆಡೆ ಸಾಂಸ್ಕೃತಿಕ ರಂಗು ಮನತಣಿಸುತ್ತಿದ್ದರೆ, ಮತ್ತೊಂದೆಡೆ ಖಾಸಗಿ ದರ್ಬಾರ್ ರಾಜವೈಭವ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಿಕ ಪಟ್ಟದ ಕತ್ತಿಯನ್ನಿಟ್ಟು ಸಾಂಪ್ರದಾಯಿಕ ದರ್ಬಾರ್ ನಡೆಸಲಾಗಿತ್ತು. ಈಗ
ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ಅಲಂಕರಿಸಿ ಖಾಸಗಿ ದರ್ಬಾರ್ ನಡೆಸುತ್ತಾರೆ .ದರ್ಬಾರ್ ವೀಕ್ಷಿಸುವ ಮಂದಿಗೆ ಇತಿಹಾಸದ ರಾಜರ ಆಡಳಿತ ಕಣ್ಮುಂದೆ ಬಂದ ಅನುಭವ ಆಗೇ ಆಗುತ್ತೇ . ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರೇಷ್ಮೆ, ರತ್ನಖಚಿತ ಪ್ರಜ್ವಲಿಸುವ ರಾಜಪೋಷಾಕು ಧರಿಸಿ ಮಹಾರಾಜರ ಗತ್ತು-ಗಾಂಭೀರ್ಯದಲ್ಲಿ ಸಿಂಹಾಸನವನ್ನೇರಿ ಎಲ್ಲರಿಗೂ ಬಲಗೈಎತ್ತಿ ಸೆಲ್ಯೂಟ್ ಮಾಡಿ ಬಳಿಕ ಆಸೀನರಾಗುವ ಆ ದೃಶ್ಯವನ್ನು ಎಲ್ಲರ ಕಣ್ಮನ ಸೆಳೆಯುತ್ತದೆ .

                 ಸಂಪ್ರದಾಯ ಬದ್ಧ ಪೂಜೆ
   

                  ಹಿಂದಿನ ಮಹಾರಾಜರು ನವರಾತ್ರಿ ವೇಳೆ ಅರಮನೆಯ ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಪ್ರತಿದಿನ ಸರಿ ಸುಮಾರು ಮುಕ್ಕಾಲು ಗಂಟೆ ಕಾಲ ರತ್ನ ಖಚಿತ ಸಿಂಹಾಸನದಲ್ಲಿ ಆಸೀನರಾಗಿ ದರ್ಬಾರ್ ನಡೆಸುತ್ತಿದ್ದರು. ಅದನ್ನು ಇದೀಗ ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಇದು ಖಾಸಗಿ ದರ್ಬಾರ್ ಆಗಿ ಬದಲಾಗಿದೆ. ಆದರೆ ಆಗಿನ ಸಂಪ್ರದಾಯ, ರಾಜವೈಭವವನ್ನು ಈಗಲೂ ನಾವು ಕಾಣಬಹುದಾಗಿದೆ. ಇದೀಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ಅಲಂಕರಿಸಿ ಖಾಸಗಿ ದರ್ಬಾರ್ ನಡೆಸಿಕೊಂಡು ಹೋಗುತ್ತಿದ್ದಾರೆ.

ಪರಂಪರೆ ಮರೆಯದ ಮೈಸೂರು ರಾಜಮನೆತನ

                         ಸ್ವಾತಂತ್ರ್ಯ ಲಭಿಸಿದ ಬಳಿಕ ರಾಜಾಡಳಿತ ಕೊನೆಗೊಂಡಿತು. ಆದರೆ ಆಗ ಯಾವ ರೀತಿಯಲ್ಲಿ ರಾಜರು ದರ್ಬಾರ್ ನಡೆಸುತ್ತಿದ್ದರೋ, ಅದೇ ರೀತಿ ಪರಂಪರಾಗತ ವಿಧಿ-ವಿಧಾನಗಳಂತೆಯೇ ನಡೆಸಿಕೊಂಡು ಬರಲಾಗುತ್ತಿದೆ. ಇಷ್ಟಕ್ಕೂ ಈ ಖಾಸಗಿ ದರ್ಬಾರ್ ಹೇಗೆ ನಡೆಯುತ್ತದೆ ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ದರ್ಬಾರನ್ನು ಒಡೆಯರ್ ಕಾಲದಲ್ಲಿ ಎಷ್ಟು ಕಟ್ಟನಿಟ್ಟಾಗಿ, ಸಂಪ್ರದಾಯಬದ್ಧವಾಗಿ ನಡೆಸುತ್ತಿದ್ದರು ಎಂಬುದು ಈಗಿನ ಖಾಸಗಿ ದರ್ಬಾರ್ ನೋಡಿದ ಮಂದಿಯ ಅರಿವಿಗೆ ಬಂದೇ ಬರುತ್ತದೆ.

                                                                              ಪಾಡ್ಯದಿಂದ ಪೂಜೆ ಶುರು

                            ನವರಾತ್ರಿಯ ಮೊದಲನೆಯ ದಿನ ಅಂದರೆ ಪಾಡ್ಯದ ದಿನ ಪ್ರಸ್ತುತ ಮಹಾರಾಜರಾಗಿ ಖಾಸಗಿ ದರ್ಬಾರ್ ನಡೆಸುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಬೆಳಿಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೇ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಗುವುದು. ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಬೆಳಗುತ್ತಾರೆ.

ವಿಘ್ನನಾಶಕನಿಗೆ ಮೊದಲ ಪೂಜೆ 

                             ಆನಂತರ ಪೂಜೆಗೆ ಅಣಿಯಾಗುವ ಯದುವೀರ್ ಒಡೆಯರ್, ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿ ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಯದುವೀರ್ ಒಡೆಯರ್ ಜೊತೆಗೆ ಅವರ ಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಕೂಡ ರಾಜಮನೆತನದ ಪದ್ಧತಿಯಂತೆ ಮಹಾರಾಣಿ ಸ್ಥಾನದಲ್ಲಿ ನಿಂತು ತಾವೂ ಕಂಕಣ ಧರಿಸುತ್ತಾರೆ. ಅಲ್ಲಿಂದ ಎಲ್ಲಾ ರೀತಿಯ ಕಠಿಣವ್ರತಗಳನ್ನೂ ಅರಮನೆಯ ಸಂಪ್ರದಾಯದಂತೆ ಚಾಚೂ ತಪ್ಪದೆ ನಡೆಸಬೇಕಾಗುತ್ತದೆ.
                                                       

ದೇವ-ದೇವಿಯರ ಸನ್ನಿಧಿಯಲ್ಲಿ  ದೇವ-ದೇವಿಯರಿಗೆ ಶ್ರದ್ಧೆಯ ಪೂಜೆ

                     ದುರ್ಗೆಯ ದಿವ್ಯಸ್ವರೂಪಗಳಾದ ಬ್ರಹ್ಮಾಣಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಮಹೇಶ್ವರಿ, ದುರ್ಗಾ, ಕಾಳಿ, ಚಂಡಿಕೆ ಹೀಗೆ ಎಲ್ಲಾ ಶಕ್ತಿದೇವತೆಗಳನ್ನೂ ಆರಾಧಿಸಿ ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವ-ದೇವಿಯರ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಇದರ ನಂತರ ದೇವೀ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯುತ್ತದೆ. ಬಳಿಕ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳು ನಡೆದು ಅಷ್ಟೋತ್ತರವಾಗುತ್ತದೆ.                                               

 

ದಂಪತಿ ಪೂಜೆಯ ವೈಭವ

                             ಕಾಳಿಕಾ ಪುರಾಣದ ಪ್ರಕಾರ ವೈದಿಕವಾಗಿ ಅರಮನೆಯೊಳಗೆ ಕಾರ್ಯಕ್ರಮ ನಡೆಸುವ ಮುನ್ನ ಬೆಳಿಗ್ಗೆ ರತ್ನಸಿಂಹಾಸನಕ್ಕೂ ಪೂಜೆ ಸಲ್ಲಿಸಲಾಗುತ್ತದೆ. ಈ ನಡುವೆ ಕಂಕಣಧಾರಿಗಳಾದ ಯದುವೀರ್ ಒಡೆಯರ್ ದಂಪತಿಗಳಿಗೆ ದಂಪತಿಪೂಜೆ ಮಾಡಲಾಗುತ್ತದೆ. ಹಾಗೆಯೇ ದರ್ಬಾರಿಗೆ ಬರುವುದಕ್ಕೂ ಮೊದಲು ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಸುಮಂಗಲೆಯರೊಡನೆ ಯದುವೀರ್ ಅವರ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ. ಹತ್ತು ದಿನಗಳೂ ಒಡೆಯರ್ ಗೆ ಈ ರೀತಿ ಪಾದಪೂಜೆ ಮಾಡಲಾಗುತ್ತದೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ನಡೆಯುತ್ತದೆ. ಈ ಎಲ್ಲಾ ವಿಧಿ-ವಿಧಾನ ಪೂಜೆಗಳ ಜೊತೆ ವಿವಿಧ ಬಗೆಯ ದಂತದ ಗೊಂಬೆಗಳನ್ನು ಗೊಂಬೆತೊಟ್ಟಿಯಲ್ಲಿ ಜೋಡಿಸಿ ಕೂರಿಸಿ ಗೊಂಬೆ ಆರತಿ ಮಾಡಲಾಗುತ್ತದೆ.
                                               
                                                                  ಅರಮನೆಗೆ ಕಳೆ ನೀಡುವ ರತ್ನಸಿಂಹಾಸನ

                         ಆ ನಂತರ ರಾಜಗಾಂಭೀರ್ಯದಿಂದ ರತ್ನಸಿಂಹಾಸನ ಏರಿ ಆ ಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್ ಮಾಡಿ ಗತ್ತಿನಿಂದ ಕುಳಿತುಕೊಳ್ಳುತ್ತಾರೆ. ಆಗ ಹೊಗಳು ಭಟರು ರಾಜಾಧಿರಾಜ … ರಾಜ ಮಾರ್ತಾಂಡ … ಶ್ರೀಮನ್ಮಹಾರಾಜ … ಬಹುಪರಾಕ್ … ಮುಂತಾದ ಪರಾಕುಗಳನ್ನು ಮೊಳಗಿಸುತ್ತಾರೆ.


                                                                              ವಿಶೇಷ ಆಹ್ವಾನಿತರಿಗಷ್ಟೇ ಪ್ರವೇಶ
ನವರಾತ್ರಿಯ ಮೊದಲನೆ ದಿನ ಅಂದರೆ ಪಾಡ್ಯದ ದಿನ ಬೆಳಿಗ್ಗೆಯಿಂದ ಈ ಖಾಸಗಿ ದರ್ಬಾರ್ ನಡೆಯುತ್ತದೆ. ಉಳಿದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ನಡೆಯುತ್ತದೆ. ದ್ವಾರಪಾಲಕರು, ಪರಾಕು ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರು ಮಾತ್ರ ಖಾಸಗಿ ದರ್ಬಾರಿನಲಿ ಪಾಲ್ಗೊಳ್ಳುತ್ತಾರೆ.
ಖಾಸಗಿ ದರ್ಬಾರ್ ರಾಜಪರಿವಾರದ ಮಂದಿಗೆ ಕಾಣಿಕೆ
ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ನಡೆಯುವ ಮುನ್ನ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಆರಂಭವಾಗುತ್ತದೆ. ಸಿಂಹಾಸನಾರೂಢರಾದ ಯದುವೀರ್ ಒಡೆಯರ್ ಗೆ ದೇವಾಲಯಗಳಿಂದ ಆಗಮಿಸಿದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆ ನೀಡುವುದು, ನಜರ್ ಒಪ್ಪಿಸುವುದು ನಡೆಯುತ್ತದೆ. ನಂತರ ಸಿಂಹಾಸನಾರೂಢ ಯದುವೀರ್ ಒಡೆಯರ್ ಅವರು ರಾಜಪರಿವಾರದ ಮಂದಿಗೆ ಕಾಣಿಕೆ ನೀಡುತ್ತಾರೆ. ಪ್ರತಿ ದಿನವೂ ಸಂಪ್ರದಾಯ ಬದ್ಧವಾಗಿ ದರ್ಬಾರ್ ನಡೆಯುತ್ತದೆ.

ಶ್ರದ್ಧಾಭಕ್ತಿಯ ಧಾರ್ಮಿಕ ವಿಧಿಗಳು

                         ದರ್ಬಾರ್ ಸಂದರ್ಭ 108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿಯ ರಾತ್ರಿ ಅಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧಶಾಲೆಯಲ್ಲಿ ಆಯುಧಪೂಜೆ, ಇದೇ ದಿನ ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಲಾಗುತ್ತದೆ.

                                                                          ದರ್ಬಾರ್ ಎಂದರೆ ರಾಜ ಪ್ರತಿಷ್ಠೆಯಲ್ಲಾ 

                              ಒಟ್ಟಾರೆ ಹೇಳಬೇಕೆಂದರೆ ದರ್ಬಾರ್ ಎಂದರೆ ರಾಜಪ್ರತಿಷ್ಠೆ ಮೆರೆಯುವುದಲ್ಲ. ಪ್ರಜೆಗಳ ಕಷ್ಟ ಅರಿಯುವುದು. ಹೀಗಾಗಿಯೇ ಹಿಂದಿನ ಕಾಲದಿಂದಲೂ ಕಠಿಣ ವೃತ, ಸಂಪ್ರದಾಯ ಪಾಲನೆ, ಧಾರ್ಮಿಕ ವಿಧಿವಿಧಾನಗಳಿಂದ ನಡೆಸಿಕೊಂಡು ಬಂದಿದ್ದು ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.ನಾಳೆ ಪ್ರತಿವರ್ಷದಂತೆ ಅರಮನೆಯಲ್ಲಿ ಖಾಸಗೀ ದರ್ಬಾರ್ ನಡೆಯಲಿದೆ.

Leave a Reply

Your email address will not be published. Required fields are marked *