ಮೈಸೂರು:9 ಆಗಸ್ಟ್ 2021
ನ@ದಿನಿ
ಸಚಿವ ಸಂಪುಟ ರಚನೆಯಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮೈಸೂರು ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿಗಳು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಮೈಸೂರಿಗೆ ಮೊದಲ ಬಾರಿಗೆ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಬೇಕೆಂದು ಬಹಳ ಇಚ್ಛೆ ಇತ್ತು. ಕಳೆದ ಬಾರಿಯೂ ಕೂಡ ಬಂದಾಗ ತಾಯಿಯ ಆಶೀರ್ವಾದ ಪಡೆದಿದ್ದೆ. ರಾಜ್ಯದಲ್ಲಿ ಸುಭಿಕ್ಷೆಯಿರಲಿ, ಮಳೆ ಬೆಳೆ ಚೆನ್ನಾಗಿರಲಿ, ನಾಡಿನ ಜನ ಸುಖ ಸಂತೋಷದಿಂದಿರಲಿ, ರಾಜ್ಯದಿಂದ ಕೊರೋನಾ ವ್ಯಾಧಿ ತೊಲಗಲಿ, ರಾಜ್ಯ ಕೊರೋನಾ ಮುಕ್ತವಾಗಲಿ ಅಂತ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ವಿಶೇಷ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಯಾಗಿದೆ. ಎಲ್ಲರೂ ಸಹಕಾರ ಕೊಡುತ್ತಿದ್ದಾರೆ. ಸಣ್ಣಪುಟ್ಟ ಅಸಮಾಧಾನ ಇರಬಹುದು.ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಶಾಸಕ ರಾಮದಾಸ್ ನನ್ನ ಆತ್ಮೀಯ ಸ್ನೇಹಿತರು. ಪಕ್ಷದಲ್ಲಿ ಅವರು ಹಿರಿಯರಾಗಿದ್ದಾರೆ. ನಾನು ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು. ಆನಂದ್ ಸಿಂಗ್ ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಅವರಿಗೆ ಮನವರಿಕೆ ಮಾಡಿ ಕೊಟ್ಡಿದ್ದೇನೆ. ಇದಕ್ಕೆ ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನ ಮಾತಿಗೆ ಆನಂದ್ ಸಿಂಗ್ ಸಮಾಧಾನಗೊಂಡಿದ್ದಾರೆ ಎಂದರು.
“ತಮಿಳು ನಾಡು ರಾಜಕೀಯ ನಾಯಕರಿಗೆ ಮತ್ತೆ ಟಾಂಗ್ ನಂತರ ಮೇಕೆದಾಟು ನದಿ ನೀರು ಹಂಚಿಕೆ ವಿಚಾರ ಮಾತನಾಡುತ್ತ, ತಮಿಳುನಾಡಿನಲ್ಲಿ ನೀರಿನ ರಾಜಕಾರಣ ಮೊದಲಿನಿಂದಲೂ ಇದೆ. ಕಾವೇರಿ ನದಿ ನೀರು ಹಂಚಿಕೆಯ ವಿಚಾರ ಮುಂದಿಟ್ಟುಕೊಂಡು ಎಷ್ಟೋ ಪಕ್ಷಗಳು ಅಧಿಕಾರಕ್ಕೆ ಬಂದು ಹೋಗಿವೆ. ತಮಿಳುನಾಡಿನವರು ಏನೇ ಹೇಳಿದರೂ ನಾವು ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡಿಯೇ ತೀರುತ್ತೇವೆ ಎಂದು ತಮಿಳುನಾಡು ರಾಜಕೀಯ ನಾಯಕರಿಗೆ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟರು.”
ಕಾವೇರಿ ಕೊಳ್ಳದಲ್ಲಿ ಲಭ್ಯವಾಗುವ ಗರಿಷ್ಠ ಪ್ರಮಾಣದ ನೀರಿನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರನ್ನ ಭೇಟಿ ಮಾಡುತ್ತೇನೆ ಎಂದರು.
ಸುಪ್ರೀಂ ಸಿಕೊರ್ಟ್ ನೀಡಿರುವ ತೀರ್ಪು ಕಾನೂನಾತ್ಮಕ ವಾಗಿ ನಮಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುತ್ತೇನೆ.ಕಾನೂನು ತಜ್ಞರ ಜೊತೆಗೂ ಚರ್ಚೆ ನಡೆಸುತ್ತೇನೆ. ನಮ್ಮ ನೀರು ನಮ್ಮ ಹಕ್ಕು ಅದನ್ನು ಪಡೆದುಕೊಳ್ಳುತ್ತೇನೆ ಎಂದು ನುಡಿದರು.
ಕೊರೋನಾ ಕುರಿತು ಪ್ರತಿಕ್ರಿಯಿಸಿ ಮಹಾರಾಷ್ಟ್ರ ಮತ್ತು ಕೇರಳ ಗಡಿಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಪಡೆಯಲು ಬಂದಿದ್ದೇನೆ. ಮುಂದಿನವಾರದೊಳಗೆ ಎಲ್ಲ ಗಡಿ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ, ತೀವ್ರತೆಯನ್ನು ನೋಡಿ ತೀರ್ಮಾನವನ್ನು ಮಾಡುತ್ತೇವೆ. ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಲಾಗುವುದು ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಂಪುಟ ದರ್ಜೆ ಅಧಿಕಾರ ಬೇಡವೆಂದು ಹೇಳಿದ್ದಾರೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ. ನಿಕಟಪೂರ್ವ ಮುಖ್ಯಮಂತ್ರಿಗಳಿಗೇನು ಸೌಲಭ್ಯವಿದೆಯೋ ಅದನ್ನು ಮುಂದುವರಿಸುತ್ತೇವೆ ಎಂದರು.
ವೀಕೆಂಡ್ ಕಫ್ರ್ಯೂ ಕುರಿತಂತೆ ರಾಜ್ಯಮಟ್ಟದಲ್ಲಿ ಹಲವು ನಿರ್ಧಾರ ಮಾಡಿದ್ದೇವೆ. ಜನರ ಹಿತಕ್ಕೋಸ್ಕರವಾಗಿಯೇ ಇವೆಲ್ಲ ಮಾಡಿರೋದು ಎಂದರು.
ಈ ಸಂದರ್ಭ ಸಂಪುಟ ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ಡಾ. ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ ಸಾಥ್, ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ರೇಣುಕಾಚಾರ್ಯ ಮತ್ತಿತರರಿದ್ದರು.