ನಂದಿನಿ ಮೈಸೂರು
ಮೈಸೂರು: ನನಗೆ ಬಿಜೆಪಿ ಹಾಗೂ ದೇಶವೇ ಮುಖ್ಯವಾದ ಕಾರಣ, ನನಗೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗದಿದ್ದರೂ ಕೂಡ ಪಕ್ಷದ ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸಲಿದ್ದೇನೆ ಎಂದು ಚಿತ್ರನಟ ಹಾಗೂ ಬಿಜೆಪಿ ಮುಖಂಡ ಎಸ್. ಜಯಪ್ರಕಾಶ್ ( ಜೆ.ಪಿ) ತಿಳಿಸಿದರು.
ಬುಧವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರಕ್ಕೆ ನನಗೆ ಟಿಕೆಟ್ ನೀಡಬೇಕೆಂದು ರಾಜ್ಯ ಹಾಗೂ ರಾಷ್ಟ್ರದ ನಾಯಕರಿಗೆ ಮನವಿ ಮಾಡಿದ್ದೆ. ನನಗೆ ಟಿಕೆಟ್ ಕೊಡುವ ಭರವಸೆಯನ್ನು ಎಲ್ಲಾ ನಾಯಕರು ನೀಡಿದ್ದರು. ಆದರೆ ಕೊನೆಗಳಿಗೆಯಲ್ಲಿ ನನಗೆ ಟಿಕೆಟ್ ಕೈತಪ್ಪಿದ್ದು, ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳು ತೀವ್ರ ಒತ್ತಡ ಹೇರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದರು. ಅವರ ಪ್ರೀತಿ, ವಿಶ್ವಾಸದ ಒತ್ತಾಯಕ್ಕೆ ಮಣಿದ ನಾನು, ಪಕ್ಷೇತರ ಅಭ್ಯರ್ಥಿಯಾಗಿ ಕೊನೆಗಳಿಗೆಯಲ್ಲಿ ನಾಮಪತ್ರವನ್ನು ಸಲ್ಲಿಸಿದ್ದೆ. ಆದರೆ ನನ್ನ ನಾಮಪತ್ರ ಕೆಲವು ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ. ಈ ನಡುವೆ ಪಕ್ಷದ ಹಲವು ನಾಯಕರು ನನ್ನನ್ನು ಸಂಪರ್ಕಿಸಿ, ಹಲವಾರು ವರ್ಷ ಗಳಿಂದ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದೀಯಾ? ಹಲವು ಬಾರಿ ಟಿಕೆಟ್ ತ್ಯಾಗ ಮಾಡಿರುವ ನಿನಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗಲಿದೆ. ನಿನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಲು ಪಕ್ಷದ ವರಿಷ್ಠ ದೊಂದಿಗೆ ನಾವು ಮಾತನಾಡುತ್ತಿವೆ. ಹಾಗಾಗಿ ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನೀನು, ಕೂಡಲೇ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿ, ಪಕ್ಷದ ಪರವಾಗಿ ಚುನಾವಣಾ ಪ್ರಚಾರ ನಡೆಸುವಂತೆ ಸೂಚಿದರು. ಅವರ ಆದೇಶಕ್ಕೆ ಮನ್ನಣೆ ನೀಡಿ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ . ಚಾಮರಾಜ ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನನ್ನ ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಶ್ರಮಿಸುತ್ತೇನೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ನಾನು ಚುನಾವಣಾ ಪ್ರಚಾರವನ್ನು ಕೂಡ ಮಾಡುತ್ತೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಹ ವಕ್ತಾರ ಕೆ ಡಾ.ಕೆ ವಸಂತ್ ಕುಮಾರ್, ವೀಕ್ಷಕಿ ಸೌಧಾಮಣಿ, ಮಹಿಳಾ ಮೋರ್ಚಾದ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ವಿಜಯಾ, ಮುಖಂಡರಾದ ಇಂದಿರಾ, ರಮೇಶ್ ಚೇತನ್, ಪ್ರದೀಪ್ ಗೌಡ, ಅಪ್ಪು, ಅಶ್ವಿನಿ, ಮಹೇಶ್ ತಲಕಾಡು, ಹರ್ಷವರ್ಧನ್, ಬೈರೇಗೌಡ, ಅಭಿನಂದನ್, ಮಲ್ಲೇಶ್ವರ ಮತ್ತಿತರು ಉಪಸ್ಥಿತರಿದ್ದರು.