ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ

ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ

ಕರ್ನಾಟಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ. ರಾಜ್ಯದ ಎಲ್ಲಾ 224 ಸ್ಥಾನಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಮತ್ತು ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪಕ್ಷದ ಮುಖ್ಯ ಕಾರ್ಯತಂತ್ರ ನಿರೂಪಕ ಮತ್ತು ಭಾಜಪದ ಕಠಿಣ ಪರಿಶ್ರಮಿ ನಾಯಕ ಅಮಿತ್ ಶಾ ಕರ್ನಾಟಕದಲ್ಲಿಯೇ ಬೀಡು ಬಿಟ್ಟಿದ್ದಾರೆ. ಚುನಾವಣಾ ಕಾರ್ಯತಂತ್ರಗಳಲ್ಲಿ ಹೆಸರುವಾಸಿಯಾಗಿರುವ ಅಮಿತ್ ಶಾ, ದಿನವಿಡೀ ರೋಡ್ ಶೋಗಳು, ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಪಕ್ಷವನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಭಾಜಪದ ಬಾವುಟನ್ನು ಹಾರಿಸಲು ಕಾರ್ಯತಂತ್ರಗಳನ್ನು ರೂಪಿಸಲು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ತಡರಾತ್ರಿಯವರೆಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಈ ವರ್ಷದಲ್ಲಿ ಈಗಾಗಲೇ ಸುಮಾರು ಹದಿನಾಲ್ಕು ದಿನಗಳಿಗಿಂತಲೂ ಹೆಚ್ಚು ಸಮಯವನ್ನು ಕರ್ನಾಟಕದಲ್ಲಿ ಕಳೆದಿರುವ ಅಮಿತ್ ಶಾ, ಕರುನಾಡಿನಲ್ಲಿ ಮತ್ತೊಮ್ಮೆ ಕಮಲನವನ್ನು ಅರಳಿಸಲೇ ಬೇಕು ಎಂದು ಸಂಕಲ್ಪ ತೊಟ್ಟಿದ್ದಾರೆ.

ಕರ್ನಾಟಕದ, ಚಾಮರಾಜನಗರದ ಗುಂಡ್ಲುಪೇಟೆ ಮತ್ತು ಹಾಸನದ ಸಕಲೇಶಪುರದಲ್ಲಿ ಸೋಮವಾರ ನಡೆದ ಎರಡು ರೋಡ್‌ಶೋಗಳಲ್ಲಿ ಸೇರಿದ್ದ ಭಾರಿ ಜನಸಮೂಹವು, ಮೋದಿಯವರ ನಂತರ, ಅತಿ ಹೆಚ್ಚು ಜನಸಮೂಹವನ್ನು ಸೆಳೆಯುವ ನಾಯಕ ಅಮಿತ್ ಶಾ ಎಂಬುದನ್ನು ಸಾಬೀತುಪಡಿಸಿತು. ಇದಕ್ಕೂ ಮೊದಲ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಶಾ, ದೇವಿಯ ದರ್ಶನ ಪಡೆದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಅಮಿತ್ ಶಾ, ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮುಂದುವರೆಸುತ್ತಾ ಶಾ, ಮೋದಿಯವರ ನೇತೃತ್ವದಲ್ಲಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಾ, ಅಭಿವೃದ್ಧಿಯ ಪರ್ವ ನೀಡುವ ಡಬಲ್ ಇಂಜಿನ್ ಸರ್ಕಾರ ಬೇಕೋ, ಕರ್ನಾಟಕವನ್ನು ದೆಹಲಿಯ ಎಟಿಎಂ ಮಾಡುವ ಕಾಂಗ್ರೆಸ್‌ನ ರಿವರ್ಸ್ ಗೇರ್ ಸರ್ಕಾರ ಬೇಕೋ ಎಂಬುದನ್ನು ಕರ್ನಾಟಕದ ಜನತೆ ನಿರ್ಧರಿಸಬೇಕು ಎಂದು ಹೇಳಿದರು. ತಮ್ಮ ಕಾಲಘಟ್ಟದಲ್ಲಿ ಪಿಎಫ್ಐನಂತಹ ತೀವ್ರವಾದಿ ಸಂಘಟನೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿ, ಕರ್ನಾಟಕದ ಸುರಕ್ಷತೆಯನ್ನು ಕಡೆಗಣಿಸುವ ಕಾಂಗ್ರೆಸ್ ಪಕ್ಷ ಒಂದು ಕಡೆಯಿದ್ದರೆ, ಇನ್ನೊಂದು ಕಡೆ ಅಂತಹ ಉಗ್ರವಾದಿ ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕವನ್ನು ಸುರಕ್ಷಿತ ಗೊಳಿಸುವುದು ಮಾತ್ರವಲ್ಲದೇ, ರಾಜಕೀಯ ಸ್ಥಿರತೆ ಮೂಲಕ ನವ ಕರ್ನಾಟಕ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಭಾರತೀಯ ಜನತಾ ಪಕ್ಷವಿದೆ ಎಂದರು.

ಕಾಂಗ್ರೆಸ್ ತನ್ನ ಆಡಳಿತದಲ್ಲಿ ಸಂವಿಧಾನ ಬಾಹಿರವಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಾ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನಾಲ್ಕು ಪ್ರತಿಶತ ಮೀಸಲಾತಿಯನ್ನು ನೀಡಿತ್ತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಆ ಅಸಂವಿಧಾನಿಕ ಮೀಸಲಾತಿಯನ್ನು ರದ್ದುಗೊಳಿಸಿತು. ಇದರ ಜೊತೆಗೆ ಪರಿಶಿಷ್ಠ ಜಾತಿ ಮತ್ತು ಪಂಗಡಗಳು ಮತ್ತು ಹಿಂದುಳಿದ ವರ್ಗಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮಾಜದ ಮೀಸಲಾತಿಯನ್ನು ಹೆಚ್ಚಿಸಿ, ಹಲವು ವರ್ಷಗಳ ನಂತರ ಸಾಮಾಜಿಕ ನ್ಯಾಯವನ್ನು ನೀಡುವ ಕಾರ್ಯವನ್ನು ಭಾಜಪ ಮಾಡಿದೆ ಎಂದರು.

ಕಾಂಗ್ರೆಸ್‌, ಕರ್ನಾಟಕದ ಜನ ಕಲ್ಯಾಣವನ್ನಾಗಲಿ, ಅಥವಾ ಕರ್ನಾಟಕದ ವಿಕಾಸವನ್ನಾಗಲಿ ಬಯಸುತ್ತಿಲ್ಲ. ಅದು ಕರ್ನಾಟಕದಲ್ಲಿ ತನ್ನ ಎಟಿಎಂ ಅನ್ನು ಹುಡುಕುತ್ತಿದೆ. ಇನ್ನೊಂದು ಕಡೆ ಜೆಡಿಎಸ್ ಒಂದು ಪರಿವಾರವಾದಿ ಪಕ್ಷವಾಗಿದ್ದು, ಅದು ಚುನಾವಣೆಯಲ್ಲಿ ಯಾವಾಗಲೂ ಕಾಂಗ್ರೆಸ್ ಎದುರು ಹೋರಾಡಿದರೂ, ಚುನಾವಣೆ ನಂತರ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಸೇರುತ್ತದೆ ಎಂದು ಜೆಡಿಎಸ್ ವಿರುದ್ಧ ಕೂಡ ಹರಿಹಾಯ್ದರು.ಕರ್ನಾಟಕದ ಜನತೆಗೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ ಶಾ, ಪೂರ್ಣ ಬಹುಮತದ ಭಾರತೀಯ ಜನತಾ ಪಾರ್ಟಿಯ ಸರ್ಕಾರವನ್ನು ಆರಿಸಿ. ಅದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕದ ಸರ್ವಾಂಗೀಣ ವಿಕಾಸ ಮಾಡುವುದರ ಜೊತೆಗೆ ಕರ್ನಾಟಕದಿಂದ ಬಡತನವನ್ನು ನೂರು ಪ್ರತಿಶತವಾಗಿ ನಿರ್ಮೂಲನೆ ಮಾಡಲಿದೆ.

ಕರ್ನಾಟಕದ ವಿವಿಧ ಪ್ರದೇಶಗಳನ್ನು ಸುತ್ತಿ ರುವ ಅಮಿತ್ ಶಾ ಆಯಾ ಭಾಗಗಳ ತಳಮಟ್ಟದ ಸಮಸ್ಯೆಗಳನ್ನು ಅರಿತಿದ್ದಾರೆ, ಹಾಗೇ ತಮ್ಮ ವಿಭಿನ್ನ ರಾಜನೀತಿ, ರಣತಂತ್ರಗಳಿಂದಾಗಿ, ಕಳೆದ 4 ವರ್ಷಗಳಿಂದ ಕರ್ನಾಟಕದಲ್ಲಿ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಯ ನವ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

Leave a Reply

Your email address will not be published. Required fields are marked *