ವಿದ್ವತ್ತಿನ ಮಹಾನದಿ ನಾಡೋಜ ಪ್ರೊ.ಭಾಷ್ಯo ಸ್ವಾಮೀಜಿ: ಸಾಹಿತಿ ಬನ್ನೂರು ರಾಜು

ನಂದಿನಿ ಮೈಸೂರು

ವಿದ್ವತ್ತಿನ ಮಹಾನದಿ ನಾಡೋಜ ಪ್ರೊ.ಭಾಷ್ಯo ಸ್ವಾಮೀಜಿ: ಸಾಹಿತಿ ಬನ್ನೂರು ರಾಜು

ಮೈಸೂರು: ಕನ್ನಡ ನಾಡಿನ ಜ್ಞಾನ ಕಳಸದಂತಿರುವ ವಿದ್ವತ್ತಿನ ಮಹಾನದಿ ನಾಡೋಜ ಪ್ರೊ.ಭಾಷ್ಯo ಸ್ವಾಮೀಜಿ ಅವರು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಸದಾ ಹರಿಯುವ ಸೇವಾ ನದಿಯಂತಿದ್ದು ಸೇವೆ ಎಂಬುದಕ್ಕೆ ಹೊಸ ಭಾಷ್ಯ ಬರದಿದ್ದಾರೆಂದು ಸಾಹಿತಿ ಬನ್ನೂರುಕೆ.ರಾಜು ಬಣ್ಣಿಸಿದರು.

ಮಂಡ್ಯದ ಮಣ್ಣಿನ ಕದಂಬ ಸೈನ್ಯ ಕನ್ನಡ ಸಂಘಟನೆಯು ಮೈಸೂರು ನಗರದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಕುಲ ದೇವತೆ ಶ್ರೀ ಭುವನೇಶ್ವರಿ ಪ್ರಶಸ್ತಿ ಮತ್ತು ನಾಡ ಕವಿ ಹುಯಿಲಗೋಳ ನಾರಾಯಣರಾವ್ ಪ್ರಶಸ್ತಿ ಹಾಗೂ ಕದಂಬ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಕುಲದೇವತೆ ಶ್ರೀ ಭುವನೇಶ್ವರಿ ಪ್ರಶಸ್ತಿ ಪುರಸ್ಕೃತ ಪ್ರೊ.ಭಾಷ್ಯo ಸ್ವಾಮೀಜಿ ಅವರನ್ನು ಕುರಿತು ಅಭಿನಂದನಾ ಭಾಷಣ ಮಾಡಿದ ಅವರು, ಭಾಷ್ಯo ಸ್ವಾಮೀಜಿಯವರು ತಮ್ಮ ಜ್ಞಾನ ಕೋಶದ ಮೂಲಕ ಸರ್ವ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದು ಸಾವಿರಾರು ಶಿಷ್ಯಕೋಟಿಯನ್ನು ಸೃಷ್ಟಿಸಿರುವ ಸಮಾಜಮುಖಿ ಸಂತರೆಂದರು.
ಇವನಾರವ ಇವನಾರವ ನೆನ್ನದೇ ಇವ ನಮ್ಮವನೆಂಬ ಭಾವ ತುಂಬಿದ ಮಾನವ ಧರ್ಮದ ಭಾವೈಕ್ಯಚೇತನ ಭಾಷ್ಯo ಸ್ವಾಮೀಜಿ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಆಶಕ್ತರಿಗೆ, ಅಸಹಾಯಕರಿಗೆ, ಒಳಿತು ಮಾಡುವ ಸಮಾಜ ಸೇವಕರಿಗೆ, ಹೋರಾಟಗಾರರಿಗೆ ಹೀಗೆ ಬಹುತೇಕ ನಾಡಿನ ವಿವಿಧ ಕ್ಷೇತ್ರಗಳ ಮಂದಿಗೆ ಸದಾ ತಮ್ಮ ಕೈಲಾದ ನೆರವನ್ನು ನೀಡುತ್ತಾ ಬಂದಿರುವ ಕರ್ಣನ ಗುಣದವರು ಇವರು. ಸಂಸ್ಕೃತದಿಂದ ಕನ್ನಡದ ಸಂಪತ್ತನ್ನು ಹೆಚ್ಚಿಸಿರುವ ಸ್ವಾಮೀಜಿಯವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರೆ ಕನ್ನಡದ ಮಹಾ ಸಾಹಿತ್ಯ ಸಂಪತ್ತನ್ನು ಸಂಸ್ಕೃತಕ್ಕೂ ಸಂಸ್ಕೃತದಿಂದ ಕನ್ನಡಕ್ಕೂ ಅನುವಾದಿಸುವ ಕೈಂಕರ್ಯವನ್ನು ಮಾಡಿ ಉಭಯ ಭಾಷೆಗಳಿಗೂ ಕೀರ್ತಿ ತರುತ್ತಿದ್ದರು. ಆದರೆ ಇಂತಹ ಜ್ಞಾನವಾರಿಧಿಯನ್ನು ಸಂಸ್ಕೃತ ವಿ.ವಿ.ಗೆ ಕುಲಪತಿಗಳಾಗಿ ಯಾವ ಸರ್ಕಾರಗಳೂ ಮಾಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಭಾಷ್ಯoಸ್ವಾಮೀಜಿ ಅವರು, ತನ್ನ ಒಂದು ಕಣ್ಣಲ್ಲಿ ಮಂದಿರ ಮತ್ತೊಂದು ಕಣ್ಣಲ್ಲಿ ಮಸೀದಿ ಎಂದು ಟಿಪ್ಪು ಸುಲ್ತಾನ್ ಹೇಳುತ್ತಿದ್ದ. ಹಾಗೆಯೇ ನನ್ನ ಕಣ್ಣುಗಳಲ್ಲಿ ಕೂಡ ಮಂದಿರ, ಮಸೀದಿ, ಚರ್ಚ್ ಗಳೆಲ್ಲವೂ ಒಂದೇಆಗಿವೆ. ಎಲ್ಲಾ ಧರ್ಮಗಳು ಸಾರುವುದು ಮಾನವೀಯತೆಯನ್ನೇ.ಹಾಗಾಗಿ ನಾವೆಲ್ಲರೂ ಒಂದೇ ಎಂಬ ಸದ್ಭಾವನೆಯಲ್ಲಿ ಮನುಷ್ಯರಾಗಿ ಬದುಕೋಣ ಎಂದರು. ನಂತರ ಕದಂಬ ಸಾಮ್ರಾಜ್ಯದ ರಾಜಧಾನಿ ಬನವಾಸಿಯ ಸಿದ್ದಾಪುರದ ಸಾಹಿತಿ ಗಂಗಾಧರ ಕೊಳಗಿ ಅವರಿಗೆ ನಾಡ ಕವಿ ಹುಯಿಲಗೋಳ ನಾರಾಯಣ ರಾವ್ ಪ್ರಶಸ್ತಿಯನ್ನೂ , ಮಂಡ್ಯದ ಥಾಮಸ್ ಬೆಂಜಮಿನ್ ಉಕಿಟ್ಟಿ ಎ.ಜೈ ಕುಮಾರಿ ಹಾಗೂ ದೇವನಹಳ್ಳಿ ದೇವರಾಜು ಅವರಿಗೆ ಕದಂಬ ದಂಪತಿ ಪ್ರಶಸ್ತಿಯನ್ನೂ, ಖ್ಯಾತ ವಿದುಷಿ ರಾಜಲಕ್ಷ್ಮಿ ಶ್ರೀಧರ್, ಮುರುಗೇಶ್ ಬಸ್ತಿಕೊಪ್ಪ, ಚಂದ್ರಶೇಖರ ಆರಾಧ್ಯ, ಭಾಗ್ಯಲಕ್ಷ್ಮಿ ಶಿವನಂಜಯ್ಯ ಗೌರಮ್ಮಗೋವಿಂದರಾಜು, ಗಂಜಾಂ ಪಾರ್ವತಮ್ಮ, ಮಹಮ್ಮದ್ ಶಫಿಉಲ್ಲಾ, ಇ.ಶಿವಸ್ವಾಮಿ, ಎಂ. ಪುಟ್ಟಸ್ವಾಮಿ, ಆಟೋ ಚಾಲಕರಾದ ನಂಜುಂಡಸ್ವಾಮಿ, ಮಂಚಣ್ಣ, ಪುಟ್ಟರಾಜು ಹಾಗು ಬಸವರಾಜು ಅವರುಗಳಿಗೆ ಕದಂಬ ಸೇವಾ ರತ್ನ ಪ್ರಶಸ್ತಿಯನ್ನೂ, ಭಾಷ್ಯo ಸ್ವಾಮೀಜಿ ಅವರು ಪ್ರದಾನಿಸಿ ಸನ್ಮಾನಿಸಿದರು.
ಇದಕ್ಕೂ ಮುನ್ನ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇ ಗೌಡರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಕೋರಿದರು.

ಕದಂಬ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀರಂಗಪಟ್ಟಣ ತಾಲ್ಲೂಕು ಕಸಾಪ ಅಧ್ಯಕ್ಷೆ ಸರಸ್ವತಮ್ಮ ಬಸವರಾಜು, ಲೆಕ್ಕ ಪರಿಶೋಧಕ ಟಿ.ನಾರಾಯಣಸ್ವಾಮಿ, ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಎಸ್. ಬಾಲಕೃಷ್ಣ, ಸಿ.ಶಿವಪ್ಪ, ಎಸ್. ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *