ಬಿಜೆಪಿ ಸರ್ಕಾರದ ವಿರುದ್ದ ಬೆಳಕವಾಡಿಯಲ್ಲಿ ಪ್ರತಿಭಟನೆ

ಮಳವಳ್ಳಿ: ಜನರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಹಾಗೂ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರೋದ್ಯಮಿಗಳು ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟಗಳಿಗೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಪೊರೇಟ್ ಬಂಡವಾಳಿಗರ ಪರವಾದ ನೀತಿಗಳನ್ನು ಹಿಮ್ಮೆಟ್ಟಿಸಲು ದೇಶದ ಕೇಂದ್ರ ಕಾರ್ಮಿಕ ಸಂಘಟನೆಗಳ ‘ದೇಶವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ’ದ ಕರೆಯನ್ನು ಬೆಂಬಲಿಸಿ ಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಕಾರ್ಮಿಕ, ರೈತ, ದಲಿತ, ಮಹಿಳಾ ವಿದ್ಯಾರ್ಥಿ ಹಾಗೂ ಯುವಜನ ಮತ್ತು ಜನಪರ ಸಂಘನೆಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ಸಂಚಾಲಕ ಹೆಚ್.ಕೆ.ತಿಮ್ಮೇಗೌಡ BJP ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಜಾರಿಮಾಡಿರುವ ಕಾರ್ಪೊರೇಟ್ ಬಂಡವಾಳಿಗರ ಪರವಾದ ನೀತಿಗಳು ಹಾಗೂ ಕಾರ್ಮಿಕ ವಿರೋಧಿ ಸಂಹಿತೆಗಳಿಂದಾಗಿ ದೇಶದ ಕಾರ್ಮಿಕರು ಮತ್ತು ನೌಕರರು ತಮ್ಮೆಲ್ಲ ಕಾರ್ಮಿಕ ಪರವಾದ ಹಕ್ಕುಗಳನ್ನು ಕಳೆದುಕೊಂಡು ಕೆಲಸದ ಭದ್ರತೆ, ನ್ಯಾಯಯುತ ವೇತನ, ಸೇವಾ ಮತ್ತು ಸಾಮಾಜಿಕ ಭದ್ರತೆಗಳಿಲ್ಲದೆ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಮತ್ತು ಸಾಂದರ್ಭಿಕ ಕೆಲಸಗಾರರಾಗಿ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಕಾರ್ಪೊರೇಟ್ ಪರವಾದ ಕೃಷಿ ಮತ್ತು ಮಾರುಕಟ್ಟೆ ನೀತಿಗಳಿಂದಾಗಿ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆ, ಉತ್ತಮ ಹಾಗೂ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ಮತ್ತು ಸೂಕ್ತ ಸಾಲ ಸೌಲಭ್ಯಗಳಿಲ್ಲದೆ ಕೃಷಿ ಕೆಲಸ ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಗುರುಸ್ವಾಮಿ, ಸಿದ್ದರಾಜು, ಶಿವರಾಮು, ಮಹಾದೇವ,ಅಂಗನವಾಡಿ ನೌಕರರ ಸಂಘದ ಬಸಮ್ಮ, ಮಂಜುಳಾ, DYFI ನ ಪ್ರದೀಪ್, ಮಹಿಳಾ ಸಂಘಟನೆಯ ತಾಯಮ್ಮ,ಕುಮಾರಿ, ಅನಿತಾ ಇದ್ದರು.

Leave a Reply

Your email address will not be published. Required fields are marked *