ಬೆಂಗಳೂರು ಸ್ವಚ್ಚತೆಗಾಗಿ ಅಭಿಯಾನ ಬಿಬಿಎಂಪಿ ಜೊತೆ ಚರ್ಚೆ ನಡೆಸಿ ಸಲಹೆ ನೀಡಿದ ನಟ ಅನಿರುದ್ದ

ಬೆಂಗಳೂರು:4 ಜೂನ್ 2022

ನಂದಿನಿ ಮೈಸೂರು

ನಮ್ಮ ಮನೆಯಲ್ಲಿರೋ ಕಸನಾ ರೋಡ್ ಗೆ ಎಸೆದು ಸದ್ಯ ಯಾರೂ ನೋಡಲಿಲ್ಲ ಅಂತ ಮೂಗು ಮುಚ್ಚಿಕೊಂಡು ಹೋಗೋ ಜನರೇ ಹೆಚ್ಚು.ಇಂತಹ ಕಾಲದಲ್ಲಿ ಬೃಹತ್ ಬೆಂಗಳೂರಿನಲ್ಲಿ ಬೃಹತ್ ಗಾತ್ರದ ಕಸದ ರಾಶಿ ನೋಡಿದ ತಕ್ಷಣ ತಾನೊಬ್ಬ ನಟ ಎಂದು ತಿಳಿದಿದ್ರೂ ಕೂಡ ಕಸದ ಬಳಿ ನಿಂತು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸ್ವಚ್ಚತೆ ಕಾಪಾಡುವಂತೆ ಮಾಡುತ್ತಾರೆ.ಸಿನಿಮಾ ರಂಗದಲ್ಲಿ ಪಾತ್ರಕ್ಕೆ ಮಾತ್ರ ನಟಿಸುವ ಕಲಾವಿದರೂ ಇದ್ದಾರೆ.ಆದರೆ ನಿಜ ಜೀವನದಲ್ಲೂ ಸ್ವಚ್ಚತೆಗಾಗಿ ನಟ ಅನಿರುದ್ಧ ಅಭಿಯಾನ ಮಾಡುತ್ತಿದ್ದು ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಂದು ನಮ್ಮ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್, ಐಎಎಸ್, ನನ್ನನ್ನು ಆಮಂತ್ರಿಸಿದ್ದು ಒಂದು ಹೆಮ್ಮೆಯ ವಿಷಯ.
ಅವರು ಮತ್ತು ಅವರ ತಂಡದ ಸದಸ್ಯರೊಡನೆ ಚರ್ಚಿಸುವಾಗ, ಈ ಕೆಳಗಿನ ಸಲಹೆಗಳನ್ನು ಅವರ ಮುಂದಿಟ್ಟಿದ್ದಾರೆ.

೧. ಘನತ್ಯಾಜ್ಯ ನಿರ್ವಹಣೆ, ಸುರಕ್ಷತೆ, ಹಸಿರು ಹೊದಿಕೆಯ ಹೆಚ್ಚಳ ಮತ್ತು ಆರೋಗ್ಯ ಹಾಗೂ ನೈರ್ಮಲ್ಯ ಮುಂತಾದ ವಿಷಯಗಳ ಕುರಿತು ವಿಜ್ಞಾನಿಗಳು, ಇಂಜಿನಿಯರ್ ಗಳು, ನಗರ ಯೋಜಕರು, ವಾಸ್ತುಶಿಲ್ಪಿಗಳು, ಸಾಮಾಜಿಕ ಕಾರ್ಯಕರ್ತರು, ನಿವೃತ್ತ ಅಧಿಕಾರಿಗಳು ಇತ್ಯಾದಿ ಸಮಾನ ಸಂಖ್ಯೆಯ ಮಹಿಳೆಯರನ್ನೊಳಗೊಂಡ ತಜ್ಞರ ಸಮಿತಿಗಳನ್ನು ರಚಿಸುವುದು.
೨. ಪ್ರತಿ ವಾರ್ಡಿನಲ್ಲೂ ವಸ್ತುಸ್ಥಿತಿಯ ಮೇಲೆ ಕಣ್ಣಿಡಲು ಹಾಗೂ ಸೂಕ್ತ ಸಲಹೆಗಳನ್ನು ನೀಡಲು ಬಿಬಿಎಂಪಿ ಅಧಿಕಾರಿಗಳು, ಸಾಮಾಜಿಕ ಸೇವಾಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಾಗರಿಕರನ್ನೊಳಗೊಂಡ ವಾರ್ಡ್ ಸಮಿತಿಗಳನ್ನು ರಚಿಸುವುದರ ಅಥವಾ ಸಕ್ರಿಯಗೊಳಿಸುವುದರ ಮೂಲಕ ಜನರು ಭಾಗವಹಿಸುವಂತೆ ನೋಡಿಕೊಳ್ಳುವುದು.
೩. ಎಲ್ಲಾ ಝೋನಲ್ ಮಾರ್ಷಲ್ ಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ರಸ್ತೆಗಳ ನಾಮಫಲಕಗಳ ಮೇಲೆ ಪ್ರದರ್ಶಿಸಿದರೆ ಅಗತ್ಯ ಬಿದ್ದಾಗ ನಾಗರಿಕರು ಅವರನ್ನೇ ನೇರವಾಗಿ ಸಂಪರ್ಕಿಸಬಹುದು.

ಇದಲ್ಲದೆ, ಈ ಕೆಳಗಿನ ಸಲಹೆಗಳನ್ನೂ ಪರಿಗಣಿಸುವುದು —

೧. ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಗಾಗಿ
* ಯಾವುದೇ ಬಗೆಯ ಪ್ಲಾಸ್ಟಿಕ್ ಬಳಕೆ ಮೇಲಿನ ನಿಷೇಧವನ್ನು ಜಾರಿಗೊಳಿಸುವುದು
* ವಾರ್ಡುಗಳಲ್ಲಿ ಅಲ್ಲಲ್ಲಿ ಕಂಪೋಸ್ಟರ್ ಗಳನ್ನಿಟ್ಟು ನಿಯಮಿತವಾಗಿ ಜೈವಿಕ ವಿಘಟನೀಯ ತ್ಯಾಜ್ಯ ಸಂಗ್ರಹವಾಗಿ ಕಂಪೋಸ್ಟರ್ ಗಳಿಗೆ ಹೋಗುವಂತೆ ಮಾಡಬೇಕು – ಬೇರ್ಪಡಿಸಿದ ಜೈವಿಕ ವಿಘಟನೀಯ ತ್ಯಾಜ್ಯವನ್ನು ನೀಡಲು ನಾಗರಿಕರಿಗೆ ಪ್ರೋತ್ಸಾಹಕವನ್ನು ಘೋಷಿಸಬಹುದು. ಹಾಗೆಯೇ, ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಬೇರ್ಪಡಿಸಲೂ ಜನರಿಗೆ ಪ್ರೋತ್ಸಾಹಕಗಳನ್ನು ಕೊಡಬಹುದು. ಈ ಪ್ರಯತ್ನದಲ್ಲಿ ಇಂತಹ ತ್ಯಾಜ್ಯವನ್ನು ಕೊಂಡುಕೊಂಡು ಅವುಗಳನ್ನು ಮರುಬಳಕೆಗೆ ಉಪಯೋಗಿಸುವ ಏಜೆನ್ಸಿ ಗಳನ್ನು ಸೇರಿಸಿಕೊಳ್ಳುವುದು.
* ಮೂಲದಲ್ಲೇ ತ್ಯಾಜ್ಯವನ್ನು ಬೇರ್ಪಡಿಸುವುದನ್ನು ಜಾರಿಗೆ ತರಬೇಕು.
* ವಿವಿಧ ಬಗೆಯ ತ್ಯಾಜ್ಯಗಳನ್ನು ಸಾಗಿಸಲು ನಿರ್ದಿಷ್ಟ ಭಾಗಗಳಿದ್ದು, ಮುಚ್ಚಿರುವ,ಯೋಗ್ಯವಾದ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕು.
* ನವೀನ ಮಾದರಿಯ ಕಸದತೊಟ್ಟಿಗಳನ್ನು ಛತ್ರ, ಹೋಟೆಲುಗಳು ಇತ್ಯಾದಿ ಹೆಚ್ಚು ಕಸ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಇರಿಸಬೇಕು.
* ಘನತ್ಯಾಜ್ಯ ಸಂಗ್ರಹಣೆಯು ಹೆಚ್ಚು ಸಲ ಆಗಬೇಕು. ದಿನಕ್ಕೊಂದು ಬಾರಿ ಮಾತ್ರವಲ್ಲದೆ ವಾಹನಗಳು ಬೇರೆ ಬೇರೆ ಸಮಯದಲ್ಲಿ ಕನಿಷ್ಟ ಮೂರು ಸಲವಾದರೂ ಕಸವನ್ನು ಸಂಗ್ರಹಿಸುವಂತೆ ಮಾಡಬೇಕು.
* ಇಡೀ ತಿಂಗಳು ವಾರ್ಡನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವ ಪೌರಕಾರ್ಮಿಕರಿಗೆ ಬಹುಮಾನವನ್ನು ಕೊಡಬೇಕು.
* ಎಲ್ಲ ಏರಿಯಾಗಳಲ್ಲೂ ಸುಲಭ ಶೌಚಾಲಯಗಳನ್ನು ಒದಗಿಸಬೇಕು ಮತ್ತವುಗಳ ನಿರ್ವಹಣೆ ಚೆನ್ನಾಗಿ ಆಗಬೇಕು.
* ಮಹಾಪೂರ ತಡೆಯಲು ರಾಜಕಾಲುವೆಗಳನ್ನು ಶುಚಿಗೊಳಿಸಿ, ಒತ್ತುವರಿಗಳನ್ನು ತೆರವು ಮಾಡಿ ಅವುಗಳನ್ನು ಸುಲಭವಾಗಿ ತಲುಪುವ ಹಾಗೆ ನೋಡಿಕೊಳ್ಳಬೇಕು.
ಹಾಗೆಯೇ ಸಾಧ್ಯವಾದರೆ ಕಾಲುವೆಯುದ್ದಕ್ಕೂ ಗುಜರಾತ್ ಮಾದರಿಯಂತೆ ಸೋಲಾರ್ ಪ್ಯಾನೆಲ್ ಗಳನ್ನು ಒದಗಿಸುವುದು.
* ಯಲ್ಚೇನಹಳ್ಳಿ, ಕನಕಪುರ ರಸ್ತೆ, ಮೈದಾನವನ್ನು ಶುಚಿಗೊಳಿಸುವುದು.

೨. ಸುರಕ್ಷತೆಗಾಗಿ
* ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತೂಗಾಡುವ ತಂತಿ ಮತ್ತು ಕೇಬಲ್ ಗಳನ್ನು ನೆಲದೊಳಗೆ ಸೇರಿಸಬೇಕು. ಅವಶ್ಯವಿದ್ದೆಡೆ, ಈ ಪರಿಸ್ಥಿತಿಗೆ ಕಾರಣರಾದ ಕೇಬಲ್ ಆಪರೇಟರ್ ಗಳು, ಇಂಟರ್ನೆಟ್ ಸೇವೆಗಳನ್ನು ಒದಗಿಸುವವರು ಹಾಗೂ ಇನ್ನಿತರರ ಮೇಲೆ ಭಾರಿ ದಂಡ ವಿಧಿಸುವುದು.
*ಸುರಕ್ಷತೆಗೆ ಆದ್ಯತೆ ಕೊಟ್ಟು ಟ್ರಾನ್ಸ್ ಫಾರ್ಮರ್ ಗಳನ್ನು ಮಾಡಬೇಕು. ನಾಗರಿಕರು ಮತ್ತು ಅಧಿಕಾರಿಗಳು ನಿಯಮಿತವಾಗಿ ಅವುಗಳ ಮೇಲ್ವಿಚಾರಣೆಯನ್ನು ಮಾಡುವುದನ್ನು ಕಡ್ಡಾಯ ಮಾಡಬೇಕು.
* ರಸ್ತೆಯಲ್ಲಿ ಅಡ್ಡಾಡುವ ದನಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಜಾನುವಾರುಗಳನ್ನು ಹಾಗೆ ರಸ್ತೆಯ ಮೇಲೆ ಅಡ್ಡಾಡಲು ಬಿಟ್ಟವರಿಗೆ ಭಾರೀ ದಂಡ ವಿಧಿಸುವುದು
* ಪ್ರಾಣಿ ದಯಾ ಸಂಘಗಳನ್ನು ಸೇರಿಸಿಕೊಂಡು ಬೀದಿ ನಾಯಿಗಳ ಸಮಸ್ಯೆಯನ್ನು ನಿವಾರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು.
*ರಸ್ತೆಗಳು, ಅಡಿಗಾಲುವೆಗಳು, ರಸ್ತೆ ಉಬ್ಬುಗಳು, ಪಾದಚಾರಿ ಮಾರ್ಗಗಳು, ಮೋರಿ ಹಾಗೂ ಕೊಚ್ಚೆಗುಂಡಿ ಇತ್ಯಾದಿಗಳನ್ನು ತಜ್ಞರೊಂದಿಗೆ ಸರಿಯಾಗಿ ಸಮಾಲೋಚಿಸಿ, ವೈಜ್ಞಾನಿಕ ವಿನ್ಯಾಸದ ಅನುಸಾರವಾಗಿ ರಚಿಸುವುದು.
* ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವುದು
* ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವುದು
* ಒತ್ತುವರಿಯಾದಂತಹ ಪಾದಚಾರಿ ಮಾರ್ಗಗಳು ಯಾವ್ಯಾವ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುವವೋ, ಆ ಅಧಿಕಾರಿಗಳ ಮೇಲೆ ದಂಡ ವಿಧಿಸುವುದು
* ಎಲ್ಲ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳೂ ಪೂರ್ತಿಗೊಳ್ಳುವಂತೆ ನೋಡಿಕೊಳ್ಳುವುದು

೩. ಸೌಂದರ್ಯೀಕರಣ ಮತ್ತು ಹಸಿರು ಹೊದಿಕೆ
*ಯಾವುದೇ ವಿನಾಯಿತಿ ಇಲ್ಲದೆ ಪೋಸ್ಟರ್ ಗಳನ್ನು ಅಂಟಿಸುವುದು ಮತ್ತು ಜಾಹೀರಾತು ಫಲಕಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು. ಬದಲಿಗೆ ನಿರ್ದಿಷ್ಟ ಶುಲ್ಕಕ್ಕೆ ಡಿಜಿಟಲ್ ಫಲಕಗಳನ್ನು ಒದಗಿಸುವುದು. ಇದರಿಂದ, ಬಿಬಿಎಂಪಿಗೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಆದಾಯ ಉತ್ಪತ್ತಿಗೆ ಸಹಾಯವಾಗುತ್ತದೆ. ಅಲ್ಲದೆ, ಮಧ್ಯೆಮಧ್ಯೆ ಕರ್ನಾಟಕ ಪ್ರವಾಸೋದ್ಯಮ ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಸಹ ಪ್ರದರ್ಶಿಸಬಹುದು
*ಮರಗಳಿಗೆ ಸುತ್ತಿ, ಹೊಡೆದು, ಚುಚ್ಚಿರುವ ತಂತಿ, ಕಂಬಿ, ಮೊಳೆ, ಸ್ಟೆಪಲ್ಸ್ ಮತ್ತು ಪೋಸ್ಟರ್ ಗಳನ್ನು ಕಿತ್ತುಹಾಕಿ, ಈ ಕೆಲಸ ಮುಂದುವರೆಸುವವರಿಗೆ ದಂಡ ವಿಧಿಸಬೇಕು
* ರಸ್ತೆ ವಿಭಜಕಗಳ ಮೇಲೆ ಮರ/ಪೊದೆಗಳನ್ನು ನೆಟ್ಟು, ನೆಲದಡಿಯ ಕೊಳವೆಗಳಿಂದ ಸದಾ ನೀರಿನ ಸೌಲಭ್ಯ ಇರುವಂತೆ ನೋಡಿಕೊಳ್ಳುವುದು ಮತ್ತವುಗಳ ನಿರ್ವಹಣೆ ಚೆನ್ನಾಗಿ ಮಾಡುವುದು. ಮುರಿದು ಹೋಗಿರುವ ಗ್ರಿಲ್ ಗಳನ್ನು ತೆಗೆದು ಅವುಗಳ ರಿಪೇರಿ ಹಾಗೂ ನಿರ್ವಹಣೆ ಆಗಾಗ್ಗೆ ನಡೆಯುವಂತೆ ನೋಡಿಕೊಳ್ಳಬೇಕು
*ಖಾಲಿ ಇರುವ ಜಾಹೀರಾತು ಫಲಕಗಳ ಚೌಕಟ್ಟು, ಫಲಕಗಳು ಇತ್ಯಾದಿಗಳನ್ನು ತೆಗೆಯುವುದು
* ಲಾಲ್ ಬಾಗಿನ ಕಾಂಪೌಂಡ್ ಗೋಡೆಯನ್ನು ತೆಗೆದು ಹಾಕಿ ಎಂಎಸ್ ಗ್ರಿಲ್ ಗಳನ್ನು ಅಳವಡಿಸಿ, ಜನರಿಗೆ ಚೆನ್ನಾಗಿ ಕಾಣುವಂತೆ ಮಾಡಿ ಉತ್ತೇಜನ ನೀಡುವುದು

೪. ಕೆರೆಗಳ ಪುನರುಜ್ಜೀವನ
*ಕೆರೆಗಳು ತ್ಯಾಜ್ಯಮುಕ್ತವಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಕಳೆಗಳು ಮತ್ತು ಕೈಗಾರಿಕಾ ತ್ಯಾಜ್ಯವನ್ನು ತೆಗೆದು ಹಾಕಿ ಕೆರೆಗಳು ಸಾಯದಂತೆ ಸಂರಕ್ಷಿಸಬೇಕು
* ಕೆರೆಗಳ ಸುತ್ತ ಗ್ರಿಲ್ ಅಳವಡಿಸಿ ಅವುಗಳನ್ನು ನೋಡಿಕೊಳ್ಳಬೇಕು
* ಕೆರೆಗಳನ್ನು ಸ್ವಚ್ಛಗೊಳಿಸಿ, ಸುಂದರವನ್ನಾಗಿ ಮಾಡಿದ ಮೇಲೆ ಅವುಗಳ ನಿರ್ವಹಣಾ ವೆಚ್ಚಕ್ಕೆ ಆದಾಯ ಗಳಿಸಲು ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆಗಳಾದ ಬೋಟಿಂಗ್, ಪಾದಚಾರಿ ಪಥ, ಪಾರ್ಕು ಮತ್ತು ಉಪಾಹಾರ ಗೃಹಗಳನ್ನು ತೆರೆಯುವುದು

Leave a Reply

Your email address will not be published. Required fields are marked *