ಸ್ವತಂತ್ರ ಭಾರತವನ್ನು ಸಂವಿಧಾನದಿಂದ ಕಟ್ಟಿದವರು ಅಂಬೇಡ್ಕರ್: ಸಾಹಿತಿ ಬನ್ನೂರು ರಾಜು

ನಂದಿನಿ ಮೈಸೂರು

ಸ್ವತಂತ್ರ ಭಾರತವನ್ನು ಸಂವಿಧಾನದಿಂದ ಕಟ್ಟಿದವರು ಅಂಬೇಡ್ಕರ್: ಸಾಹಿತಿ ಬನ್ನೂರು ರಾಜು

ಮೈಸೂರು: ಬ್ರಿಟೀಷ್ ಭಾರತ ವನ್ನು ಸಂವಿಧಾನಾತ್ಮಕವಾಗಿ ನಮ್ಮ ಭಾರತವನ್ನಾಗಿ ಕಟ್ಟಿದವರು ಅಂಬೇಡ್ಕರರಾದರೂ ಅವರು ಕಂಡ ಸಂಪೂರ್ಣ ಜಾತ್ಯಾತೀತ ಭಾರತದ ಕನಸು ದೇಶದಲ್ಲಿ ಇನ್ನೂ ನನಸಾಗಿಲ್ಲವೆಂದು ಸಾಹಿತಿ ಬನ್ನೂರು ಕೆ. ರಾಜು ವಿಷಾದಿಸಿದರು.

ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯ ಆರನೇ ತಿರುವಿನಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ವಿಶ್ವೇಶ್ವರ ನಗರದ ವೀವರ್ಸ್ ಕಾಲೋನಿಯ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಜನಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಅಂಬೇಡ್ಕರ್ ರವರ ಮಹಾ ಪರಿ ನಿಬ್ಬಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿಗೂ ಇಡೀ ದೇಶವನ್ನು ಕಾಡುತ್ತಿರುವ ಜಾತಿ, ಮತ, ಧರ್ಮ, ವರ್ಣ, ವರ್ಗ, ಪಂಥಗಳೆಂಬ ಭೇದ ಭಾವಗಳ ರೋಗಗಳಿಗೆ ಅಂಬೇಡ್ಕರ್ ಸಿದ್ಧಾಂತವೇ ಸಿದ್ದೌಷದಿಯೆಂದರು.
ಸಾಮಾನ್ಯವಾಗಿ ಬಾಬಾ ಸಾಹೇಬರೆಂದರೆ ಕೆಳ ಜಾತಿಯಲ್ಲಿ ಹುಟ್ಟಿದ್ದಕ್ಕಾಗಿ ಬಾಲ್ಯದಿಂದಲೂ ಅವರು ಅಸ್ಪೃಶ್ಯತೆಯ ಕರಿ ನೆರಳಿನಲ್ಲಿ ಅನೇಕ ನೋವುಗಳನ್ನು ಅನುಭವಿಸಿ ಅದರಿಂದ ನರಳಿ ಅಪಮಾನಕ್ಕೆ ಒಳಗಾದವರು. ಕೊನೆಗೆ ಇದೆಲ್ಲದರ ವಿರುದ್ಧ ಸಿಡಿದೆದ್ದು ಶಿಕ್ಷಣವೆಂಬ ಅಸ್ತ್ರದಿಂದ ಉನ್ನತ ಜ್ಞಾನ ಗಳಿಸಿ “ಭಾರತ ಸಂವಿಧಾನ” ಬರೆದು ಸಂವಿಧಾನ ಶಿಲ್ಪಿ ಎನಿಸಿ ಅಸ್ಪೃಶ್ಯರ ಉದ್ದಾರಕ್ಕಾಗಿ ಹೋರಾಟ ಮಾಡಿದವರು, ದಲಿತರಿಗೆ ಮೀಸಲಾತಿ ತಂದು ಕೊಟ್ಟರೆಂಬುದಷ್ಟಕ್ಕೆ ಮುಕ್ತಾಯಗೊಳಿಸಿ, ದೇಶವೇ ಹೆಮ್ಮೆಪಡುವಂತಹ ಅಂಬೇಡ್ಕರರ ನಿಜವಾದ ಇತಿಹಾಸವನ್ನೇ ಮುಚ್ಚಿಬಿಡುತ್ತಾರೆ. ವಾಸ್ತವವಾಗಿ ಅಂಬೇಡ್ಕರ್ ಬದುಕು ಮಾತ್ರ ಇತಿಹಾಸವಲ್ಲ. ಅವರೇ ಒಂದು ಚರಿತ್ರೆ. ಈ ದೇಶದಲ್ಲಿ ಅಂಬೇಡ್ಕರ್ ಎಂಬ ಮಹಾ ಚೇತನ ಜನಿಸದೇ ಇದ್ದಿದ್ದರೆ ದೇಶದ ಬಹುಜನರ ಬದುಕು ಅದರಲ್ಲೂ ಮಹಿಳೆಯರ ಮತ್ತು ಕಾರ್ಮಿಕರ ಹಾಗೂ ರೈತರ ಬದುಕು ಇನ್ನೆಷ್ಟು ಸಂಕಷ್ಟಕ್ಕೆ ತಳ್ಳಲ್ಪಡುತ್ತಿತ್ತೋ ಏನೋ. ತಮ್ಮ ಮೇಧಾವಿತನ ದಿಂದ ಬ್ರಿಟಿಷ್ ಭಾರತದಲ್ಲೇ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದು ನಂತರ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಯಾರೂ ಊಹಿಸದ ರೀತಿಯಲ್ಲಿ ದೇಶದ ಅಭಿವೃದ್ಧಿ ಹಾಗೂ ಸಮಾಜ ಸುಧಾರಣೆಗೆ ತಮ್ಮನ್ನೇ ಸಮರ್ಪಿಸಿಕೊಂಡ ಬಾಬಾ ಸಾಹೇಬರು ಪಂಚ ವಾರ್ಷಿಕ ಯೋಜನೆಯಲ್ಲಿ ನೆಹರು ಅವರಿಗೆ ಒತ್ತಾಸೆಯಾಗಿ ನಿಂತವರು.
1942 ರಲ್ಲಂತೂ ದೇಶದ ಪರಿಸ್ಥಿತಿ ಹದಗೆಟ್ಟಿದ್ದ ಸಂದರ್ಭದಲ್ಲಿ ದೇಶದ ಕೃಷಿ, ಕೈಗಾರಿಕೆ, ಮಹಿಳಾಭಿವೃದ್ಧಿ, ಆರ್ಥಿಕತೆ, ಪುನರ್ವಸತಿ, ಸೈನಿಕ ಕಲ್ಯಾಣ ಸೇರಿದಂತೆ ಅನೇಕ ಜನಪರ ಕೆಲಸಗಳಿಗಾಗಿ ಬ್ರಿಟಿಷ್ ಗವರ್ನರ್ ಜನರಲ್ ರಿಂದ ರಚಿಸಲ್ಪಟ್ಟಿದ್ದ ಪುನರುಜ್ಜೀವನ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರು ಅಲ್ಲಿ ತಳ ಸಮುದಾಯ ವನ್ನು, ಶೋಷಿತರನ್ನು ಮೇಲೆತ್ತುವಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದರು. ದೇಶದಲ್ಲೇ ಪ್ರಥಮವಾಗಿ ರೈತರ ಪರ ದನಿಯೆತ್ತಿದ್ದ ಅಂಬೇಡ್ಕರ್, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೂ ಮೂಲ ಪುರುಷರಾಗಿದ್ದು, ಹಿಂದೂ ಸಾಮಾಜಿಕ ಸುಧಾರಣೆಗೂ ಕಾರಣರಾಗಿದ್ದರು. ಮಹಿಳೆಯರಿಗೆ ಅನೇಕ ಅನುಕೂಲಗಳನ್ನು ಒದಗಿಸಿ ಕೊಟ್ಟಿದ್ದ ಬಾಬಾ ಸಾಹೇಬರು ಮಹಿಳೆಯರಿಗಾಗಿ ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ಕೊಡಿಸಲು ಹೋರಾಡಿದ್ದು ಮಸೂದೆ ಜಾರಿಗೊಳಿಸಲು ಸಾಧ್ಯವಾಗದೇ ಹೋದಾಗ ತಮ್ಮ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಇಂತಹ ಸಮಾಜದ ಚಿಂತಕ, ಮಹಾ ಮೇಧಾವಿ ಅಂಬೇಡ್ಕರರನ್ನು ಈ ದೇಶ ಜಾತಿ ಕಣ್ಣಿನಿಂದ ನೋಡದೆ ಹೋಗಿದ್ದಲ್ಲಿ ಪ್ರತಿಯೊಬ್ಬರ ಮನೆಯ ಭಗವಂತನಾಗಿ ಅಂಬೇಡ್ಕರ್ ಇರುತ್ತಿದ್ದರೆಂದ ಅವರು, ಬದುಕಿದ್ದಾಗಲೂ ಮತ್ತು ಸತ್ತ ನಂತರವೂ ಶೋಷಣೆಗೊಳಪಟ್ಟ ದೇಶದ ಏಕೈಕ ಮಹಾನಾಯಕರೆಂದರೆ ಅದು ಅಂಬೇಡ್ಕರ್ ಎಂದು ಹೇಳಿದರು.
ವಿಶ್ವ ಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಜನಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಮಹೇಶ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಬಾಬಾ ಸಾಹೇಬರ ಭಾರತದ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ತಿಳಿಸಿ ಕೊಟ್ಟರು. ನಂತರ ಅವರು ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕವನ್ನು ಉಚಿತವಾಗಿ ವಿತರಿಸಿದರು.

ಶಾಲೆಯ ಹಿರಿಯ ಶಿಕ್ಷಕ ಶಿವಯ್ಯ, ಶಿಕ್ಷಕಿಯರಾದ ಶಿಲ್ಪಶ್ರೀ, ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಗಣ್ಯರೆಲ್ಲರೂ ವಿದ್ಯಾರ್ಥಿಗಳೊಡನೆ ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *