ವಿದ್ಯಾರ್ಥಿಗಳು ಸ್ವಾಭಾವಿಕ ಸಸ್ಯಗಳಂತೆ ಬೆಳೆಯಬೇಕು: ಸಾಹಿತಿ ಬನ್ನೂರು ರಾಜು

ಮೈಸೂರು:20 ಮೇ 2022

ನಂದಿನಿ ಮೈಸೂರು

ನಿನ್ನ ಬಾಳಿನ ಶಿಲ್ಪಿ ನೀನೆ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ವಿದ್ಯಾರ್ಥಿಗಳು ತಮ್ಮ ಬದುಕನ್ನು ತಾವೇ ಕಟ್ಟಿಕೊಂಡು ಸ್ವಾಭಾವಿಕ ಸಸ್ಯಗಳಂತೆ ಬೆಳೆಯಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಕೆ. ಆರ್. ಮೊಹಲ್ಲಾದ ಅಗ್ರಹಾರದ ತ್ಯಾಗರಾಜ ರಸ್ತೆಯ ಆರನೇ ತಿರುವಿನಲ್ಲಿರುವ ಅಕ್ಕನ ಬಳಗದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾ ರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಡುಮೇಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಪ್ರಕೃತಿ ಸಹಜವಾಗಿ ತನ್ನಂತಾನೆ ಬೆಳೆಯುವ ಸ್ವಾಭಾವಿಕ ಸಸ್ಯಗಳನ್ನು ಯಾರೂ ಪೋಷಣೆ ಮಾಡಿ ಬೆಳೆಸುವುದಿಲ್ಲ. ಅವು ತಮ್ಮ ಸುತ್ತಲೂ ಇರುವ ಪರಿಸರದ ಫಲವತ್ತತೆಯನ್ನು ಪಡೆದುಕೊಂಡು ನಿಸರ್ಗದತ್ತವಾಗಿ ಬೆಳೆಯುತ್ತವೆ. ಅದೇ ರೀತಿ ವಿದ್ಯಾರ್ಥಿಗಳು ಕೂಡ ಪ್ರತಿಯೊಂದಕ್ಕೂ ಇತರರ ಮೇಲೆ ಅವಲಂಬಿತವಾಗದೆ ಪರಾವಲಂಬಿತನವನ್ನು ಬಿಟ್ಟು ತಮ್ಮ ಸುತ್ತಲಿನ ಸಮಾಜದಲ್ಲಿ ಸುಲಭವಾಗಿ ದೊರೆಯುವಂತಹ ಜ್ಞಾನ ಸಂಪದವನ್ನು ಸದುಪಯೋಗ ಮಾಡಿಕೊಂಡು ಸ್ವಶಕ್ತಿಯಿಂದ ಸಹಜವಾಗಿ ಬುದ್ದಿವಂತರಾಗಿ, ಜ್ಞಾನವಂತರಾಗಿ,ವಿವೇಕವಂತರಾಗಿ ಬೆಳೆಯಬೇಕೆಂದರು.

ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳು ಉತ್ತಮವಾಗಿ ಓದುವುದರ ಜೊತೆಗೆ ಅಷ್ಟೇ ಮುಖ್ಯವಾಗಿ ಅನಾರೋಗ್ಯಕರ ಹೊರಗಿನ ತಿಂಡಿ ತಿನಿಸುಗಳಿಂದ ದೂರವಿದ್ದು ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಹಾಗೂ ತಂದೆ-ತಾಯಿಗಳು ಮತ್ತು ಗುರು-ಹಿರಿಯರು ಹೇಳಿದಂತೆ ಕೇಳಬೇಕು. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬಂತೆ ವಿದ್ಯೆ ಕಲಿಸುವ ಗುರುಗಳ ಬಗ್ಗೆ ಬಹು ದೊಡ್ಡ ಗೌರವ ಇಟ್ಟುಕೊಂಡು ಕಲಿಯಬೇಕು. ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡಿರುವ ವಿದ್ಯಾರ್ಥಿಗಳಾರೂ ಸಾಧನೆಯಿಂದ ಹಿಂದೆ ಬಿದ್ದಿಲ್ಲ. ಹಾಗಾಗಿ ದೊಡ್ಡ ದೊಡ್ಡ ಕನಸುಗಳನ್ನು, ದೊಡ್ಡ ದೊಡ್ಡ ಗುರಿಗಳನ್ನು ಹೊಂದಿ ವಿದ್ಯಾರ್ಥಿಗಳು ಸಾಧಕರಾಗಬೇ ಕೆಂದು ಹೇಳಿದ ಅವರು ಭವಿಷ್ಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಬಹುದೊಡ್ಡ ಸಾಧಕ ರಾಗುವಂತೆ ಹಾರೈಸಿದರು.

ಖ್ಯಾತ ಸಮಾಜ ಸೇವಾಕರ್ತೆ ಮಾಲಿನಿ ಆರ್. ಪಾಲಾಕ್ಷ ಅವರು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಓದುವುದಷ್ಟೇ ಮುಖ್ಯವಲ್ಲ ಓದಿನಿಂದಾಚೆಗೂ ಒಳ್ಳೊಳ್ಳೆಯ ಅವಕಾಶಗಳು ಇವೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕೆಂದು ಹೇಳಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಅನೇಕ ವಿಷಯಗಳನ್ನು ತಿಳಿಸಿಕೊಟ್ಟರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶಿಕ್ಷಣತಜ್ಞ ಎ.ಸಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ಹಿತವಚನ ಹೇಳಿದರು. ಮುಖ್ಯೋಪಾಧ್ಯಾಯಿನಿ ಎಂ.ಜಿ.ಸುಗುಣಾವತಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಶಿಕ್ಷಕಿ ಹಾಗೂ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಅಕ್ಕನ ಬಳಗ ಹಿರಿಯ ಪ್ರಾರ್ಥಮಿಕ ಶಾಲೆಯ ಶಿಕ್ಷಕರಾದ ಶಿವಯ್ಯ, ಶಿಲ್ಪ, ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *