ಮೈಸೂರು:13 ಅಕ್ಟೋಬರ್ 2021
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಅರಮನೆ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಮತ್ತು ತಂಡವು ರಂಗಗೀತೆಗಳ ರಂಗೇರಿಸಿತು.
ಮೊದಲಿಗೆ ಜೋಕುಮಾರಸ್ವಾಮಿ ನಾಟಕದ ‘ಶರಣು ಹೇಳಿವ್ರಿ ಸ್ವಾಮಿ ನಾವು ನಿಮಗ,’ ‘ಎನಗೂ ಆಣೆ ರಂಗ ನಿನಗೂ ಆಣೆ’, ಸತ್ತವರ ನೆರಳು ನಾಟಕದ ಬಿ.ವಿ.ಕಾರಂತರ ಸಂಗೀತ ಸಂಯೋಜನೆ ಮಾಡಿದ ‘ಜೋ ಜೋ ಶ್ರೀ ಕೃಷ್ಣ’ ಗೀತೆಯನ್ನು ಸೊಗಸಾಗಿ ಹಾಡಿದರು.
ಕೃಷ್ಣಲೀಲಾ ನಾಟಕದ ಪಿ.ಆರ್.ಪುಟ್ಟಸ್ವಾಮಯ್ಯ ಅವರು ರಚಸಿದ ‘ಗೋಕುಲ ಸಂತೋಷ ಸುಧೆಯೊ ನಿಧಿಯೊ’ ಹಾಗೂ ಲವ-ಕುಶ ನಾಟಕದ ಪಿ.ಕಾಳಿಂಗರಾಯರು ಸಂಗೀತ ಸಂಯೋಜನೆ ಮಾಡಿದ ‘ತೊರೆದ ನಿನ್ನ ಪತಿ ನಿರ್ದಯದೇ’ ಗೀತೆಯನ್ನು ಹಾಡುವ ಮೂಲಕ ರಾಮನಿಂದ ದೂರವಾದ ಸೀತೆಯ ಅಳಲಿನ ಆಳವನ್ನು ಗಾಯನದ ಮೂಲಕ ಪ್ರಸ್ತುತ ಪಡಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಅವರು ರಚಿಸಿದ ನಾಗಮಂಡಲ ನಾಟಕದ ಸಿ.ಅಶ್ವಥ್ ಅವರ ಸಂಗೀತ ಸಂಯೋಜನೆಯ ‘ಹಿಂಗಿದ್ದಳೊಬ್ಬಳು ಹುಡುಗಿ’ ಗೀತೆಯನ್ನು ಹಾಡಿದ ಬಳಿಕ ದಶವಾಥಾರದ ಕಾಯಾದು ನಾಟಕದ ‘ಕರುಳಿನ ಕರೆಯ ಕೇಳಿ’ ಸೇರಿದಂತೆ ಅನೇಕ ಕಂಪನಿ ನಾಟಕದ ಗೀತೆಗಳನ್ನು ಹಾಡಿ ನೋಡುಗರ ಮನಸೂರೆಗೊಳ್ಳುವಂತೆ ಮಾಡಿದರು.
ತಂಡದಲ್ಲಿ ಗಾಯಕಿಯರಾದ ಪೂಜಾರಾವ್, ಪೂಜಾ, ರಕ್ಷಿತಾ, ನಾಗರತ್ನ, ಗಾಯಕರಾದ ಪ್ರಕಾಶ್, ಸೂರ್ಯ, ಲೋಕೇಶಾಚಾರ್, ಅನಿರ್ ಅಯ್ಯ ಅವರು ಸಾಥ್ ನೀಡಿದರು. ಹಾರ್ಮೋನಿಯಂನಲ್ಲಿ ಪ್ರವೀಣ್ ಡಿ.ರಾವ್, ತಬಲಾದಲ್ಲಿ ರಾಘವೇಂದ್ರ, ಸುಬ್ರಹ್ಮಣ್ಯ ಇದ್ದರು.
ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್. ರಘುನಾಥ್, ಮುಡಾ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿ.ಇ.ಓ ಎ.ಎಂ ಯೋಗೀಶ್, ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಅವರು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.