ನಂದಿನಿ ಮೈಸೂರು
ʻಮಕ್ಕಳಿಗೆ ಕಲಿ-ನಲಿ ಪರಿಕಲ್ಪನೆಯಲ್ಲಿ ಶಿಕ್ಷಣ ನೀಡುವ ಅಭ್ಯಾಸವಾಗಬೇಕುʼ
ಆಪಲ್ ಪೈ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮೈವಿವಿಯ ಪ್ರಭಾರ ಕುಲಪತಿ ಪ್ರೊ.ಮುಜಾಫರ್ ಅಸಾದಿ ಅಭಿಮತ
ಕಲಿ-ನಲಿ ಪರಿಕಲ್ಪನೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರಿಗೆ ಬೇಗ ಅರ್ಥವಾಗುತ್ತದೆ. ಚಟುವಟಿಕೆಯ ಮೂಲಕ ಕಲಿತರೆ ಬಹಳ ಕಾಲ ಅವರ ಮನಸ್ಸಿನಲ್ಲಿ ಆ ವಿಷಯ ಉಳಿಯುತ್ತದೆ. ಈ ನಿಟ್ಟಿನಲ್ಲಿ ಆಪಲ್ ಪೈ ಶಾಲೆ ಒಳ್ಳೆಯ ಕೆಲಸ ಮಾಡಲು ಹೊರಟಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಮುಜಾಫರ್ ಅಸಾದಿ ಅಭಿಪ್ರಾಯಪಟ್ಟರು.
ನಗರದ ಸರಸ್ವತಿಪುರಂನಲ್ಲಿ ಆಪಲ್ ಪೈ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿ-ನಲಿ ನಮ್ಮೆಲ್ಲರಿಗೂ ತಿಳಿದಿರುವ ಪರಿಕಲ್ಪನೆ. ಪ್ರೀ ಕೆ.ಜಿ. ಮಕ್ಕಳು ಆಟವಾಡುವ ಮನಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಈ ಪರಿಕಲ್ಪನೆಯಲ್ಲಿ ಆಟವಾಡುವ ಮೂಲಕವೇ ಪಾಠ ಕಲಿಸಿದರೆ ಇನ್ನೂ ಪರಿಣಾಮಕಾರಿಯಾಗಿ ಪಾಠ ಕಲಿಯುತ್ತಾರೆ. ಈ ಹಂತದಲ್ಲಿ ಮಕ್ಕಳಿಗೆ ವಿನೂತನ, ವಿಶಿಷ್ಟ ರೀತಿಯಲ್ಲಿ ಶಿಕ್ಷಣ ನೀಡುವುದು ಬಹಳ ಮುಖ್ಯ. ಆಪಲ್ ಪೈ ಶಾಲೆಯ ಆವರಣ, ತರಗತಿ, ಆಟದ ಸ್ಥಳ ಎಲ್ಲವೂ ವರ್ಣರಂಜಿತವಾಗಿ ಬಹಳ ಉಲ್ಲಾಸಮಯವಾಗಿದೆ. ಇಲ್ಲಿ ಮಕ್ಕಳು ಖುಷಿಯಿಂದ ಪಾಠ ಕಲಿಯುವುದು ಖಂಡಿತ ಎಂದು ಸಂತಸ ವ್ಯಕ್ತಪಡಿಸಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ನಮ್ಮ ಕ್ಷೇತ್ರದಲ್ಲಿ ಇಂತಹ ವಿನೂತನ ಶಾಲೆ ಆರಂಭವಾಗಿರುವುದು ಬಹಳ ಖುಷಿಯ ವಿಚಾರ. ಇಲ್ಲಿ ಶಾಲೆ ಮಾತ್ರವಲ್ಲದೆ ನರ್ಸರಿ ಟ್ರೈನಿಂಗ್ ಸೆಂಟರ್ ಇದೆ. ಇಲ್ಲಿ ತರಬೇತಿ ಪಡೆದವರಿಗೆ ದೇಶದಾದ್ಯಂತ ನರ್ಸರಿ ಟೀಚರ್ ಕೆಲಸ ಸಿಗುತ್ತದೆ. ಜೊತೆಗೆ ನರ್ಸರಿ ಶಾಲೆಗೆ ಸಂಬಂಧಿಸಿದ ಇನ್ನೂ ಹಲವು ಡಿಪ್ಲೊಮಾ ಕೋರ್ಸ್‌ಗಳು ಈ ಶಾಲೆಯಲ್ಲಿವೆ. ಬಹಳ ಸುಸಜ್ಜಿತವಾದ ಶಾಲೆ ಇದಾಗಿದ್ದು, ಇದರಿಂದಾಗಿ ಇಲ್ಲಿನ ಸುತ್ತಮುತ್ತಲಿನ ಜನರಿಗೆ ಬಹಳ ಅನುಕೂಲವಾಗಲಿದೆ ಎಂದರು.
ಸವಿ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶಾರದಾ ಪ್ರಸಾದ್ ಮಾತನಾಡಿ, ಈ ಶೈಕ್ಷಣಿಕ ವರ್ಷದಿಂದ ಆಪಲ್ ಪೈ ಶಾಲೆಗೆ ದಾಖಲಾತಿ ಆರಂಭವಾಗಿದೆ. ನಮ್ಮ ಶಾಲೆಯಲ್ಲಿ ಬಹಳಷ್ಟು ರೀತಿಯ ವಿನೂತನ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ನೀಡುತ್ತೇವೆ. ನಮ್ಮಲ್ಲಿ ನುರಿತ ಶಿಕ್ಷಕರು, ಸುಸಜ್ಜಿತ ತರಗತಿಗಳು, ಆಟದ ಸ್ಥಳ, ಆಟಿಕೆಗಳು ಎಲ್ಲವೂ ಇವೆ. ಜೊತೆಗೆ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ವ್ಯವಸ್ಥೆಯೂ ಇದೆ. ನಮ್ಮ ವಿನೂತನ ಪರಿಕಲ್ಪನೆಯನ್ನು ಇಷ್ಟಪಟ್ಟು ಬಹಳಷ್ಟು ಪೋಷಕರು ಈಗಾಗಲೇ ತಮ್ಮ ಮಕ್ಕಳನ್ನು ದಾಖಲು ಮಾಡಿದ್ದಾರೆ ಎಂದು ತಿಳಿಸಿದರು.
ಶಾಲೆಯ ಸಿಬ್ಬಂದಿ, ಆಡಳಿತ ವರ್ಗ, ಪೋಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.