ಮೈಸೂರಿನ ಅಮೃತ ಕೃಪ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

ಮೈಸೂರು:17 ನವೆಂಬರ್ 2021

ನಂದಿನಿ

  • ಮೈಸೂರಿನ ಅಮೃತ ಕೃಪ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
  • ಈ ಹೊಸ ಆಸ್ಪತ್ರೆಯಲ್ಲಿ ವಾರ್ಷಿಕ 36,000 ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ
  • ಇಲ್ಲಿ ಎಲ್ಲಾ ಅತ್ಯಾಧುನಿಕ ವೈದ್ಯಕೀಯ ಪರಿಕರಗಳು ಇರಲಿವೆ
  • ಕೊಚ್ಚಿಯ ಅಮೃತ ಆಸ್ಪತ್ರೆಯಿಂದ ಟೆಲಿಕನ್ಸಲ್ವೇಶನ್ ಸೌಲಭ್ಯ
  • ಮಾತಾ ಅಮೃತಾನಂದಮಯಿ ಮಠದ ಮಾಲೀಕತ್ವ ಮತ್ತು ನಿರ್ವಹಣೆ

ಎಲ್ಲರಿಗೂ ಆರೋಗ್ಯ ಆರೈಕೆ ನೀಡುವ ಉದ್ದೇಶದಿಂದ ಮಾತಾ ಅಮೃತಾನಂದಮಯಿ ಮಠವು ಮೈಸೂರಿನಲ್ಲಿ ರೂಪನಗರದಲ್ಲಿರುವ ತನ್ನ ಅಮೃತಕೃಪ ಆಸ್ಪತ್ರೆ ಆವರಣದಲ್ಲಿ 50 ಹಾಸಿಗೆಗಳ ಸಮಗ್ರ ಮತ್ತು ಅತ್ಯುತ್ಕೃಷ್ಠವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಿದೆ. ಎನ್‌ಬಿಎಚ್ ಮಾನದಂಡಗಳ ಪ್ರಕಾರ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಆಸ್ಪತ್ರೆಯ ಈಗಿನ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ರೋಗಿಗಳಿಗೆ ಇನ್ನೂ ಹೆಚ್ಚಿನ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ.ಅಮೃತಕೃಪ ಆಸ್ಪತ್ರೆಯು ಕೊಚ್ಚಿಯಲ್ಲಿರುವ ಅಮೃತ ಆಸ್ಪತ್ರೆಯ ಹೆಮ್ಮೆಯ ಅಂಗಸಂಸ್ಥೆಯಾಗಿದೆ. ಈ ಆಸ್ಪತ್ರೆಯನ್ನು ಮೈಸೂರಿನಲ್ಲಿ 2011 ರಿಂದ 15 ಹಾಸಿಗೆಗಳ ಸೇವೆಯೊಂದಿಗೆ ನಿರ್ವಹಣೆ ಮಾಡಲಾಗುತ್ತಿದೆ.

ನಿರ್ಮಾಣವಾಗುತ್ತಿರುವ ಈ ಹೊಸ ಆಸ್ಪತ್ರೆಯಲ್ಲಿ ವಾರ್ಷಿಕ 36,000 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಇದ್ದು, 66,000 ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಅತ್ಯಾಧುನಿಕ ವ್ಯವಸ್ಥೆಗಳು, ಬ್ಯಾಂಪ್ ಮತ್ತು ಲಿಫ್ಟ್ ಸೌಲಭ್ಯಗಳಿವೆ. ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಇಎನ್‌ಟಿ, ನೇತ್ರ ಚಿಕಿತ್ಸೆ, ಆರ್ಥೋಪಿಡಿಕ್ಸ್ ಮತ್ತು ಕಮ್ಯುನಿಟಿ ಮೆಡಿಸಿನ್, ಪ್ರಸೂತಿ ಮತ್ತು ಸ್ತ್ರೀರೋಗ ಸೇರಿದಂತೆ ಎಲ್ಲಾ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ಲಾಸ್ಟಿಕ್ ಸರ್ಜರಿ, ಯೋರೋಲಾಜಿ, ನೆಸ್ಕೋಲಾಜಿ, ನ್ಯೂರೋಸರ್ಜರಿ, ಆಂಕೋಸರ್ಜರಿ ಮತ್ತು ಪ್ರಿವೆಂಟಿವ್ ಕಾರ್ಡಿಯೋಲಾಜಿ ಸೇರಿದಂತೆ ಇನ್ನಿತರೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳು ಇರಲಿವೆ.

ಈ ಬಗ್ಗೆ ಮಾತನಾಡಿದ ಅಮೃತಕೃಪ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕಾಸ್ ಮೋದಿ ಅವರು, “ನಗರ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ವಿತರಣೆಯಲ್ಲಿ, ಲಭ್ಯತೆ ಮತ್ತು ಸುಲಭ ದರದ ಸೇವೆಗಳ ಲಭ್ಯತೆಯಲ್ಲಿ ಭಾರೀ ಅಂತರವಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಅಂತರವು ಇನ್ನಷ್ಟು ಹೆಚ್ಚಾಗಿದ್ದುದು ಕಂಡುಬಂದಿದೆ. ರೂಪ ನಗರದಿಂದ ಗದ್ದಿಗೆ (ಹುಣಸೂರು) ಕಡೆಗೆ 50 ಕಿಲೋಮೀಟರ್ ದೂರದಲ್ಲಿ ಸರಿಯಾದ ಆರೋಗ್ಯ ಸೌಲಭ್ಯ ಇಲ್ಲದ ಕಾರಣ ಈ ಪ್ರದೇಶದಲ್ಲಿ ಆರೋಗ್ಯ ಆರೈಕೆಗೆ ಸಂಬಂಧಿಸಿದಂತೆ ಅಗತ್ಯ ಮೂಲಸೌಕರ್ಯಗಳ ಅಗತ್ಯವಿತ್ತು. ಈ ಪ್ರದೇಶವು ಹಳ್ಳಿಗಳು ಮತ್ತು ಬುಡಕಟ್ಟು ಜನಸಂಖ್ಯೆಯಿಂದ ಕೂಡಿದೆ” ಎಂದು ತಿಳಿಸಿದರು.

ಈ ಹೊಸ ಆಸ್ಪತ್ರೆಯಲ್ಲಿ ಆರು ಹೊಸ ಒಪಿಡಿ ಕೊಠಡಿಗಳು, ಇವುಗಳಲ್ಲಿ ಪ್ರತ್ಯೇಕ ತುರ್ತು ಚಿಕಿತ್ಸಾ ವಿಭಾಗ, ಪ್ರತ್ಯೇಕ ಐಸಿಯು ಮತ್ತು ಸೋಂಕು ಪೀಡಿತ ರೋಗಗಳು, ಡಯಾಲಿಸಿಸ್‌ ಸೇರಿದಂತೆ ಇನ್ನಿತರೆ ಅತ್ಯಾಧುನಿಕ ಸೇವೆಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೇ, ರಿಟ್ರೋವೈರಲ್-ಪಾಸಿಟಿವ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಶಸ್ತ್ರಚಿಕಿತ್ಸಾ ಕೊಠಡಿಗಳು, ಐಸಿಯು, ಫಿಸಿಯೋಥೆರಪಿ ಘಟಕ ಸೇರಿ ಇನ್ನೂ ಅನೇಕ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತದೆ. ಗಾಯಗಳು ಮತ್ತು ಮೂಳೆ ಮುರಿತಕ್ಕೊಳಗಾದ ರೋಗಿಗಳಿಗೆಂದೇ ಪ್ರತ್ಯೇಕ ಚಿಕಿತ್ಸಾ ಸೌಲಭ್ಯವು ಸಹ ಇರಲಿದೆ. ಪಾಲ್ಸಿ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸಾ ಘಟಕ ಮತ್ತು ಆಯುರ್ವೇದ ಸಹಿತ ಸಾಂಪ್ರದಾಯಿಕ ಚಿಕಿತ್ಸಾ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ” ಎಂದು ತಿಳಿಸಿದರು.

ಅಮೃತಕೃಪ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಸೇವೆಗಳ ಮುಖ್ಯಸ್ಥರಾಗಿರುವ ಡಾ.ಸೌಮ್ಯ ಬಿ ಅವರು ಮಾತನಾಡಿ, “ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಒದಗಿಸಲು ಆಸ್ಪತ್ರೆಯಿಂದ ಸೂಕ್ತ ರೀತಿಯ ಸಂಪರ್ಕ ಸಾಧನಗಳನ್ನು ಕೈಗೊಳ್ಳಲಾಗಿರುತ್ತದೆ. ಗ್ರಾಮೀಣ ಸಮುದಾಯದಲ್ಲಿ ಮಹಿಳಾ ಸಬಲೀಕರಣದ ಹೊರತಾಗಿ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಿಂದ ಬಂದಿರುವ ದಕ್ಷ ಅರೆ ವೈದ್ಯಕೀಯ ಸಿಬ್ಬಂದಿ ತಂಡವನ್ನು ರಚನೆ ಮಾಡುವುದರ ಜೊತೆಗೆ ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಕೌಶಲ್ಯಗಳಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡುವತ್ತ ಗಮನಹರಿಸಿದೆ” ಎಂದರು.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಆಸ್ಪತ್ರೆಯು ಕೊಚ್ಚಿನ ಅಮೃತ ಆಸ್ಪತ್ರೆಯೊಂದಿಗೆ ಟೆಲಿಕನ್ಸಲ್ವೇಶನ್ ಸೇವೆಯನ್ನೂ ಕಲ್ಪಿಸುತ್ತಿದೆ. ಇದರಲ್ಲಿ ಪ್ರಮುಖವಾಗಿ ಪೀಡಿಯಾಟ್ರಿಕ್ ಗ್ಯಾಸ್ಟೋಎಂಟರಾಲಾಜಿ, ಪೀಡಿಯಾಟ್ರಿಕ್ ನ್ಯೂರೋಲಾಜಿ ಮತ್ತು ಪೀಡಿಯಾಟ್ರಿಕ್ ಕಾರ್ಡಿಯಾಲಾಜಿಯಂತಹ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುತ್ತಿದೆ.

ಈ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಅಮೃತಕೃಪ ಆಸ್ಪತ್ರೆ ಆವರಣದಲ್ಲಿ ಭೂಮಿ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಮೃತಾನಂದಮಯಿ ಆಸ್ಪತ್ರೆಯ ಆಡಳಿತಾಧಿಕಾರಿ ಬ್ರಹ್ಮಾಚಾರಿ ಪ್ರಸಾದಾಮೃತ ಚೈತನ್ಯಜೀ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ, ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್‌, ಬಿಎನ್‌ಪಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥನ್ ಮತ್ತು ಖ್ಯಾತ ವಕೀಲರಾದ ಶ್ಯಾಮ್ ಭಟ್ ಇದ್ದರು.

Leave a Reply

Your email address will not be published. Required fields are marked *