ವಿಧಾನ ಪರಿಷತ್ ಚುನಾವಣೆ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಯಾಗಿರಬೇಕು ಎಂಬ ಕಾನೂನು ತರಬೇಕು:ಸಿ.ಕೆ.ಬಾಲಮನೋಹರ

ಸಾಲಿಗ್ರಾಮ:16 ನವೆಂಬರ್ 2021 

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವವರು ಯಾವುದಾದರೂ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿ ಯಾಗಿರಬೇಕು ಎಂಬ ನಿಯಮವನ್ನು ಚುನಾವಣಾ ಆಯೋಗ ಜಾರಿಗೊಳಿಸಬೇಕೆಂದು ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಕೆ.ಬಾಲಮನೋಹರ ಒತ್ತಾಯಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವವರಲ್ಲಿ ಬಹುತೇಕ ಮಂದಿಗೆ ಸ್ಥಳೀಯ ಸಂಸ್ಥೆಯ ಬಗ್ಗೆ ಅರಿವಿಲ್ಲದಿದ್ದರೂ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡು ಸ್ಪರ್ಧಿಸುವ ಮೂಲಕ ಚುನಾಯಿತರಾಗುತ್ತ ಬರುತ್ತಿದ್ದಾರೆ. ಈ ರೀತಿ ಆಯ್ಕೆಯಾದವರು ನಂತರದ ದಿನಗಳಲ್ಲೂ ಕೂಡ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯ್ತಿ. ತಾಲ್ಲೂಕು ಪಂಚಾಯ್ತಿ. ಗ್ರಾಮ ಪಂಚಾಯ್ತಿ. ಪಟ್ಟಣ ಪಂಚಾಯ್ತಿ. ಮಹಾನಗರ ಪಾಲಿಕೆ. ಪುರಸಭೆ. ನಗರಸಭೆಗಳ ಸದಸ್ಯರುಗಳೊಂದಿಗೆ ಯಾವುದೇ ರೀತಿಯ ಸಭೆ. ಸಂವಾದ. ವಿಚಾರ ಸಂಕಿರಣಗಳನ್ನು ನಡೆಸದೆ ಹಾಗೂ ವಿಧಾನ ಪರಿಷತ್ ನಿಂದ ಸ್ಥಳೀಯ ಸಂಸ್ಥೆಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಕೊಡುವ ಕೆಲಸವನ್ನೂ ಮಾಡದೆ ತಮ್ಮ ಅಧಿಕಾರಾವಧಿಯನ್ನು ಮುಗಿಸುತ್ತಾರೆ ಇಂಥ ಸದಸ್ಯರಿಂದ ಸ್ಥಳೀಯ ಸಂಸ್ಥೆಗಳಿಗೆ ಲಾಭವೇನು ಎಂದು ಪ್ರಶ್ನಿಸಿದರು.

ಸಹಕಾರ ಕ್ಷೇತ್ರದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಸಹಕಾರಿ ಸಂಸ್ಥೆಗಳಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಸ್ಪರ್ಧಿಸುವವರು ತಮ್ಮ ಸ್ಥಳೀಯ ಸಹಕಾರಿ ಸಂಸ್ಥೆಯಲ್ಲಿ ಸದಸ್ಯರಾಗಿರಬೇಕು ಎಂಬ ನಿಯಮವಿದೆ. ಈ ಮಾದರಿಯಲ್ಲಿ ಚುನಾವಣಾ ಆಯೋಗ ಹಾಗೂ ಸರ್ಕಾರ ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕೇಗೌಡ ಮಾತನಾಡಿ ವಿಧಾನ ಪರಿಷತ್ ಸದಸ್ಯರುಗಳು ತಮ್ಮ ಅನುದಾನದ ಅನುಷ್ಠಾನದ ಬಗ್ಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ರಾಂಪುರ ಲೋಕೇಶ್ ಮಾತನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಕನಿಷ್ಠ ವೇತನವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ. ಮಂಡಲ ಪಂಚಾಯಿತಿ ಮಾಜಿ ಸದಸ್ಯ ಚುಂಚನಕಟ್ಟೆ ಸಿದ್ದಲಿಂಗ ನಾಯ್ಕ. ಮುಖಂಡ ಶಂಕರೇಗೌಡ ಹಾಜರಿದ್ದರು.

Leave a Reply

Your email address will not be published. Required fields are marked *