ಮೈಸೂರಿನ ಲೀಡೋ ಚಿತ್ರಮಂದಿರಕ್ಕೆ ಅಯೋಗ್ಯ-2 ಚಿತ್ರತಂಡ ಭೇಟಿ 50 ದಿನ ಪೂರೈಸಿದ ಚಿತ್ರ, ಸಂಭ್ರಮಿಸಿ ಅಭಿಮಾನಿಗಳು

ನಂದಿನಿ ನಾಯಕ್ ಮೈಸೂರು

ಮೈಸೂರಲ್ಲಿ ಅಯೋಗ್ಯ-2ಗೆ 50ರ ಸಂಭ್ರಮ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಲೀಡೋ ಚಿತ್ರಮಂದಿರದಲ್ಲಿ ಅಯೋಗ್ಯ-2 ಚಿತ್ರ 50ದಿನ ಪೂರೈಸಿದ ಹಿನ್ನೆಲೆಯಲ್ಲಿ ನಟ ಸತೀಶ್ ನಿನಾಸಂ ಹಾಗೂ ನಿರ್ದೇಶಕ ಎಸ್‌.ಮಹೇಶ್‌ ಕುಮಾರ್‌ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಿದರು.


ಮಧ್ಯಾಹ್ನ ಲೀಡೋ ಚಿತ್ರಮಂದಿರಕ್ಕೆ ಭೇಟಿ ನೀಡಿದ ಚಿತ್ರತಂಡವನ್ನು ಅಭಿಮಾನಿಗಳು ಪಟಾಕಿ ಸಿಡಿಸಿ, ಹಾರ ಹಾಕಿ ಬರ ಮಾಡಿಕೊಂಡರು. ಈ ವೇಳೆ ಬೃಹತ್‌ ಕೇಕ್‌ ಕತ್ತರಿಸುವ ಮೂಲಕ 50ರ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಆಚರಿಸಿದರು.

ಈ ವೇಳೆ ಮಾತನಾಡಿದ ನಾಯಕ ನಟ ಸತೀಶ್‌ ನಿನಾಸಂ ಮಾತನಾಡಿ, ರಾಜ್ಯದಲ್ಲಿ ಕಲಾವಿದರನ್ನು ಎಲ್ಲಿ ಕೈ ಬಿಟ್ಟರೂ ಮೈಸೂರಿನ ಜನತೆ ಎಂದೆಂದಿಗೂ ಕೈ ಬಿಡುವುದಿಲ್ಲ. ಇಂದಿನ ಪೈಪೋಟಿ ದಿನಗಳಲ್ಲಿ ಒಂದೆರಡು ವಾರ ಥಿಯೇಟರ್‌ಗಳಲ್ಲಿ ಸಿನಿಮಾ ಉಳಿಯುವುದೇ ದೊಡ್ಡ ಸಾಹಸವಾಗಿದೆ. ಇಂತಹ ಸನ್ನಿವೇಶದಲ್ಲಿ 50ದಿನಗಳ ನಮ್ಮ ಚಿತ್ರ ಉಳಿಯಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಚಾರ ನಡೆಸಿ ಜನರನ್ನು ಬರುವಂತೆ ಮಾಡಿದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಅಯೋಗ್ಯ 3 ಚಿತ್ರವನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸಿ ಇದೇ ತಂಡವನ್ನು ಸಹ ಅದರಲ್ಲಿ ಭಾಗವಹಿಸಿ ಹೊಸದೊಂದು ಮನರಂಜನೆಯನ್ನು ಜನರಿಗೆ ನೀಡಲಾಗುವುದು. ಮೈಸೂರಿನ ಜನತೆ ಈ ಸಂಭ್ರಮವನ್ನು ಸಮರ್ಪಿಸುತ್ತಿದ್ದು, ಇದಕ್ಕೆ ಕಾರಣರಾದ ಅಭಿಮಾನಿಗಳ ಅಭಿಮಾನಕ್ಕೆ ಚಿರಋಣಿ ಆಗಿರುತ್ತೇನೆಂದರು.
ನಿರ್ದೇಶಕ ಎಸ್.ಮಹೇಶ್ ಕುಮಾರ್ ಮಾತನಾಡಿ, 27ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ 50ದಿನಗಳ ಪೂರೈಸಿದೆ. ಈ ಅವಧಿಯಲ್ಲಿ ಅನೇಕ ದೊಡ್ಡ ಚಿತ್ರಗಳು ಬಿಡುಗಡೆಯಾದರೂ ಕನ್ನಡದ ಜನತೆ ಸಿನಿಮಾ ಕೈ ಹಿಡಿದಿದ್ದಾರೆ. ನಿರ್ಮಾಪಕ ಮುನ್ನೇಗೌಡ ನನ್ನ ನಂಬಿ ಸಿನಿಮಾ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಅಯೋಗ್ಯ2 ಮಾಡುವುದಕ್ಕೆ ಸಾಕಷ್ಟು ವರ್ಷ ಕಾದಿದ್ದೇವೆ. ಆದರೆ, ಅಯೋಗ್ಯ3ಗೆ ಅಷ್ಟು ವಿಳಂಬ ಮಾಡುವುದಿಲ್ಲ. ಸದರಿ ಚಿತ್ರದಲ್ಲಿ ಹಿರಿಯರಾದ ರವಿಚಂದ್ರನ್‌, ನಟಿ ರಚಿತರಾಮ್‌, ಸಾಧುಕೋಕಿಲ ಸೇರಿ ಇಡೀ ತಂಡ ಬೆಂಬಲವಾಗಿ ನಿಂತಿದ್ದಕ್ಕೆ ಈ ಯಶಸ್ಸು ಸಿಕ್ಕಿದೆ. ಕಥೆಯೊಂದು ಚೆನ್ನಾಗಿದ್ದರೆ ಸಾಕು ಚಿತ್ರ ಯಶಸ್ಸು ನಮ್ಮದಾಗುತ್ತದೆ. ಹೊರತಾಗಿ ಎಷ್ಟೇ ದೊಡ್ಡ ಬಜೆಟ್‌ ಸಿನಿಮಾ ಮಾಡಿದರೂ ಸಿನಿಮಾ ಯಶಸ್ವಿಯಾಗುವುದು ಕಷ್ಟ ಎಂಬುದನ್ನು ಸಾಬೀತು ಮಾಡಿ ತೋರಿದ್ದಾರೆಂದರು.
ನಟ ಶಿವರಾಜ್ ಕೆ.ಆರ್.ಪೇಟೆ ಮಾತನಾಡಿ, ಎಲ್ಲರಿಗೂ ಮುಂಚಿತವಾಗಿ ನಾಡಹಬ್ಬ ದಸರೆಯ ಶುಭಾಶಯಗಳು. ದಸರೆ ಸಂಭ್ರಮದಲ್ಲಿ ನಮ್ಮ ಸಿನಿಮಾ ಸಂಭ್ರಮ ಆಚರಿಸುತ್ತಿರುವುದು ನಿಜಕ್ಕೂ ಸಂತಸ ವಿಷಯವಾಗಿದೆ. ನಿರ್ದೇಶಕರಾದ ಮಹೇಶ್‌ ಕುಮಾರ್‌ ಹಾಗೂ ನಟರಾದ ಸತೀಶ್‌ ನಿನಾಸಂ ತಮ್ಮ ತಂಡದಲ್ಲಿ ನಮ್ಮನ್ನೂ ಸೇರಿಸಿಕೊಂಡಿರುವುದು ಸ್ವಾಗತಾರ್ಹ. ಚಿತ್ರ ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು. ನಟ ಗಿರೀಶ್ ಶಿವಣ್ಣ ಇನ್ನಿತರರು ಇದ್ದರು.

 

Leave a Reply

Your email address will not be published. Required fields are marked *