ಮೈಸೂರಿನಲ್ಲಿ 99 ಕೊಠಡಿಗಳ ‘ವೆಲ್ಕಮ್ಹೋಟೆಲ್’ ಸ್ಥಾಪನೆಗೆ ಐಟಿಸಿ ಹೋಟೆಲ್ಸ್ ಒಪ್ಪಂದ

ನಂದಿನಿ ಮನುಪ್ರಸಾದ್ ನಾಯಕ್

 

*ಮೈಸೂರಿನಲ್ಲಿ 99 ಕೊಠಡಿಗಳ ‘ವೆಲ್ಕಮ್ಹೋಟೆಲ್’ ಸ್ಥಾಪನೆಗೆ ಐಟಿಸಿ ಹೋಟೆಲ್ಸ್ ಒಪ್ಪಂದ*


*ಮೈಸೂರು:* ಮೈಸೂರಿನಲ್ಲಿ 99 ಕೊಠಡಿಗಳ ‘ವೆಲ್ಕಮ್ಹೋಟೆಲ್’ ನಿರ್ಮಾಣ ಹಾಗೂ ನಿರ್ವಹಣೆಗೆ ಐಟಿಸಿ ಹೋಟೆಲ್ಸ್ ಲಿಮಿಟೆಡ್ ನಿರ್ವಹಣಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ‘ವೆಲ್ಕಮ್ಹೋಟೆಲ್’ ಬ್ರ್ಯಾಂಡ್ ವಿಸ್ತರಣೆಗೆ ಮತ್ತೊಂದು ಹೆಜ್ಜೆ ಇಟ್ಟಿದೆ.

ಮೈಸೂರಿನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮದ ಆಕರ್ಷಣೆ ಹಾಗೂ ಬೆಳೆಯುತ್ತಿರುವ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಹೋಟೆಲ್ ಅಭಿವೃದ್ಧಿಪಡಿಸಲಾಗುತ್ತಿದೆ. ವ್ಯಾಪಾರ ಹಾಗೂ ಪ್ರವಾಸಿ ಉದ್ದೇಶದಿಂದ ಆಗಮಿಸುವ ಅತಿಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗುಣಮಟ್ಟದ ಆತಿಥ್ಯ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ಹೋಟೆಲ್ನಲ್ಲಿ 99 ಸುಸಜ್ಜಿತ ಕೊಠಡಿಗಳು ಮತ್ತು ಸೂಟ್ಗಳು, ದಿನಪೂರ್ತಿ ಕಾರ್ಯನಿರ್ವಹಿಸುವ ರೆಸ್ಟೋರೆಂಟ್, ಲಾಬಿ ಕ್ಯಾಫೆ, ಸುಮಾರು 5,500 ಚದರ ಅಡಿ ವಿಸ್ತೀರ್ಣದ ಒಳಾಂಗಣ ಬ್ಯಾಂಕ್ವೆಟ್ ಮತ್ತು ಕಾರ್ಯಕ್ರಮಗಳ ಸ್ಥಳ, ಈಜುಕೊಳ ಹಾಗೂ ಫಿಟ್ನೆಸ್ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ಮದುವೆಗಳು, ಸಾಮಾಜಿಕ ಸಮಾರಂಭಗಳು ಹಾಗೂ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಇದು ಪ್ರಮುಖ ತಾಣವಾಗಲಿದೆ.

ಈ ಕುರಿತು ಐಟಿಸಿ ಹೋಟೆಲ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಚಡ್ಡಾ ಮಾತನಾಡಿ, “ಮೈಸೂರು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮದ ಆಕರ್ಷಣೆ ಹಾಗೂ ಬೆಳೆಯುತ್ತಿರುವ ಆರ್ಥಿಕ ಸಾಮರ್ಥ್ಯದಿಂದ ದಕ್ಷಿಣ ಭಾರತದ ಪ್ರಮುಖ ನಗರವಾಗಿದೆ. ‘ವೆಲ್ಕಮ್ಹೋಟೆಲ್ ಮೈಸೂರು’ ಮೂಲಕ ಕರ್ನಾಟಕದಲ್ಲಿ ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸುವುದರೊಂದಿಗೆ, ಆಧುನಿಕ ಸೌಲಭ್ಯಗಳು ಮತ್ತು ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಒಳಗೊಂಡ ವಿಶಿಷ್ಟ ಆತಿಥ್ಯ ಅನುಭವವನ್ನು ಅತಿಥಿಗಳಿಗೆ ನೀಡಲಿದ್ದೇವೆ,” ಎಂದು ತಿಳಿಸಿದ್ದಾರೆ.

ಸುಮೇರು ಹಾಸ್ಪಿಟಾಲಿಟಿಯ ವ್ಯವಸ್ಥಾಪಕ ಪಾಲುದಾರ ಸುನಾಗ್ ಬಿ. ಎಸ್. ಮಾತನಾಡಿ, “ಮೈಸೂರಿನೊಂದಿಗೆ ನಮಗೆ ವಿಶೇಷ ಭಾವನಾತ್ಮಕ ನಂಟಿದೆ. ಐಟಿಸಿ ಹೋಟೆಲ್ಸ್ನೊಂದಿಗೆ ಕೈಜೋಡಿಸಿರುವುದು ಸಂತಸದ ಸಂಗತಿ. ನಗರದ ಪರಂಪರೆ ಮತ್ತು ಆಧುನಿಕ ಆತಿಥ್ಯವನ್ನು ಒಟ್ಟುಗೂಡಿಸುವ ಈ ಯೋಜನೆ ಸ್ಥಳೀಯ ಸಮುದಾಯದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಲಿದೆ,” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *